ADVERTISEMENT

ಧಾರ್ಮಿಕ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 5:05 IST
Last Updated 6 ಜನವರಿ 2021, 5:05 IST
ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿಯ ದೇವಸ್ಥಾನ, ದರ್ಗಾ ಮತ್ತು ಚರ್ಚ್ ಆವರಣ ಹಾಗೂ ಸುತ್ತಮುತ್ತ ಪ್ರದೇಶವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿಯ ದೇವಸ್ಥಾನ, ದರ್ಗಾ ಮತ್ತು ಚರ್ಚ್ ಆವರಣ ಹಾಗೂ ಸುತ್ತಮುತ್ತ ಪ್ರದೇಶವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು   

ಶಿಡ್ಲಘಟ್ಟ: ‘ಬೆಳ್ಳೂಟಿ ಗೇಟ್ ನಮ್ಮ ತಾಲ್ಲೂಕಿನಲ್ಲಿಯೇ ವಿಶಿಷ್ಟವಾದ ಸರ್ವಧರ್ಮಗಳ ಸಮನ್ವಯ ಸ್ಥಳ. ಇಲ್ಲಿ ದೇವಸ್ಥಾನ, ದರ್ಗಾ ಮತ್ತು ಚರ್ಚ್ ಹತ್ತಿರದಲ್ಲಿದ್ದು, ಎಲ್ಲರೂ ಕಲೆತು ಬಾಳ್ವೆ ನಡೆಸುವ ಸಂದೇಶವನ್ನು ಸಾರುತ್ತಿವೆ. ಧಾರ್ಮಿಕ ಕೇಂದ್ರಗಳ ಪರಿಸರ ಸ್ವಚ್ಛವಾಗಿರಬೇಕೆಂಬ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪರಿಕಲ್ಪನೆಯಂತೆ ಎಲ್ಲರೂ ಒಗ್ಗೂಡಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ’ ಎಂದು ತಾಲ್ಲೂಕು ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ತಿಳಿಸಿದರು.

ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿಯ ದೇವಸ್ಥಾನ, ದರ್ಗಾ ಮತ್ತು ಚರ್ಚ್ ಆವರಣ ಹಾಗೂ ಸುತ್ತಮುತ್ತ ಪ್ರದೇಶವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಬೆಳ್ಳೂಟಿ ಗ್ರಾಮಸ್ಥರ ಸಹಯೋಗದಲ್ಲಿ ಆಯೋಜಿಸಿದ್ದ ‘ಧಾರ್ಮಿಕ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ಮನಸ್ಸಿನ ಸ್ವಚ್ಛತೆಗೆ ಪರಿಸರ ಸ್ವಚ್ಛತೆಯೂ ಪ್ರಧಾನವಾಗಿದೆ. ಅಂತೆಯೇ ಮನಃಶಾಂತಿಗೆ ಹಾಗೂ ಪ್ರಶಾಂತ ವಾತಾವರಣದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಬರುವ ಭಕ್ತರಿಗೆ ದೇವಾಲಯದ ಪರಿಸರ ಸ್ವಚ್ಛವಾಗಿರಬೇಕೆಂದು ಆಶಿಸಿ ದೇಗುಲಗಳ ಪರಿಸರವನ್ನು ಸ್ವಚ್ಛಗೊಳಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಒಗ್ಗೂಡಿದ್ದಾರೆ’ ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಬೆಳ್ಳೂಟಿ ಮಾತನಾಡಿ, ‘ದೇಗುಲದ ಪರಿಸರದಲ್ಲಿನ ಸ್ವಚ್ಛತೆಯೇ ದೇವರಿಗೆ ನಾವು ಸಲ್ಲಿಸುವ ಮೊದಲ ಪೂಜೆಯಾಗಿದೆ. ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿ ಎರಡೂ ಅತ್ಯಗತ್ಯ. ಆರೋಗ್ಯ, ಶಿಕ್ಷಣ ಮತ್ತು ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿ ನಮ್ಮ ಹಳ್ಳಿ ಸೇರಿದಂತೆ ಗ್ರಾಮ ಪಂಚಾಯಿತಿಯನ್ನು ಮಾದರಿ ಮಾಡುವ ಆಶಯಕ್ಕೆ ಸಮಾನಮನಸ್ಕರು ಜೊತೆಗೂಡಿದ್ದಾರೆ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಬೆಳ್ಳೂಟಿ ಹಾಗೂ ಸುತ್ತಲಿನ ಕೆಲವಾರು ಗ್ರಾಮಸ್ಥರು ಜೊತೆಗೂಡಿ ಸ್ವಚ್ಛತಾ ಕಾರ್ಯವನ್ನು ನಡೆಸಿ, ಸುಂದರವಾದ ಬಣ್ಣಬಣ್ಣದ ರಂಗೋಲಿಗಳನ್ನು ರಚಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾತ್ಯಾಯಿನಿ, ಸದಸ್ಯರಾದ ಪ್ರೇಮ ಆನಂದ, ನೇತ್ರವತಿ ಮುರಳಿ, ಎಪಿಎಂಸಿ ಉಪಾಧ್ಯಕ್ಷ ಬೆಳ್ಳೂಟಿ ವೆಂಕಟೇಶ್, ಗ್ರಾಮಸ್ಥರಾದ ಚಂದ್ರಣ್ಣ, ದೇವರಾಜು, ಬಿ.ಎಂ.ರಮೇಶ್, ಆನಂದ್, ಚಿಕ್ಕಮಾರಪ್ಪ, ರಾಮಾಂಜನಪ್ಪ, ಚನ್ನಕೃಷ್ಣ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಮೇಲ್ವಿಚಾರಕಿ ಜ್ಯೋತಿ, ಸೇವಾಪ್ರತಿನಿಧಿ ವೆಂಕಟಲಕ್ಷ್ಮಿ, ನಳಿನ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.