ADVERTISEMENT

ಕೋಚಿಮುಲ್ ವಿಭಜನೆ ಇಂದಿನ ಅಗತ್ಯ

ಕೋಚಿಮುಲ್‌ ನಿರ್ದೇಶಕ ಎನ್.ಸಿ.ವೆಂಕಟೇಶ್‌ ಅವರಿಗೆ ಆರೋಪಗಳನ್ನು ತಳ್ಳಿ ಹಾಕಿದ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 12:19 IST
Last Updated 14 ಮಾರ್ಚ್ 2020, 12:19 IST
ಕೆ.ವಿ.ನಾಗರಾಜ್
ಕೆ.ವಿ.ನಾಗರಾಜ್   

ಚಿಕ್ಕಬಳ್ಳಾಪುರ: ‘ಸಹಕಾರ ಕ್ಷೇತ್ರದಲ್ಲಿ ಜ್ಞಾನವಿಲ್ಲದ ಕೆಲವರು ಅವಿಭಜಿತ ಕೋಲಾರ ಜಿಲ್ಲೆಯಲ್ಲಿರುವ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು (ಕೋಚಿಮುಲ್‌) ಕೋಲಾರದಿಂದ ಪ್ರತ್ಯೇಕಿಸಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯ ಹೈನುಗಾರರ ಹಿತದೃಷ್ಟಿಯಿಂದ ಪ್ರತ್ಯೇಕ ಚಿಕ್ಕಬಳ್ಳಾಪುರ ಒಕ್ಕೂಟ ರಚನೆ ಅಗತ್ಯವಿದೆ’ ಎಂದು ಕೋಚಿಮುಲ್ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋಚಿಮುಲ್ ವಿಭಜನೆಯಿಂದ ಜಿಲ್ಲೆಯ ಹೈನುಗಾರರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ. ಒಕ್ಕೂಟದ ಹಿತದೃಷ್ಟಿಯಿಂದ ಸದ್ಯದ ಮಟ್ಟಿಗೆ ಕೋಲಾರದ ಗೋಲ್ಡನ್ ಡೆೇರಿ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಸರ್ಕಾರ ತಿಳಿಸಿದೆ. ಆದರೆ ಕೆಲ ನಿರ್ದೇಶಕರು ಸುಳ್ಳು ಹೇಳಿಕೆಗಳ ಮೂಲಕ ರೈತರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಶಿಡ್ಲಘಟ್ಟದಲ್ಲಿ ಕೋಚಿಮುಲ್‌ ಜಾಗ ಒದಗಿಸಿದರೆ ಕೆಎಂಎಫ್‌ ಪಶು ಆಹಾರ ಘಟಕ ನಿರ್ಮಿಸಲಿದೆ. ಕೋಚಿಮುಲ್‌ ಆ ಘಟಕ ನಿರ್ಮಿಸುತ್ತಿದೆ ಎಂಬ ಹೇಳಿಕೆಯೇ ಹಾಸ್ಯಾಸ್ಪದ. ಹಾಲು ಉತ್ಪಾದನೆ ಕುಸಿತಗೊಂಡಿರುವ ಪ್ರಸ್ತುತ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಿಬಿರ ಕಚೇರಿಗೆ ಹೊಸ ಕಟ್ಟಡ ನಿರ್ಮಿಸುವ ಅಗತ್ಯವಾದರೂ ಏನಿತ್ತು? ಒಕ್ಕೂಟ ಪ್ರತ್ಯೇಕವಾದರೆ ಮೆಗಾ ಡೇರಿಯ ಸಾಲ ಯಾರು ತೀರಿಸುತ್ತಾರೆ ಎಂದು ಕೆಲ ನಿರ್ದೇಶಕರು ಪ್ರಶ್ನಿಸುತ್ತಿದ್ದಾರೆ. ಒಂದೊಮ್ಮೆ, ಗೋಲ್ಡನ್ ಡೇರಿ ನಿರ್ಮಾಣವಾದ ಮೇಲೆ ಒಕ್ಕೂಟ ವಿಭಜನೆಯಾದರೆ ಗೋಲ್ಡನ್ ಡೇರಿ ಸಾಲ ಹೇಗೆ ತೀರಿಸುತ್ತಾರೆ’ ಎಂದು ಮರು ಪ್ರಶ್ನಿಸಿದರು.

ADVERTISEMENT

‘ಕೋಚಿಮುಲ್ ಷೇರುಗಳಲ್ಲಿ 35 ಕೋಟಿ ರು.ಚಿಕ್ಕಬಳ್ಳಾಪುರದ ಪಾಲಿದೆ. 15 ಕೋಟಿ ರೂಪಾಯಿಗೂಹೆಚ್ಚು ಅಭಿವೃದ್ಧಿ ನಿಧಿ ಇದೆ. ಮೀಸಲು ನಿಧಿಯಲ್ಲಿಯೂ ನಮ್ಮ ಪಾಲಿದೆ. ಇಷ್ಟೆಲ್ಲ ಆಸ್ತಿ ಹೊಂದಿರುವ ನಮಗೆ 59 ಕೋಟಿ ರು. ಸಾಲ ತೀರಿಸುವುದು ಸಮಸ್ಯೆಯೇ ಅಲ್ಲ. ಕೇವಲ ಎರಡು ಲಕ್ಷ ಲೀಟರ್‌ ಹಾಲು ಉತ್ಪಾದಿಸುವ ಚಾಮರಾಜನಗರ, ಬರೀ 50 ಸಾವಿರ ಲೀಟರ್ ಹಾಲು ಉತ್ಪಾದಿಸುವ ಬೀದರ್ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಪ್ರತ್ಯೇಕ ಹಾಲು ಒಕ್ಕೂಟಗಳಿವೆ. ಬೇಸಿಗೆಯಲ್ಲಿಯೂ 3.50 ಲಕ್ಷ ಲೀಟರ್‌ ಉತ್ಪಾದಿಸುವ ನಮ್ಮ ಜಿಲ್ಲೆಯಲ್ಲಿ ಪ್ರತ್ಯೇಕ ಒಕ್ಕೂಟ ಮಾಡಿದರೆ ಯಾವುದೇ ತೊಂದರೆ ಇಲ್ಲ’ ಎಂದು ಹೇಳಿದರು.

ಕೋಚಿಮುಲ್ ಮಾಜಿ ಅಧ್ಯಕ್ಷ ಜೆ.ಕಾಂತರಾಜ್ ಮಾತನಾಡಿ, ‘ಕೋಚಿಮುಲ್ ವಿಭಜನೆ ಕುರಿತು 2015-–16ನೇ ಸಾಲಿನಲ್ಲಿ ನಡೆದ ಒಕ್ಕೂಟದ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜತೆಗೆ ಈ ಕುರಿತು ಚರ್ಚಿಸಲು ಸಮ್ಮಿಶ್ರ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಎನ್‌.ಎಚ್.ಶಿವಶಂಕರರೆಡ್ಡಿ ಅವರ ನೇತೃತ್ವದಲ್ಲಿಯೇ ಸಭೆಗಳನ್ನು ನಡೆಸಲಾಗಿದೆ’ ಎಂದು ತಿಳಿಸಿದರು.

‘ಇತ್ತೀಚಿಗೆ ಸಹಕಾರ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಆ ಸಭೆಯ ಆಹ್ವಾನವನ್ನು ಕೆಲ ನಿರ್ದೇಶಕರು ಸ್ವೀಕರಿಸಲಿಲ್ಲ. ಅವರನ್ನು ಹೊರತುಪಡಿಸಿದಂತೆ ಬಹುಪಾಲು ನಿರ್ದೇಶಕರು, ಮಾಜಿ ಅಧ್ಯಕ್ಷಕರು ಸಭೆಯಲ್ಲಿ ಭಾಗವಹಿಸಿ, ಒಕ್ಕೂಟ ವಿಭಜನೆ ಕುರಿತಂತೆ ಚರ್ಚೆ ನಡೆಸಲಾಗಿದೆ’ ಎಂದರು.

ಕೋಚಿಮುಲ್ ನಿರ್ದೇಶಕ ಕೆ.ಅಶ್ವತ್ಥರೆಡ್ಡಿ, ಸುನಂದಮ್ಮ, ಎಸ್.ವಿ.ಸುಬ್ಬಾರೆಡ್ಡಿ, ವಿ.ಮಂಜುನಾಥರೆಡ್ಡಿ, ಮಾಜಿ ಅಧ್ಯಕ್ಷ ಜೆ.ಎನ್.ರಾಜಗೋಪಾಲ್, ಎಸ್.ರಮೇಶ್, ಮಾಜಿ ನಿರ್ದೇಶಕ ಮುನಿಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.