ADVERTISEMENT

ಗ್ರಾ.ಪಂ ಸದಸ್ಯರಿಗೆ ಕಾಂಗ್ರೆಸ್ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 5:59 IST
Last Updated 8 ಜನವರಿ 2021, 5:59 IST
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿದ ಕಾಂಗ್ರೆಸ್ ‌ಕಾರ್ಯಕರ್ತರು ಮತ್ತು ಮುಖಂಡರು
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿದ ಕಾಂಗ್ರೆಸ್ ‌ಕಾರ್ಯಕರ್ತರು ಮತ್ತು ಮುಖಂಡರು   

ಗೌರಿಬಿದನೂರು: ‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳ ಅಥವಾ ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು’ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್ ರಾಷ್ಟ್ರದಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಜನಪರ ಮತ್ತು ಬಡವರ ಏಳಿಗೆಗೆ ಶ್ರಮಿಸುವ ಏಕೈಕ ಪಕ್ಷ. ದೇಶವು ಸ್ವಾತಂತ್ರ್ಯ ಪಡೆದ ಬಳಿಕ ದೇಶದ ಪರಿಸ್ಥಿತಿಯನ್ನು ಅರಿತ ಅಂದಿನ ಕಾಂಗ್ರೆಸ್ ಮುಖಂಡರು ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಅಂದಿನಿಂದ ಇಂದಿನವರೆಗೆ ಅಭಿವೃದ್ಧಿ ಹಾಗೂ ಸಮಾನತೆ ಸಿದ್ಧಾಂತದ ಮೇಲೆ ಪಕ್ಷ ಸಾಗುತ್ತಿದೆ. ಅದೇ ರೀತಿಯಾಗಿ ಗ್ರಾ.ಪಂ ಸದಸ್ಯರೂ ಕೂಡ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಜನರ ಋಣ ತೀರಿಸಬೇಕು’ ಎಂದರು.

ADVERTISEMENT

‘ತಾಲ್ಲೂಕಿನ ಜನತೆ ಹಣದ ಆಮಿಷ ಅಥವಾ ಜಾತಿಯ ಮೇಲಿನ ಪ್ರೀತಿಗೆ ತಮ್ಮ ಮತ ಮಾರಿಕೊಂಡಿಲ್ಲ ಎನ್ನುವುದನ್ನು ಇತಿಹಾಸ ತಿಳಿಸುತ್ತದೆ. ಒಂದೂವರೆ ದಶಕದಿಂದ ಕ್ಷೇತ್ರದಲ್ಲಿ ಅದೆಷ್ಟೋ ಹಣವಂತರು ಸಮಾಜ ಸೇವಕರ ಸೋಗಿನಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ತಾಲ್ಲೂಕಿನ ಜನ ಅವರಿಗೆ ಕಿಮ್ಮತ್ತು ನೀಡುತ್ತಿಲ್ಲ’ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ನಗರದ ಶನಿಮಹಾತ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣಿಗೆ ಮೂಲಕ ಸಾಗಿ ನದಿದಡ ಆಂಜನೇಯಸ್ವಾಮಿ ದೇವಾಲಯದ ಆವರಣಕ್ಕೆ ಸಾಗಿದರು.

ಬಳಿಕ ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ಪಕ್ಷದ ಬೆಂಬಲಿತ ಸದಸ್ಯರನ್ನು ಸನ್ಮಾನಿಸಲಾಯಿತು.

ಜಿ.ಪಂ. ಸದಸ್ಯೆ ಎ.ಅರುಂಧತಿ, ತಾ.ಪಂ ಅಧ್ಯಕ್ಷ ಆರ್.ಲೋಕೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಕೆಪಿಸಿಸಿ ಸದಸ್ಯ ಇಬ್ನಿ ಹಸನ್, ನಾನಾ ಸಾಬ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ, ನಗರಸಭೆ ಅಧ್ಯಕ್ಷೆ ಕೆ.ಎಂ.ಗಾಯಿತ್ರಿ ಬಸವರಾಜು, ಮುಖಂಡರಾದ ಅಶ್ವತ್ಥನಾರಾಯಣಗೌಡ, ಎಚ್.ಎನ್.ಪ್ರಕಾಶರೆಡ್ಡಿ, ಭಾರ್ಗವರೆಡ್ಡಿ, ಮಂಜನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.