ADVERTISEMENT

ಕಾಂಗ್ರೆಸ್, ಜೆಡಿಎಸ್‌ ರಾಜಕೀಯವಾಗಿ ದಿವಾಳಿ: ಡಾ.ಕೆ.ಸುಧಾಕರ್ ಟೀಕೆ

ಉಪ ಚುನಾವಣೆ ಪ್ರಚಾರ ಸಭೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 16:05 IST
Last Updated 20 ನವೆಂಬರ್ 2019, 16:05 IST
ತಾಲ್ಲೂಕಿನ ಚೀಮನಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಜಮೀನಿನಲ್ಲಿ ರಾಗಿ ತೆನೆ ಕಟಾವು ಮಾಡುವ ಮೂಲಕ ಮತಯಾಚಿಸಿದರು.
ತಾಲ್ಲೂಕಿನ ಚೀಮನಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಜಮೀನಿನಲ್ಲಿ ರಾಗಿ ತೆನೆ ಕಟಾವು ಮಾಡುವ ಮೂಲಕ ಮತಯಾಚಿಸಿದರು.   

ಚಿಕ್ಕಬಳ್ಳಾಪುರ: ‘ಕಾಂಗ್ರೆಸ್‌, ಜೆಡಿಎಸ್ ಎರಡೂ ಪಕ್ಷಗಳು ರಾಜಕೀಯವಾಗಿ ದಿವಾಳಿಯಾಗಿವೆ. ಸ್ಥಳೀಯರನ್ನು ಅಭ್ಯರ್ಥಿ ಮಾಡಲು ಎರಡೂ ಪಕ್ಷಕ್ಕೆ ಆಗಿಲ್ಲ. ಜೆಡಿಎಸ್ ಹುಡುಕಿ ಹುಡುಕಿ ಹಣವಂತರನ್ನು ಕರೆತಂದಿದೆ. ನಿಮಗೆ ಹಣವಂತರು ಬೇಕಾ? ಗುಣವಂತರು ಬೇಕಾ? ಸುಸಂಸ್ಕೃತರು ಬೇಕಾ, ಅಸುಂಸ್ಕೃತರು ಬೇಕಾ? ಕಾಂಗ್ರೆಸ್ ಅಭ್ಯರ್ಥಿಗೆ ಸಂಸ್ಕಾರ, ಮಾನವೀಯತೆ ಇಲ್ಲ’ ಎಂದು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಟೀಕಿಸಿದರು.

ಮರಳಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ಉಪ ಚುನಾವಣೆ ಪ್ರಚಾರ ಕಾರ್ಯ ನಡೆಸಿ ಮಾತನಾಡಿದ ಅವರು, ‘ನಾನು ಕೊಟ್ಟ ಮಾತು, ನೀಡಿದ ಭರವಸೆ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದೆ. ಅದರಿಂದಾಗಿ ತಾಲ್ಲೂಕಿಗೆ ವೈದ್ಯಕೀಯ ಕಾಲೇಜು ಬಂತು, ಮಂಚೇನಹಳ್ಳಿ ತಾಲ್ಲೂಕು ರಚನೆಯಾಯಿತು. ವಸತಿ ಹೀನರಿಗೆ ನಿವೇಶನ ಲಭಿಸುವ ಮಾತು ಸಿಕ್ಕಿದೆ’ ಎಂದರು.

‘ಮೈತ್ರಿ ಸರ್ಕಾರದಲ್ಲಿ ಇದ್ದವರಿಗೆ ನಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುವ ಮನಸ್ಸು, ಮಮತೆ, ಮಮಕಾರ ಇರಲಿಲ್ಲ. ಮಲತಾಯಿ ಧೋರಣೆ ಮಾತ್ರ ಇತ್ತು. ನನ್ನ ಯಾವ ಮನವಿಗೂ ಸರ್ಕಾರ ಸ್ಪಂದಿಸಲಿಲ್ಲ. ಕೇವಲ ಒಂದೂವರೆ ವರ್ಷದಲ್ಲಿ ಬಂದಿರುವ ಚುನಾವಣೆ ನಿಮಗೆ ಹೊರೆಯಾಗಿದೆ. ಆದರೆ ಇದು ನನ್ನ ಆಸೆಗೆ ಬಂದಿರುವ ಚುನಾವಣೆ ಅಲ್ಲ, ಬದಲಾಗಿ ಕ್ಷೇತ್ರದ ಅಭಿವೃದ್ಧಿಗೆ ಬಂದ ಚುನಾವಣೆ’ ಎಂದು ಹೇಳಿದರು.

ADVERTISEMENT

‘ಕಳೆದ ಆರು ವರ್ಷದಲ್ಲಿ ನಿಮ್ಮ ಕಣ್ಣಮುಂದೆ ಕಾಣುವ ಬದಲಾವಣೆಯನ್ನು ಮಾಡಿಕೊಟ್ಟು ನಿಮ್ಮ ಮುಂದಿದ್ದೇನೆ. ನಮ್ಮ ಟ್ರಸ್ಟ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಪ್ರತಿ ಗ್ರಾಮ ಪಂಚಾಯಿತಿಗೆ ನೀಡುತ್ತಿದ್ದೇವೆ. ಮರಳಕುಂಟೆಯಲ್ಲಿ ನಾಳೆಯಿಂದ ಒಂದು ನೀರಿನ ಘಟಕ ಸ್ಥಾಪಿಸಲಿದ್ದೇವೆ. ಜೋಡೆತ್ತು, ಜೋಡಿ ಹಸು ಯಾವುದೇ ಬರಲಿ, ಮನೆ ಮಗನನ್ನು ನೀವು ಉಳಿಸಿಕೊಳ್ಳಬೇಕು’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ಮಾತನಾಡಿ, ‘ಹಿಂದೆ ಕಾಂಗ್ರೆಸ್ ಅನ್ಯಾಯ ಎದುರಿಸಲು ಶ್ಯಾಂಪ್ರಸಾದ್ ಮುಖರ್ಜಿ ಬಿಜೆಪಿಯನ್ನು ಕಟ್ಟಿ ಬೆಳೆಸಲು ಮುಂದಾಗಿದ್ದರು. ಅದೇ ರೀತಿ ಸುಧಾಕರ್ ಕಾಂಗ್ರೆಸ್‌ನಿಂದ ಹೊರ ಬಂದಿದ್ದಾರೆ. ಇವರು ಸ್ವಾರ್ಥಕ್ಕಾಗಿ ಪಕ್ಷ ಬಿಟ್ಟು ಬಂದಿಲ್ಲ. ಜಿಲ್ಲೆಯ ಅಭಿವೃದ್ಧಿಗಾಗಿ ಅವರು ಪಕ್ಷ, ಸರ್ಕಾರ ಬಿಟ್ಟು ಬಂದಿದ್ದಾರೆ. ಆದರೆ ಇವರನ್ನು ಸ್ವಾರ್ಥಿ ಎಂದು ಬಿಂಬಿಸುವ ಯತ್ನವನ್ನು ಕಾಂಗ್ರೆಸ್‌ನವರು ಮಾಡಿದ್ದಾರೆ’ ಎಂದು ಹೇಳಿದರು.

‘ಸುಧಾಕರ್ ಅವರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ಕೆಲಸ ಮಾಡುವ ಆಶಯ ಹೊಂದಿದ್ದಾರೆ. ಇದರಿಂದಾಗಿ ರಾಜಕೀಯ ಭವಿಷ್ಯವನ್ನು ಪಣಕ್ಕಿಟ್ಟು ಮರು ಚುನಾವಣೆಗೆ ಬಂದಿದ್ದಾರೆ. ಅವರನ್ನು ಜಯಶೀಲರನ್ನಾಗಿ ಮಾಡಬೇಕು. ಅವರನ್ನು ಗೆಲ್ಲಿಸಿದರೆ ಸಚಿವರಾಗಿ ಬರುತ್ತಾರೆ. ಇದು ಸೂರ್ಯ ಉದಯಿಸಿದಷ್ಟೇ ಸತ್ಯ’ ಎಂದು ತಿಳಿಸಿದರು. ಮುಖಂಡರಾದ ಕೃಷ್ಣಮೂರ್ತಿ, ನಾರಾಯಣಸ್ವಾಮಿ ಹಾಗೂ ಮರಳಕುಂಟೆ ನಂಜುಂಡಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.