ADVERTISEMENT

ಬಾಗೇಪಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ಜಿದ್ದು

ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ–ಮಾಜಿ ಶಾಸಕ ಎನ್.ಸಂಪಂಗಿ ನಡುವೆ ಪೈಪೋಟಿ

ಡಿ.ಎಂ.ಕುರ್ಕೆ ಪ್ರಶಾಂತ
Published 22 ಜೂನ್ 2022, 19:30 IST
Last Updated 22 ಜೂನ್ 2022, 19:30 IST
ಎನ್.ಸಂಪಂಗಿ
ಎನ್.ಸಂಪಂಗಿ   

ಚಿಕ್ಕಬಳ್ಳಾಪುರ: ‘ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗಗಳ ಕೋಟಾದಡಿ ನನಗೆ ಬಾಗೇಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ದೊರೆಯುತ್ತದೆ. ಪಕ್ಷವು ಸ್ಪರ್ಧೆಗೆ ಅವಕಾಶ ಮಾಡಿಕೊಡುತ್ತದೆ ಎನ್ನುವ ವಿಶ್ವಾಸವಿದೆ’–ಹೀಗೆ ನುಡಿಯುವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಎನ್.ಸಂಪಂಗಿ.

ಬಾಗೇಪಲ್ಲಿ ಕ್ಷೇತ್ರವನ್ನು ಕಾಂಗ್ರೆಸ್‌ನ ಸುಬ್ಬಾರೆಡ್ಡಿ ಅವರು ಪ್ರತಿನಿಧಿಸುತ್ತಿದ್ದಾರೆ. ಹಾಲಿ ಶಾಸಕರಿಗೆ ಟಿಕೆಟ್ ಎನ್ನುವ ಮಾತು ಪಕ್ಷದೊಳಗೆ ಸಾಮಾನ್ಯವಾಗಿ ಇರುತ್ತವೆ. ಈ ನಡುವೆಯೇ ಎನ್.ಸಂಪಂಗಿ ಅವರು ನಾನೂ ಟಿಕೆಟ್‌ನ ಪ್ರಬಲ ಆಕಾಂಕ್ಷಿ ಎಂದಿದ್ದಾರೆ. ಇದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರವಷ್ಟೇ ಅಲ್ಲ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿಯೂ ಚರ್ಚೆಗೆ ಕಾರಣವಾಗಿದೆ.

ಗುಡಿಬಂಡೆ,ಬಾಗೇಪಲ್ಲಿ ಮತ್ತು ಚೇಳೂರು ತಾಲ್ಲೂಕು ಒಳಗೊಂಡ ಬಾಗೇಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಈ ಹಿಂದಿನಿಂದಲೂ ಪ್ರಬಲವಾಗಿದೆ. ಈ ಕ್ಷೇತ್ರದಲ್ಲಿ ನಡೆದಿರುವ ಒಟ್ಟು 15 ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು 8 ಚುನಾವಣೆಗಳಲ್ಲಿ ಗೆಲುವು ಕಂಡಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಗಟ್ಟಿಯಾದ ನೆಲೆಯನ್ನು ಹೊಂದಿರುವ ಕ್ಷೇತ್ರಗಳಲ್ಲಿ ಬಾಗೇಪಲ್ಲಿ ಸಹ ಪ್ರಮುಖವಾದುದು.

ADVERTISEMENT

1999ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಎನ್.ಸಂಪಂಗಿ, ಸಿಪಿಎಂನ ಜಿ.ವಿ.ಶ್ರೀರಾಮರೆಡ್ಡಿ ಅವರನ್ನು 3,298 ಮತಗಳ ಅಂತರದಿಂದ ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದರು. ಪಕ್ಷೇತರರಾಗಿದ್ದ ಅವರು ನಂತರ ಕಾಂಗ್ರೆಸ್ ಸೇರಿದರು.2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಈ ಚುನಾವಣೆಯಲ್ಲಿ ಜಿ.ವಿ.ಶ್ರೀರಾಮರೆಡ್ಡಿ ಗೆಲುವು ಸಾಧಿಸಿದರು. ಮತ್ತೆ 2008ರ ಚುನಾವಣೆಯಲ್ಲಿ ಸಂಪಂಗಿ ಮತ್ತು ಶ್ರೀರಾಮರೆಡ್ಡಿ ಮೂರನೇ ಬಾರಿ ಎದುರಾಳಿಗಳಾದರು. ಸಂಪಂಗಿ ಗೆಲುವು ದಾಖಲಿಸಿದರು.

ಹೀಗೆ ಬಾಗೇಪಲ್ಲಿ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾದ ಸಂಪಂಗಿ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದಾರೆ. ಈ ಕ್ಷೇತ್ರದಲ್ಲಿ ಗಣನೀಯವಾಗಿರುವ ಬಲಿಜ ಸಮುದಾಯದ ಪ್ರಮುಖ ಮುಖಂಡರಾಗಿಯೂ ಗುರುತಾಗಿದ್ದಾರೆ. ಸಂಪಂಗಿ ಅವರ ತರುವಾಯ ಬಲಿಜ ಸಮುದಾಯದವರು ಈ ಕ್ಷೇತ್ರದಲ್ಲಿ ಶಾಸಕರಾಗಿಲ್ಲ.

2013ರಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಎಸ್‌.ಎನ್.ಸುಬ್ಬಾರೆಡ್ಡಿ ಗೆಲುವು ಸಾಧಿಸಿದರು. ನಂತರ ಕಾಂಗ್ರೆಸ್ ಸೇರಿ 2018ರ ಚುನಾವಣೆಯಲ್ಲಿ ಮರು ಆಯ್ಕೆಯಾದರು. ಆರ್ಥಿಕವಾಗಿಯೂ ಪ್ರಬಲ ಎನಿಸಿರುವ ಸುಬ್ಬಾರೆಡ್ಡಿ ಕ್ಷೇತ್ರದಲ್ಲಿ ತಮ್ಮದೇ ಆದ ಸಂಪರ್ಕ ಜಾಲ ಹೊಂದಿದ್ದಾರೆ. ಹೀಗೆ ಈ ಇಬ್ಬರು ತಲಾ ಎರಡು ಬಾರಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಸುಬ್ಬಾರೆಡ್ಡಿ ಮತ್ತು ಸಂಪಂಗಿ ಈ ಕ್ಷೇತ್ರದಲ್ಲಿ ಪ್ರಬಲವಾಗಿರುವ ಸಮುದಾಯಗಳಿಗೆ ಸೇರಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಸಂಪಂಗಿ ಅವರಿಗೆ ಈಗ ಚಿಂತಾಮಣಿ, ಕೆಜಿಎಫ್ ಮತ್ತು ಕೋಲಾರ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ಸಹ ನೀಡಲಾಗಿದೆ. ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಪಕ್ಷವು ಅವರಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ನೀಡಿತ್ತು. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಕ್ಷದ ವೀಕ್ಷಕರಾಗಿಯೂ ಕೆಲಸ ಮಾಡಿದ್ದಾರೆ.

ಎನ್.ಸಂಪಂಗಿ ಅವರು ಟಿಕೆಟ್ ವಿಚಾರದಲ್ಲಿ ಪ್ರಬಲ ಪ್ರತಿಪಾದನೆ ಮಾಡುತ್ತಿದ್ದಂತೆ ಪಕ್ಷದ ಕಾರ್ಯಕರ್ತರಲ್ಲಿ ಟಿಕೆಟ್ ವಿಚಾರ ಕುತೂಹಲಕ್ಕೆ ಕಾರಣವಾಗಿದೆ.

****

‘ಟಿಕೆಟ್ ದೊರೆಯುವ ವಿಶ್ವಾಸವಿದೆ’

‘ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷವು ನನಗೆ ವಿವಿಧ ಜವಾಬ್ದಾರಿಗಳನ್ನು ನೀಡಿದ್ದು ಸಮರ್ಥವಾಗಿ ನಿಭಾಯಿಸಿದ್ದೇನೆ. ಈ ಬಾರಿ ಬಾಗೇಪಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ದೊರೆಯುತ್ತದೆ ಎನ್ನುವ ವಿಶ್ವಾಸವಿದೆ’ ಎಂದು ಎನ್.ಸಂಪಂಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಂಗ್ರೆಸ್ ಉಳಿಸಬೇಕು ಎಂದರೆ ಶೇ 20ರಷ್ಟು ಶಾಸಕರನ್ನು ಬದಲಿಸಬೇಕು ಎನ್ನುವ ವಿಚಾರ ಪಕ್ಷದ ಚಿಂತನ ಮಂಥನ ಶಿಬಿರದಲ್ಲಿ ಕೇಳಿ ಬಂದಿದೆ. ಕಳೆದ ಬಾರಿಯೂ ನನಗೆ ಟಿಕೆಟ್ ದೊರೆಯಲಿಲ್ಲ. ಅನ್ಯಾಯವಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಮ್ಮ ಬಲಿಜ ಸಮುದಾಯದ ಮತದಾರರು ಗಣನೀಯವಾಗಿ ಇದ್ದಾರೆ. ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗಗಳ ಕೋಟಾದಡಿ ಟಿಕೆಟ್ ದೊರೆಯುತ್ತದೆ ಎನ್ನುವ ವಿಶ್ವಾಸವಿದೆ’ ಎಂದರು.

‘ವಂಡಮಾನ್ ಅಣೆಕಟ್ಟು ನಿರ್ಮಾಣ ಸೇರಿದಂತೆ ಬಾಗೇಪಲ್ಲಿ ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಹಣವೇ ರಾಜಕಾರಣವಲ್ಲ. ಜನರೇ ನನಗೆ ಹಣಕೊಟ್ಟು ಗೆಲ್ಲಿಸಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.