ADVERTISEMENT

ಚಿಕ್ಕಬಳ್ಳಾಪುರ | ಯಾವ ಶಾಸಕ ಯಾರ ಪರವೊ...

ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಮೂವರು ಶಾಸಕರು; ಪಕ್ಷೇತರರದ್ದೂ ಬೆಂಬಲ

ಡಿ.ಎಂ.ಕುರ್ಕೆ ಪ್ರಶಾಂತ
Published 24 ನವೆಂಬರ್ 2025, 5:12 IST
Last Updated 24 ನವೆಂಬರ್ 2025, 5:12 IST
ಡಾ.ಎಂ.ಸಿ. ಸುಧಾಕರ್
ಡಾ.ಎಂ.ಸಿ. ಸುಧಾಕರ್   

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಸ್ತಾಂತರ ವಿಚಾರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಶಾಸಕರು ಬಣಗಳಾಗಿ ಬಹಿರಂಗವಾಗಿ ಮತ್ತು ‘ಗು‍ಪ್ತ’ವಾಗಿ ಸಭೆಗಳನ್ನೂ ನಡೆಸಿದ್ದಾರೆ. 

ಕೆಲವು ಶಾಸಕರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರವಾಗಿ ನವದೆಹಲಿ ಯಾತ್ರೆ ಸಹ ಮಾಡಿದ್ದಾರೆ. ಸಿದ್ದರಾಮಯ್ಯ ಅವರೇ ನಾಯಕ ಎನ್ನುವ ಮತ್ತೊಂದಿಷ್ಟು ಶಾಸಕರು ಊಟದ ಹೆಸರಿನಲ್ಲಿ ಕಲೆತಿದ್ದಾರೆ. 

ಹೀಗೆ ರಾಜ್ಯ ರಾಜಕೀಯದಲ್ಲಿ ಲೆಕ್ಕಾಚಾರ ಬಿರುಸುಗೊಂಡಿದ್ದರೆ ಇತ್ತ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿರುವ ಮೂವರು ಶಾಸಕರು ಮತ್ತು ಪಕ್ಷೇತರರಾಗಿ ಗೆಲುವು ಸಾಧಿಸಿ ಕಾಂಗ್ರೆಸ್‌ಗೆ ಬೆಂಬಲ ನೀಡಿರುವ ಶಾಸಕರು ಯಾರ ಪರ ನಿಲುವು ಹೊಂದಿದ್ದಾರೆ ಎನ್ನುವ ಚರ್ಚೆಗಳೂ ಗರಿಗೆದರಿವೆ.

ADVERTISEMENT

ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಮೂವರು ಶಾಸಕರು ಇದ್ದಾರೆ. ಚಿಕ್ಕಬಳ್ಳಾಪುರದ ಕ್ಷೇತ್ರದಲ್ಲಿ ಪ್ರದೀಪ್ ಈಶ್ವರ್, ಬಾಗೇಪಲ್ಲಿಯಲ್ಲಿ ಎಸ್‌.ಎನ್.ಸುಬ್ಬಾರೆಡ್ಡಿ ಮತ್ತು ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರೂ ಆದ ಡಾ.ಎಂ.ಸಿ.ಸುಧಾಕರ್ ಚಿಂತಾಮಣಿಯಿಂದ ಗೆಲುವು ಸಾಧಿಸಿದ್ದಾರೆ. ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ಕಾಂಗ್ರೆಸ್ ಬೆಂಬಲಿಸಿದ್ದಾರೆ.

ಸಚಿವ ಡಾ.ಎಂ.ಸಿ.ಸುಧಾಕರ್ ಸೇರಿದಂತೆ ‘ಕೈ’ನ ಮೂವರು ಮತ್ತು ಪಕ್ಷೇತರ  ಶಾಸಕರು ಸದ್ಯಕ್ಕೆ ಯಾರ ಪರವಾಗಿಯೂ ಬಹಿರಂಗವಾಗಿ ಗುರುತಿಸಿಕೊಂಡಿಲ್ಲ. ಯಾರ ಪರವಾಗಿಯೂ ಹೇಳಿಕೆ ನೀಡಿಲ್ಲ. ಇಲ್ಲಿಯವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜತೆ ಎಲ್ಲಾ ಶಾಸಕರೂ ಆತ್ಮೀಯವಾಗಿದ್ದಾರೆ.‌

ಪುಟ್ಟಸ್ವಾಮಿಗೌಡ ಸೇರಿದಂತೆ ಮೂವರು ಶಾಸಕರು ಒಕ್ಕಲಿಗ ಸಮುದಾಯದವರು. ಪ್ರದೀಪ್ ಈಶ್ವರ್ ಬಲಿಜ ಸಮುದಾಯದವರು. ರಾಜಕಾರಣದಲ್ಲಿ ಈ ಜಾತಿಯ ನೆಲೆಯಲ್ಲಿಯೂ ಶಾಸಕರ ಬೆಂಬಲ ಕ್ರೂಡೀಕರಣ ನಡೆಯುತ್ತಿರುವುದು ಸುಳ್ಳಲ್ಲ.

ಆದರೆ ಯಾವ ಶಾಸಕರೂ ಒಳಗುಟ್ಟು ಬಿಟ್ಟುಕೊಡುತ್ತಿಲ್ಲ. ಎಲ್ಲರೂ ಹೈಕಮಾಂಡ್‌ನತ್ತ ಬೆರಳು ತೋರುತ್ತಿದ್ದಾರೆ. ‘ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಮ್ಮ ನಾಯಕರು. ಪಕ್ಷದ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ’ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಪದೇ ಪದೇ ಹೇಳುತ್ತಿದ್ದಾರೆ. ಉಳಿದ ಕಾಂಗ್ರೆಸ್ ಶಾಸಕರು ಸಹ ಹೈಕಮಾಂಡ್‌ನತ್ತ ಬೆರಳು ತೋರುವರು. 

ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ, ಈ ಶಾಸಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪರವಂತೆ ಎಂಬ ಚರ್ಚೆಗಳು ಸಾರ್ವಜನಿಕರು ಹೆಚ್ಚು ಸೇರುವ ಕಡೆ ಮತ್ತು ಜನರ ನಡುವೆ ನಡೆಯುವ ರಾಜಕೀಯ ಚರ್ಚೆಗಳಲ್ಲಿ ಕೇಳಿ ಬರುತ್ತಿವೆ. 

ಜೊ‌ತೆಗೆ ಜಾತಿ ಲೆಕ್ಕಾಚಾರ, ಶಾಸಕರ ಮೇಲಿರುವ ಪ್ರಕರಣಗಳು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜೊ‌ತೆ ಇರುವ ಆಪ್ತತೆ, ಹಿಂದೆಲ್ಲಾ ಎಷ್ಟೆಲ್ಲಾ ಒಡನಾಟ ಹೊಂದಿದ್ದರು ಎಂಬುದರ ಕುರಿತಂತೆ ಜನಸಾಮಾನ್ಯರು ಚರ್ಚಿಸುತ್ತಿದ್ದ ಕುತೂಹಲ ಮೂಡಿಸಿದೆ.

ಈ ಎಲ್ಲಾ ಬೆಳವಣಿಗೆಗಳು ರಾಜಕೀಯ ವಲಯದಲ್ಲಿ ಮಾತ್ರವಲ್ಲದೆ, ಜಿಲ್ಲೆಯ ಜನಸಾಮಾನ್ಯರಲ್ಲೂ ಬಹಳ ಕುತೂಹಲ ಮೂಡಿಸಿವೆ, ವಿವಿಧ ರೀತಿಯ ಚರ್ಚೆಗೆ ಕಾರಣವಾಗಿವೆ.

ಸಚಿವ ಸ್ಥಾನದ ಬಯಕೆ

ಬಾಗೇಪಲ್ಲಿ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ‘ನನಗೆ ಸಚಿವ ಸ್ಥಾನ ನೀಡುತ್ತೇವೆ ಎಂದು ಈ ಹಿಂದೆ ಭರವಸೆ ನೀಡಿದ್ದರು. ಆ ಪ್ರಕಾರ ಸಚಿವ ಸ್ಥಾನ ನೀಡುವರು’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.  ಮೂರು ಬಾರಿ ಗೆಲುವು ಸಾಧಿಸಿರುವ ಸುಬ್ಬಾರೆಡ್ಡಿ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯೂ ಆಗಿದ್ದಾರೆ. ಮತ್ತೊಂದು ಕಡೆ ಆಗಾಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತಿರುವ ಶಾಸಕ ಪ್ರದೀಪ್  ಈಶ್ವರ್ ಬಲಿಜ ಕೋಟಾದಡಿ ಸಚಿವ ಸ್ಥಾನ ಬಯಸಿದ್ದಾರೆ. ಸಚಿವ ಸ್ಥಾನದ ಆಸೆ ಈ ಹಿಂದೆ ನೀಡಿದ ಭರವಸೆಗಳ ಮೇಲೂ ಯಾರು ಯಾರ ಪರ ಎನ್ನುವ ಲೆಕ್ಕಾಚಾರಗಳು ನಿಂತಿವೆ.

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ

‘ಯಾರೂ ಡಿನ್ನರ್ ಮೀಟಿಂಗ್ ಮಾಡಿಲ್ಲ. ಸ್ನೇಹಿತರು ಕೆಲವರು ಸೇರಿ ಊಟ ಮಾಡುವುದು ತಪ್ಪು ಎಂದರೆ ಹೇಗೆ? ಸರ್ಕಾರದ ಭದ್ರತೆಯ ಬಗ್ಗೆ ಯಾವುದೇ ಗೊಂದಲ ಇಲ್ಲ. ಆದರೆ ಊಹೆ ಇರುವುದು ನಾಯಕತ್ವ ಬದಲಾವಣೆ ಆಗುತ್ತದೆಯಾ ಇಲ್ಲವಾ ಎನ್ನುವ ಬಗ್ಗೆ ಎಂದು ಡಾ.ಎಂ.ಸಿ.ಸುಧಾಕರ್ ತಿಳಿಸಿದರು.  ‘ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಇದುವರೆಗೂ ಹೈಕಮಾಂಡ್ ಯಾವುದೇ ಸೂಚನೆ ನೀಡಿಲ್ಲ. ನಾಲ್ಕೈದು ತಿಂಗಳಿನಿಂದ ಮಾಧ್ಯಮಗಳಲ್ಲಿ ಈ ಚರ್ಚೆಗಳು ಆರಂಭವಾಗಿದೆ ಎಂದರು. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸಹಜವಾಗಿ ಎಲ್ಲರಿಗೂ ಮಂತ್ರಿ ಆಗಬೇಕು ಎನ್ನುವ ಬಯಕೆ ಇದೆ. ವರಿಷ್ಠರನ್ನು ಭೇಟಿ ಮಾಡಲು ನವದೆಹಲಿಗೆ ಹೋಗಿದ್ದಾರೆ ಅಷ್ಟೆ. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಪಾಲಿಸುತ್ತೇವೆ ಎಂದು ಹೇಳಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹೆಚ್ಚಿನ ಸಮಯ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ನಾಯಕತ್ವ ಬದಲಾವಣೆ ಮಾಡುವ ತೀರ್ಮಾಣ ಇದ್ದರೆ ನನ್ನನ್ನೂ ಪರಿಗಣಿಸಿ ಎಂದಿದ್ದಾರೆ. ಅದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ ಎಂದು ಸಚಿವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.