ತೀರ್ಪು
ಚಿಕ್ಕಬಳ್ಳಾಪುರ: ರೈತರಿಂದ ಗುಲಾಬಿ ಈರುಳ್ಳಿ ಖರೀದಿಸಿ ಹಣ ನೀಡದ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. ರೈತರಿಗೆ ಬರಬೇಕಾದ ಹಣವನ್ನೂ ದೊರಕಿಸಿಕೊಟ್ಟಿದೆ.
ಶಿಡ್ಲಘಟ್ಟ ತಾಲ್ಲೂಕು ಸಾದಲಿ ಹೋಬಳಿ ಗಂಡಲ್ ಚಿಟ್ಟೆ ಗ್ರಾಮದ ಸೀತಾರಾಮಪ್ಪ ಹಾಗೂ ಇತರೆ 15 ರೈತರು ರೈತ ಉತ್ಪಾದಕರ ಸಂಸ್ಥೆ ರಚಿಸಿದ್ದರು. ಬಿ.ಎಸ್.ಅಲುಮ್ ಸಿಇಪಿಎ ರಫ್ತು ಕಂಪನಿ ಜೊತೆ ಗುಲಾಬಿ ಈರುಳ್ಳಿ ಬೆಳೆಯಲು ನಿಗದಿತ ದರದಲ್ಲಿ ಒಪ್ಪಂದ ಮಾಡಿಕೊಂಡಿದ್ದರು.
ರೈತ ಉತ್ಪಾದಕರ ಸಂಸ್ಥೆ ಸದಸ್ಯರು ಬೆಳೆದ ಗುಲಾಬಿ ಈರುಳ್ಳಿಯನ್ನು ಕಂಪನಿ ಖರೀದಿಸಿತ್ತು. ಅರ್ಧದಷ್ಟು ಹಣ ನೀಡಿ ಉಳಿಕೆ ಹಣ ನೀಡಿರಲಿಲ್ಲ. ಈ ಬಗ್ಗೆ ರೈತರು ಚಿಕ್ಕಬಳ್ಳಾಪುರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಕುಮಾರ್ ಎನ್. ಮತ್ತು ಸದಸ್ಯ ಎಚ್.ಜನಾರ್ದನ್ ದೂರುಗಳನ್ನು ಪರಿಶೀಲಿಸಿ ರಫ್ತು ಕಂಪನಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಿದ್ದರು.
ನಿಗದಿತ ಸಮಯದಲ್ಲಿ ದೂರುದಾರರಿಗೆ ₹13,27,133 ಬಾಕಿ ಹಣವನ್ನು ಶೇ 6ರ ಬಡ್ಡಿಯಂತೆ ನೀಡಬೇಕು. ದಾವೆ ವೆಚ್ಚ ಪ್ರತಿ ದೂರಿಗೆ ₹3,000 ನೀಡಬೇಕು ಎಂದು ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.