
ಚಿಕ್ಕಬಳ್ಳಾಪುರ: ಕಳೆದ ಮೂರು ವರ್ಷಗಳಿಂದ ಬಾಕಿ ಇರುವ ಗುತ್ತಿಗೆದಾರರ ಬಿಲ್ ಪಾವತಿಗೆ ಆಗ್ರಹಿಸಿ ಮಾರ್ಚ್ 6 ರಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 10ರಿಂದ 15 ಸಾವಿರ ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು. ಸರ್ಕಾರ ಇದಕ್ಕೆ ಸ್ಪಂದಿಸದಿದ್ದರೆ ಏಪ್ರಿಲ್‌ನಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.
ರಾಜ್ಯದ ಒಂದೂವರೆ ಲಕ್ಷದಷ್ಟು ಗುತ್ತಿಗೆದಾರರಿಗೆ ರಾಜ್ಯ ಸರ್ಕಾರದಿಂದ ₹ 37 ಸಾವಿರ ಕೋಟಿ ಬಿಲ್ ಬಾಕಿ ಇದೆ. ಸರ್ಕಾರದಿಂದ ಬಿಲ್ ಬಾಕಿ ಉಳಿಸಿಕೊಳ್ಳುವ ಪ್ರವೃತ್ತಿ ಮುಂದುವರೆದಿದೆ. ಗುತ್ತಿಗೆದಾರರು ದಿವಾಳಿ ಅಂಚಿಗೆ ತಲುಪಿದ್ದಾರೆ. ಸಾಲ ಮಾಡಿ ಗುತ್ತಿಗೆ ಕೆಲಸ ಮಾಡಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಲ್ ಬಿಡುಗಡೆ ಆಗಿಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ ಮನೆಯ ಯಜಮಾನರು ಬದಲಾವಣೆಯಾದರೂ ಹಿಂದಿನವರ ಸಾಲಗಳನ್ನು ತೀರಿಸುವುದಿಲ್ಲವೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ವಿರೋಧಪಕ್ಷದ ನಾಯಕರಾಗಿದ್ದ ವೇಳೆ ಪ್ಯಾಕೇಜ್ ವ್ಯವಸ್ಥೆ ವಿರೋಧಿಸುತ್ತಿದ್ದ. ಆದರೆ ಈಗ ಅದನ್ನು ಮರೆತಿದ್ದಾರೆ. ಹೊರ ರಾಜ್ಯದ ಗುತ್ತಿಗೆದಾರರಿಗೆ ಟೆಂಡರ್ ವಹಿಸಲಾಗುತ್ತಿದೆ. ₹1 ಕೋಟಿಗಿಂತ ಹೆಚ್ಚಿನ ಮೊತ್ತದಲ್ಲಿ ಪ್ಯಾಕೇಜ್ ಟೆಂಡರ್‌ಗೆ ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಮುಖ್ಯಮಂತ್ರಿ ಅದಕ್ಕೆ ಅನುಮೋದನೆ ನೀಡುತ್ತಿದ್ದಾರೆ ಎಂದರು.
ಸರ್ಕಾರದ ಮುಖ್ಯಕಾರ್ಯದರ್ಶಿಗೆ 300 ಪುಟಗಳ ದಾಖಲೆ ನೀಡಿದ್ದೇವೆ. ಲೋಕೋಪಯೋಗಿ ಇಲಾಖೆಯಿಂದ ₹ 8,280 ಕೋಟಿ, ಜಲಸಂಪನ್ಮೂಲ ಇಲಾಖೆಯಿಂದ ₹ 3 ಸಾವಿರ ಕೋಟಿ, ಆರ್‌ಡಿಪಿಆರ್‌ನಿಂದ ₹ 3,800 ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ ₹ 3 ಸಾವಿರ ಕೋಟಿ, ನಗರಾಭಿವೃದ್ಧಿ ಇಲಾಖೆಯಿಂದ ₹ 8 ಸಾವಿರ ಕೋಟಿ ಸೇರಿದಂತೆ ವಿವಿಧ ಇಲಾಖೆಗಳಿಂದ ಬಿಲ್‌ಗಳು ಬಾಕಿ ಇವೆ ಎಂದು ಹೇಳಿದರು.
ಕನಿಷ್ಠ ನಮ್ಮನ್ನು ಕರೆದು ಈ ಬಗ್ಗೆ ಸರ್ಕಾರವು ಮಾತುಕತೆ ನಡೆಸಿಲ್ಲ. ಆದ್ದರಿಂದ ಹೋರಾಟ ಮಾಡಲೇಬೇಕಾಗಿದೆ. ಗುತ್ತಿಗೆದಾರರು ಕಷ್ಟದಲ್ಲಿ ಇದ್ದಾರೆ ಎನ್ನುವುದನ್ನು ತಿಳಿಸುವುದೇ ನಮ್ಮ ಉದ್ದೇಶ ಎಂದರು.
ಗುತ್ತಿಗೆದಾರರ ಸಂಘದ ಕೃಷ್ಣಾರೆಡ್ಡಿ, ಮುನೇಗೌಡ, ಹನುಮಂತಣ್ಣ, ಜಗದೀಶ್, ನಾಗರಾಜ್ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.