ADVERTISEMENT

ಮತದಾನ ಪಟ್ಟಿಯಿಂದ ಷೇರುದಾರರನ್ನು ಕೈಬಿಟ್ಟ ಸಹಕಾರ ಸಂಘ: ಆರೋಪ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 6:44 IST
Last Updated 3 ಡಿಸೆಂಬರ್ 2025, 6:44 IST
<div class="paragraphs"><p>ಮತದಾರರ ಪಟ್ಟಿ</p></div>

ಮತದಾರರ ಪಟ್ಟಿ

   

ಕೃಪೆ:ಪಿಟಿಐ

ಬಾಗೇಪಲ್ಲಿ: ಬಾಗೇಪಲ್ಲಿ, ಚೇಳೂರು ತಾಲ್ಲೂಕುಗಳಲ್ಲಿ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಲು ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ಇದೆ. ಡಿಸೆಂಬರ್ 7ರಂದು ಚುನಾವಣಾ ಘೋಷಣೆ ಸಂದರ್ಭದಲ್ಲಿ 65 ಷೇರುದಾರ ಹೆಸರುಗಳನ್ನು ಕೈಬಿಟ್ಟಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

2018, 2019ನೇ ಸಾಲಿನಲ್ಲಿ 600ಕ್ಕೂ ಹೆಚ್ಚು ರೈತರು ಷೇರುದಾರರಾಗಿದ್ದರು. ನಂತರ ಸಂಘದ ಷೇರನ್ನು ಒಂದು ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಷೇರಿನ ಏರಿಕೆಯ ಬಗ್ಗೆ ಷೇರುದಾರರಿಗೆ ಅಧಿಕಾರಿಗಳು, ಆಡಳಿತ ಮಂಡಳಿ ಸಮರ್ಪಕವಾಗಿ ತಿಳಿಸದೇ, ಷೇರಿನ ನವೀಕರಣ ಮಾಡಿಲ್ಲ ಎಂದು ಏಕಾಏಕಿ 365 ಷೇರುದಾರರನ್ನು ಸದಸ್ಯತ್ವದ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ ಎಂದು ರೈತರ ಆರೋಪ.

ಸಹಕಾರ ಸಂಘದ ನಿಬಂಧನೆಯಂತೆ 2023-24ನೇ ಸಾಲಿನಲ್ಲಿ 65 ಮಂದಿ ₹1 ಸಾವಿರ ಪಾವತಿಸಿ, ಷೇರು ಸದಸ್ಯತ್ವ ಪಡೆದಿದ್ದಾರೆ. 3 ವರ್ಷ ಅವಧಿ ಪೂರೈಸಿಲ್ಲ ಎಂದು ಇದೀಗ ಡಿಸೆಂಬರ್ 7 ರಂದು ನಡೆಯಲಿರುವ ಮತದಾರರ ಪಟ್ಟಿಯಿಂದ ಹೆಸರು ಕೈ ಬಿಡಲಾಗಿದೆ. ಮತದಾನದ ಹಕ್ಕು ನೀಡದ ಸಹಕಾರ ಸಂಘದ ನಿಬಂಧಕರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 4 ವರ್ಷದ ಹಿಂದೆ ಮೃತಪಟ್ಟ ಗೋಪಣ್ಣ (ಕ್ರಮ ಸಂಖ್ಯೆ 45) ಹಾಗೂ 2 ವರ್ಷದ ಹಿಂದೆ ಮೃತಪಟ್ಟ (ಕ್ರಮ ಸಂಖ್ಯೆ 30) ಸೇರಿದಂತೆ ಕೆಲ ಮೃತಪಟ್ಟವರ ಹೆಸರು ಮತದಾನದ ಪಟ್ಟಿಯಲ್ಲಿ ಇರುವುದು ಕೆಲ ಅನುಮಾನ ಮೂಡಿಸಿದೆ ಎಂದು ರೈತರು ಆರೋಪಿಸಿದ್ದಾರೆ.

ಹಿಂದೆ ಸಹಕಾರ ಸಂಘದಲ್ಲಿ ಷೇರು ಹಣ ಪಾವತಿ ಸದಸ್ಯತ್ವ ಪಡೆದಿದ್ದೇನೆ. ಷೇರಿನ ನವೀಕರಣ ಮಾಡಿಲ್ಲ. ಸಭೆಗೆ ಆಹ್ವಾನ ನೀಡಿಲ್ಲ. ಇದೀಗ ಮತದಾರರ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ ಎಂದು ರೈತ ಚನ್ನರಾಯಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

ಸಂಘದ ನಿಯಮದಂತೆ ಸಹಕಾರ ಸಂಘದಲ್ಲಿ ವಾರ್ಷಿಕವಾಗಿ ₹5 ಸಾವಿರ ವ್ಯವಹಾರ ಮಾಡಬೇಕು. ವ್ಯವಹಾರ ಮಾಡದ ಷೇರುದಾರರು ಮತದಾನಕ್ಕೆ ಅನರ್ಹರು. ಅಂತಹವರನ್ನು ಚುನಾವಣಾ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಕಾರ್ಯದರ್ಶಿ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.