ADVERTISEMENT

ಜಿಲ್ಲೆಯಾದ್ಯಂತ ಖಾಕಿ ಕಣ್ಗಾವಲು, ಬೆಂಗಳೂರಿನತ್ತ ಟ್ರ್ಯಾಕ್ಟರ್‌ ಬಿಡದ ಪೊಲೀಸರು

ಜಿಲ್ಲೆಯಿಂದ ಹೊರಗೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಲು ಅವಕಾಶ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 13:48 IST
Last Updated 26 ಜನವರಿ 2021, 13:48 IST
ಚಿಕ್ಕಬಳ್ಳಾಪುರ ಹೊರವಲಯದ ಚದುಲಪುರ ಕ್ರಾಸ್‌ನಿಂದ ವಿವಿಧ ಸಂಘಟನೆಗಳ ಮುಖಂಡರು ವಿವಿಧ ವಾಹನಗಳಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.
ಚಿಕ್ಕಬಳ್ಳಾಪುರ ಹೊರವಲಯದ ಚದುಲಪುರ ಕ್ರಾಸ್‌ನಿಂದ ವಿವಿಧ ಸಂಘಟನೆಗಳ ಮುಖಂಡರು ವಿವಿಧ ವಾಹನಗಳಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.   

ಚಿಕ್ಕಬಳ್ಳಾಪುರ: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಂಗಳವಾರ ಬೆಂಗಳೂರಿನಲ್ಲಿ ಬೃಹತ್ ಟ್ರ್ಯಾಕ್ಟರ್ ಪರೇಡ್ ನಡೆಸಲು ಮುಂದಾದ ಜಿಲ್ಲೆಯ ರೈತ ಸಂಘಟನೆಗಳ ಪದಾಧಿಕಾರಿಗಳಿಗೆ ರಾಜಧಾನಿಯತ್ತ ಟ್ರ್ಯಾಕ್ಟರ್‌ಗಳನ್ನು ಕೊಂಡೊಯ್ಯಲು ಜಿಲ್ಲೆಯ ಪೊಲೀಸರು ಅವಕಾಶ ನೀಡದೆ ತಡೆ ಒಡ್ಡಿದರು.

ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಟ್ರ್ಯಾಕ್ಟರ್‌ ರ‍್ಯಾಲಿ ನಡೆಸಲು ಅನುಮತಿ ನೀಡಿಲ್ಲ ಎಂದು ಸೋಮವಾರ ಹೇಳಿಕೆ ನೀಡಿದ ಬೆನ್ನಲ್ಲೇ, ಜಿಲ್ಲೆಯಲ್ಲಿ ಪೊಲೀಸರು ಬೆಂಗಳೂರಿಗೆ ಪರೇಡ್‌ಗೆ ತೆರಳಲು ಸಜ್ಜುಗೊಂಡಿದ್ದ ನೂರಾರು ಟ್ರ್ಯಾಕ್ಟರ್‌ಗಳಿಗೆ ಅವಕಾಶ ನಿರಾಕರಿಸಿದರು. ಕೆಲವೆಡೆ ಪೊಲೀಸರು ಟ್ರ್ಯಾಕ್ಟರ್‌ಗಳನ್ನು ಮತ್ತು ಹೋರಾಟಗಾರರನ್ನು ವಶಕ್ಕೆ ಪಡೆದರು.

ಅಷ್ಟೇ ಅಲ್ಲದೇ, ಪ್ರಮುಖ ಮಾರ್ಗಗಳಲ್ಲಿ ನಾಕಾಬಂದಿ ಹಾಕಿ ಟ್ಯಾಕ್ಟರ್‌ಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಜಮೀನಿಗೆ ತೆರಳುತ್ತಿದ್ದ ರೈತರನ್ನು ತಡೆದು ವಾಪಾಸ್‌ ಕಳುಹಿಸಿದ ಘಟನೆಗಳು ವರದಿಯಾಗಿವೆ. ಇದರಿಂದ ರೈತರು ತೊಂದರೆ ಅನುಭವಿಸಿ ಪೊಲೀಸ್‌ ಇಲಾಖೆಗೆ ಹಿಡಿಶಾಪ ಹಾಕಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ADVERTISEMENT

ಪೊಲೀಸರ ಎಚ್ಚರಿಕೆ ನಡುವೆಯೂ ಜಿಲ್ಲೆಯ ತಾಲ್ಲೂಕು ಕೇಂದ್ರಗಳಾದ ಬಾಗೇಪಲ್ಲಿ, ಗುಡಿಬಂಡೆ ಮತ್ತು ಗೌರಿಬಿದನೂರಿನಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಟ್ರ್ಯಾಕ್ಟರ್‌ ಪರೇಡ್‌ ನಡೆಸಿದರು. ಆದರೆ, ಪೊಲೀಸರು ಟ್ರ್ಯಾಕ್ಟರ್‌ಗಳಿಗೆ ನಗರ ದಾಟಲು ಅವಕಾಶ ನೀಡದೆ ತಡೆದರು.

ಜಿಲ್ಲೆಯ ರೈತ ಮತ್ತು ವಿವಿಧ ಸಂಘಟನೆಗಳ ಮುಖಂಡರು ಚಿಕ್ಕಬಳ್ಳಾಪುರ ಹೊರವಲಯದ ಚದುಲಪುರ ಕ್ರಾಸ್‌ನಿಂದ ಒಟ್ಟಾಗಿ ಬೆಂಗಳೂರಿಗೆ ಟ್ರ್ಯಾಕ್ಟರ್‌ ಸಮೇತ ಪರೇಡ್‌ಗೆ ತೆರಳಲು ನಿರ್ಧರಿಸಿದ್ದರು. ಆದರೆ, ಚದುಲಪುರ ಕ್ರಾಸ್‌ನಲ್ಲಿ ಸರ್ಪಗಾವಲು ಹಾಕಿ ಕಾಯುತ್ತಿದ್ದ ಪೊಲೀಸರು ಅದಕ್ಕೆ ಅವಕಾಶ ನೀಡದಾದಾಗ ಹೋರಾಟಗಾರರು ವಿವಿಧ ವಾಹನಗಳ ಮೂಲಕ ಬೆಂಗಳೂರಿನತ್ತ ಹೊರಟರು.

ಇದೇ ವೇಳೆ ಹೋರಾಟಗಾರರು ಜಿಲ್ಲಾ ಕೇಂದ್ರದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಗಳೂರಿಗೆ ವಾಪಾಸಾಗುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ಕಾರಿಗೆ ಚದುಲಪುರ ಕ್ರಾಸ್‌ನಲ್ಲಿ ಘೇರಾವ್ ಹಾಕಲು ಮುಂದಾದರು. ಆದರೆ, ಪೊಲೀಸರು ಅದಕ್ಕೆ ಅವಕಾಶ ನೀಡದೆ ಸಚಿವರ ಕಾರು ಅಲ್ಲಿಂದ ಮುಂದೆ ಸಾಗಲು ಅನುವು ಮಾಡಿಕೊಟ್ಟರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೈತಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ‘ನಾವು ಶಾಂತಿಯುತ ಪರೇಡ್‌ ನಡೆಸಲು ಮುಂದಾದರೆ ಪ್ರತಿಯೊಂದು ಹಳ್ಳಿಯಲ್ಲಿ ಪೊಲೀಸರು ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡುವ ಮೂಲಕ ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಒಂದೆಡೆ ಜಿಲ್ಲೆಯಲ್ಲಿ ಎಸ್ಪಿ ಅವರು ರೈತರನ್ನು ತಡೆಯುವುದಿಲ್ಲ ಎಂದು ಹೇಳುತ್ತಾರೆ. ಆದರೆ ಮತ್ತೊಂದೆಡೆ ಪೊಲೀಸರು ಎಲ್ಲೆಡೆ ರೈತರ ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡುವ ಜತೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ರೈತರಿಗೆ ಸಹ ತೊಂದರೆ ನೀಡುತ್ತಿದ್ದಾರೆ. ಇದೇನಾ ಪ್ರಜಾಪ್ರಭುತ್ವ ರಾಷ್ಟ್ರ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಪೊಲೀಸರ ದಬ್ಬಾಳಿಕೆ ಅತಿಯಾದರೆ ರಾಜ್ಯದಲ್ಲಿ ಕೂಡ ದೆಹಲಿಯ ಸನ್ನಿವೇಶ ರಾಜ್ಯದಲ್ಲಿ ಉದ್ಭವವಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ, ರಾಜ್ಯ ಸರ್ಕಾರ ರೈತರನ್ನು ತಡೆಯುವ ಕೆಲಸ ಕೈಬಿಡಬೇಕು’ ಎಂದು ಆಗ್ರಹಿಸಿದರು.

ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮನಾಥ್, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ವಿವಿಧ ತಾಲ್ಲೂಕು ಘಟಕಗಳ ಪದಾಧಿಕಾರಿಗಳಾದ ಮಂಜುನಾಥ್, ಮುನಿನಂಜಪ್ಪ, ಬಿ.ನಾರಾಯಣಸ್ವಾಮಿ, ಆಯಾತುಲ್ಲಾಖಾನ್, ರಾಮಾಂಜನಪ್ಪ, ಲಕ್ಷ್ಮಣರೆಡ್ಡಿ, ಮಾಳಪ್ಪ, ಬಯ್ಯಾರೆಡ್ಡಿ, ರಮಣಾರೆಡ್ಡಿ ಅವರ ನೇತೃತ್ವದಲ್ಲಿ ರೈತರು ಬೆಂಗಳೂರಿನತ್ತ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.