ADVERTISEMENT

ಕೋವಿಡ್- 19 ಭೀತಿಗೆ ತತ್ತರಿಸಿದ ಕುಕ್ಕುಟೋದ್ಯಮ

ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದಿಂದ ಉದ್ಯಮಕ್ಕೆ ಬರೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 11:36 IST
Last Updated 16 ಮಾರ್ಚ್ 2020, 11:36 IST
ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿಯ ಕೋಳಿ ಫಾರಂ
ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿಯ ಕೋಳಿ ಫಾರಂ   

ಚಿಂತಾಮಣಿ: ಕೋಳಿ ಮಾಂಸ ಸೇವನೆಯಿದ ಕೊರೊನಾ ಸೋಂಕು ತಗುಲುತ್ತದೆ ಎಂಬ ವದಂತಿ, ಅಪಪ್ರಚಾರದಿಂದ ಕುಕ್ಕುಟೋದ್ಯಮಕ್ಕೆ ದೊಡ್ಡಪೆಟ್ಟು ಬಿದ್ದಿದೆ.

ತಾಲ್ಲೂಕಿನಲ್ಲಿ ಕೋಳಿ ಮಾಂಸಕ್ಕೆ ಬೇಡಿಕೆ ಕುಸಿದಿದ್ದು ಬೆಲೆಯಲ್ಲೂ ದಾಖಲೆ ಇಳಿಕೆಯಾಗಿದೆ. ಉದ್ಯಮಕ್ಕೆಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕೋಳಿ ಫಾರಂ ಮಾಲೀಕರು ಹಾಗೂ ಅಲ್ಲಿ ಕೆಲಸ ಮಾಡುವ ಕೆಲಸಗಾರರು ಬೀದಿಗೆ ಬೀಳುವಂತಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಂದ ಜನರು ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಗೆ ಹಿಂಜರಿಯುತ್ತಿದ್ದಾರೆ. ಸುಮಾರು 2 ತಿಂಗಳಿನಿಂದ ಕೋಳಿ ಮಾಂಸದ ಬೆಲೆ ದಿನ-ದಿನಕ್ಕೂ ಇಳಿಮುಖವಾಗುತ್ತಿದೆ. 1 ಕೆ.ಜಿ. ಕೋಳಿ ಮಾಂಸದ ಬೆಲೆ ₹60-80ಗೆ ಕುಸಿದಿದೆ. ಧಾರಣೆ ಕುಸಿದಿದ್ದರೂ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗದಿರುವುದು ಕುಕ್ಕುಟೋದ್ಯಮಿಗಳನ್ನು ಚಿಂತೆಗೀಡು ಮಾಡಿದೆ.

ADVERTISEMENT

ಕಳೆದ 20 ದಿನಗಳಿಂದ ತಾಲ್ಲೂಕು ಹಾಗೂ ಜಿಲ್ಲೆಯಲ್ಲಿ ಕುಕ್ಕುಟೋದ್ಯಮ ನಲುಗಿ ಹೋಗಿದೆ. 2 ತಿಂಗಳು ಕಳೆದರೂ ಉದ್ಯಮ ಚೇತರಿಸಿಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಕೋಳಿ ಮಾಂಸ ತಿಂದರೆ ಕೊರೊನಾ ವೈರಸ್ ಹರಡುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ವದಂತಿಗಳಿಂದಾಗಿ ಉದ್ಯಮ ವಿನಾಶದ ಅಂಚಿಗೆ ಸರಿಯುತ್ತಿದೆ. ಒಂದೆರೆಡು ತಿಂಗಳು ಇದೇ ಪರಿಸ್ಥಿತಿ ಮುಂದುವರೆದರೆ ಕುಕ್ಕುಟೋದ್ಯಮವೇ ನಿರ್ನಾಮವಾಗುತ್ತದೆ ಎಂದು ಕುಕ್ಕುಟೋದ್ಯಕ್ಷ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿ.ಕೃಷ್ಣಪ್ಪ ಆತಂಕ ವ್ಯಕ್ತಪಡಿಸಿದರು.

ಕೋಳಿಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಕಾಯಿಲೆಯ ಚಿತ್ರಗಳನ್ನು ಬಳಸಿಕೊಂಡು, ಅದನ್ನೇ ಕೊರೊನಾ ವೈರಸ್ ಬಾಧಿತ ಕೋಳಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಲಾಗುತ್ತಿದೆ. ಜತೆಗೆ ಈಚೆಗೆ ಕೆಲವೆಡೆ ಹಕ್ಕಿಗಳು ಸಾವನ್ನಪ್ಪಿದ್ದರಿಂದ ಹಕ್ಕಿಜ್ವರ ಎಂದು ವದಂತಿ ಹರಡಿತು. ಈ ಕಾರಣಗಳಿಂದಾಗಿ ಕೋಳಿ ಮತ್ತು ಮೊಟ್ಟೆ ಮಾರಾಟದ ವಹಿವಾಟು ಪಾತಾಳಕ್ಕೆ ಕುಸಿದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಿದಾಡುತ್ತಿದ್ದಾಗ ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕಿತ್ತು. ಅಲ್ಲೊಬ್ಬರು ಇಲ್ಲೊಬ್ಬರು ಅಧಿಕಾರಿಗಳು ಹೇಳಿಕೆ ನೀಡಿದ್ದನ್ನು ಹೊರತುಪಡಿಸಿ ಸರ್ಕಾರ ಸೂಕ್ತವಾದ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕುಕ್ಕಟೊದ್ಯಮ ನಾಶವಾದರೆ ಅದರ ಪರಿಣಾಮ ರೈತರ ಮೇಲಾಗುತ್ತದೆ ಎಂದು ಜಿ.ವಿ.ಕೃಷ್ಣಪ್ಪ ಹೇಳಿದರು.

ಕುಕ್ಕುಟೋದ್ಯಮ ನಂಬಿಕೊಂಡು ಬದುಕುತ್ತಿದ್ದ ಸಾವಿರಾರು ಕುಟುಂಬಗಳ ಆದಾಯಕ್ಕೆ ಕತ್ತರಿ ಬಿದ್ದಿದೆ. ಸರ್ಕಾರ ಮೀನ-ಮೇಷ ಎಣಿಸದೆ ಕೂಡಲೇ ಉದ್ಯಮದ ನೆರವಿಗೆ ಧಾವಿಸಬೇಕು ಎನ್ನುತ್ತಾರೆ ಪ್ರಗತಿಪರ ರೈತ ಕುರುಟಹಳ್ಳಿ ರಾಧಾಕೃಷ್ಣ.

ಕೋಳಿ ಮಾಂಸ ಸೇವನೆಯಿಂದ ಕೊರೊನಾ ಸೋಂಕು ಹರಡುವುದಿಲ್ಲ. ವದಂತಿಗಳನ್ನು ನಂಬಬೇಡಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿಡಾ.ರಾಮಚಂದ್ರಾರೆಡ್ಡಿ ಮನವಿ ಮಾಡಿದ್ದಾರೆ.

ಇಂತಹ ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ. ಸಾಲದ ಕಂತು ಕಟ್ಟಬೇಕು, ಕಾರ್ಮಿಕರಿಗೆ ವೇತನ ನೀಡಬೇಕು. ಕಂಪನಿಗಳು ನಮಗೆ ಹಣ ನೀಡುತ್ತಿಲ್ಲ. ದಿಕ್ಕೇ ತೋಚದಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಕೋಳಿ ಫಾರಂ ಮಾಲೀಕರಾಧಾಕೃಷ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.