ADVERTISEMENT

ದಲಿತ ಸಿ.ಎಂ; ವಿಧಾನಸೌಧಕ್ಕೆ ಮುತ್ತಿಗೆ: ದಲಿತ ಸಂಘಟನೆಗಳ ಮುಖಂಡರ ಎಚ್ಚರಿಕೆ

ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:27 IST
Last Updated 4 ನವೆಂಬರ್ 2025, 7:27 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿದರು   

ಚಿಕ್ಕಬಳ್ಳಾಪುರ: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸುವ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಸಮಯ ಬಂದರೆ ದಲಿತರನ್ನೇ ಸಿ.ಎಂ ಮಾಡಬೇಕು. ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಎಚ್ಚರಿಸಿದರು. 

ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ‘ಕರ್ನಾಟಕದಲ್ಲಿ ಮತ್ತೆ ಮುಖ್ಯಮಂತ್ರಿ ಕುರ್ಚಿಗೆ ಕಿತ್ತಾಟ ಆರಂಭವಾಗಿದೆ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಎಂಬ ಬಣ ಆಗಿದೆ. ಸಿದ್ದರಾಮಯ್ಯ ಅವರು ಮುಂದುವರಿಯಲು ನಮ್ಮ ಅಭ್ಯಂತರವಿಲ್ಲ. ಆದರೆ ಬದಲಾವಣೆ ಆದರೆ ದಲಿತರ ಸಮುದಾಯದ ಮುಖಂಡರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹಿಸಿದರು.

ಹಿಂದೆಯೂ ಒಮ್ಮೆ ಈ ವಿಚಾರವಾಗಿ ಹೋರಾಟಗಳು ರಾಜ್ಯದಲ್ಲಿ ನಡೆದಿದ್ದವು. ಮತ್ತೆ ದಲಿತ ಸಂಘಟನೆಗಳು ಈ ಹೋರಾಟಕ್ಕೆ ಮರುಜೀವ ನೀಡುತ್ತಿವೆ. ನ.20ರವರೆಗೆ ರಾಜ್ಯದಾದ್ಯಂತ ದಲಿತ ಸಿ.ಎಂ ಹೋರಾಟ ನಡೆಯಲಿದೆ ಎಂದರು.

ADVERTISEMENT

ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ಡಾ.ಜಿ. ಪರಮೇಶ್ವರ, ಎಚ್‌.ಸಿ.ಮಹದೇವಪ್ಪ, ಸತೀಶ ಜಾರಕಿಹೊಳಿ ಇವರಲ್ಲಿ ಯಾರನ್ನಾದರೂ ಮುಖ್ಯಮಂತ್ರಿ ಮಾಡಲಿ. ಆದರೆ ದಲಿತ ಮುಖ್ಯಮಂತ್ರಿ ವಿಚಾರ ಬಂದಾಗ ಪಕ್ಷವು ಈ ಕೂಗನ್ನು ದಮನಿಸುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಒಂದೂವರೆ ಕೋಟಿ ಜನರು ಇದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ ಅವರು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಒಂದು ವೇಳೆ ಕಾಂಗ್ರೆಸ್  ದಲಿತ ಮುಖ್ಯಮಂತ್ರಿ ಮಾಡದಿದ್ದರೆ ಆ ಪಕ್ಷಕ್ಕೆ ನಮ್ಮ ಶಾಪ ತಟ್ಟುತ್ತದೆ ಎಂದು ಕಿಡಿಕಾರಿದರು.

ಖರ್ಗೆ ಅವರು ಮುಖ್ಯಮಂತ್ರಿ ಆಗುವುದಾದರೆ ಸಹಕಾರ ನೀಡಲು ಸಿದ್ಧ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಆ ಪ್ರಕಾರ ದಲಿತರಿಗೆ ಸಹಕರಿಸಬೇಕು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ದಲಿತರು ಶಿವಕುಮಾರ್ ಅವರನ್ನು ಬೆಂಬಲಿಸಿ ಮುಖ್ಯಮಂತ್ರಿ ಮಾಡುವರು ಎಂದರು.

ಒಂದು ವೇಳೆ ಬೇರೆ ಹೆಸರುಗಳನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಮಾಡಿದರೆ ರಾಜ್ಯದಾದ್ಯಂತ ದಲಿತರನ್ನು ಜಾಗೃತಗೊಳಿಸಲಾಗುವುದು. ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಸಿ.ಎಂ ಕುರ್ಚಿ ಕಿತ್ತುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ದಸಂಸ ರಾಜ್ಯ ಸಂಚಾಲಕ ಬಿ.ಎನ್. ಗಂಗಾಧರ, ಕಾಂಗ್ರೆಸ್ ಪಕ್ಷಕ್ಕೆ ದಲಿತರ ಮತ ಮಾತ್ರ ಬೇಕು. ತಾತನ ಕಾಲದಿಂದಲೂ ಆ ಪಕ್ಷಕ್ಕೆ ಮತ ನೀಡಿದ್ದೇವೆ. ನಮಗೆ ಏಕೆ ಮುಖ್ಯಮಂತ್ರಿ ಸ್ಥಾನ ಕೊಡಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮತ್ತು ಸಿದ್ದರಾಮಯ್ಯ ಸಿ‌.ಎಂ‌ ಆಗಲು ದಲಿತರು ಕಾರಣ ಎಂದರು.

ಸಮತಾ ಸೈನಿಕ ದಳದ ಜಿ.ಸಿ ವೆಂಕಟರಮಣಪ್ಪ, ದಲಿತ ಸೇನೆಯ ಜಗನ್ನಾಥ್, ದಲಿತ ಸಂರಕ್ಷಣಾ ವೇದಿಕೆಯ ಶಂಕರ್, ಅಶ್ವತ್ಥ್ ಅಂತ್ಯಜ, ಮುರುಳಿ, ಕೃಷ್ಣಮೂರ್ತಿ, ಜಿ.ಎನ್.ವಿ ಬಾಬು, ಅರುಣ್, ಚಿಕ್ಕನರಸಿಂಹಪ್ಪ, ಈಶ್ವರಪ್ಪ, ಶ್ರೀಧರ್ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

Cut-off box - ‘ಕಾಂಗ್ರೆಸ್‌ಗೆ ಉಳಿಗಾಲವಿಲ್ಲ’ ಪ್ರಜಾ ವಿಮೋಚನಾ ಸಂಘಟನೆಯ ಮುನಿ ಆಂಜನಪ್ಪ ಮಾತನಾಡಿ ಈ ಹಿಂದೆ ದಲಿತರಿಗೆ ರಾಜಕೀಯ ಪ್ರಜ್ಞೆ ಇರಲಿಲ್ಲ. ಬಲಾಢ್ಯ ಜಾತಿಗಳು ಆಳ್ವಿಕೆ ಮಾಡುತ್ತಿವೆ. ಈಗ ಮುಖ್ಯಮಂತ್ರಿ ಸ್ಥಾನ ಪಡೆಯಬೇಕು ಎನ್ನುವ ಹಟಕ್ಕೆ ಬಿದ್ದಿದ್ದೇವೆ. ನಾವು ಆಳ್ವಿಕೆ ನಡೆಸಬೇಕು. ಒಂದು ವೇಳೆ ಕಾಂಗ್ರೆಸ್ ಮತ್ತೆ ಮೋಸ ಮಾಡಿದರೆ ಆ ಪಕ್ಷಕ್ಕೆ ರಾಜ್ಯದಲ್ಲಿ ಉಳಿಗಾಲವಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.