ADVERTISEMENT

ಚಿಕ್ಕಬಳ್ಳಾಪುರ: ನರೇಗಾ ಅಡಿ 38 ಶಾಲೆಗಳ ಅಭಿವೃದ್ಧಿ

ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಫೌಜಿಯಾ ತರನ್ನುಮ್

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 3:26 IST
Last Updated 9 ಆಗಸ್ಟ್ 2020, 3:26 IST
ಜಿಲ್ಲಾ ಪಂಚಾಯಿತಿ ಸಿಇಒ ಬಿ.ಫೌಜಿಯಾ ತರನ್ನುಮ್ ಅವರು ಮುದ್ದೇನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾಮಗಾರಿ ವೀಕ್ಷಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಬಿ.ಫೌಜಿಯಾ ತರನ್ನುಮ್ ಅವರು ಮುದ್ದೇನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾಮಗಾರಿ ವೀಕ್ಷಿಸಿದರು.   

ಚಿಕ್ಕಬಳ್ಳಾಪುರ: ‘ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಜಿಲ್ಲೆಯಲ್ಲಿ 38 ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

ತಾಲ್ಲೂಕಿನ ಮುದ್ದೇನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನರೇಗಾ ಯೋಜನೆ ಅಡಿ ಕೈಗೆತ್ತಿಕೊಂಡ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆದ ಬಳಿಕ ಅವರು ಮಾತನಾಡಿದರು.

‘ಪ್ರತಿ ಶಾಲೆಯ ಪರಿಸರವನ್ನು ಮಕ್ಕಳ ಕಲಿಕೆಗೆ ಉತ್ತೇಜಿಸುವಂತೆ ರೂಪಿಸಬೇಕು. ಗೋಡೆಗಳನ್ನು ಸಹ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ಅಂದಗೊಳಿಸುವ ಕೆಲಸಗಳಾಗಬೇಕು. ತರಗತಿಗಳು ಮಕ್ಕಳಿಗೆ ಮುದ ನೀಡುವ ಜತೆಗೆ ಅವರ ಬೌದ್ಧಿಕ ವಿಕಸನಕ್ಕೆ ಸಹಕಾರಿಯಾಗಿರಬೇಕು’ ಎಂದು ಹೇಳಿದರು.

ADVERTISEMENT

‘ಶಾಲೆಯ ಆವರಣದಲ್ಲಿ ಕಬಡ್ಡಿ, ಕೋಕೋ, ವಾಲಿಬಾಲ್‌ ಕ್ರೀಡೆಗಳಿಗೆ ಅಗತ್ಯವಾದ ಮೈದಾನಗಳನ್ನು ನಿರ್ಮಿಸಬೇಕು. ಶಾಲೆಯ ಆವರಣದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯಗಳನ್ನು ಅಚ್ಚುಕಟ್ಟಾಗಿ ಇಟ್ಟಿರಬೇಕು. ಕೈತೋಟ ಬೆಳೆಸಲು ಮಕ್ಕಳಿಗೆ ಪ್ರೇರೇಪಿಸುವ ಕೆಲಸಗಳಾಗಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಂ.ಮುನೇಗೌಡ ಮಾತನಾಡಿ, ‘ನರೇಗಾ ಅಡಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುತ್ತಿರುವುದು ಸಂತಸದ ವಿಚಾರ. ಪೋಷಕರಲ್ಲಿರುವ ಖಾಸಗಿ ಶಾಲೆಗಳ ವ್ಯಾಮೋಹ ತಡೆಯಬೇಕಾದರೆ ಸರ್ಕಾರಿ ಶಾಲೆಗಳನ್ನು ಸುಸಜ್ಜಿತವಾಗಿ ಪುನಶ್ಚೇತನಗೊಳಿಸುವ ಅಗತ್ಯವಿದೆ’ ಎಂದು ಹೇಳಿದರು.

‘ದೇಶ ಕಂಡ ಮೇಧಾವಿ, ಖ್ಯಾತ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರ ಹುಟ್ಟೂರಿನಲ್ಲಿ ಸರ್ಕಾರಿ ಪ್ರೌಢಶಾಲೆಯನ್ನು ಸುಂದರವಾಗಿ, ಮಾದರಿಯಾಗಿ ರೂಪಿಸುತ್ತಿರುವುದು ಹೆಮ್ಮೆಯ ವಿಚಾರ’ ಎಂದು ತಿಳಿಸಿದರು.

ಬಳಿಕ ಸಿಇಒ ಅವರು ಪೆರೇಸಂದ್ರ ಮತ್ತು ಆರೂರು ಗ್ರಾಮ ಪಂಚಾಯಿತಿಗಳ ಜಂಟಿ ಸಹಭಾಗಿತ್ವದಲ್ಲಿ ಅವುನಾಗನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಘನ ಮತ್ತು ತ್ಯಾಜ್ಯ ಘಟಕಕ್ಕೆ ಭೇಟಿ ನೀಡಿ ಪ್ರಗತಿ ಕಾಮಗಾರಿಗಳನ್ನು ವೀಕ್ಷಿಸಿದರು.

‘ಶೀಘ್ರದಲ್ಲಿ ಘಟಕದ ಕಾಮಗಾರಿ ಪೂರ್ಣಗೊಳಿಸಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಹಳ್ಳಿಗಳಲ್ಲಿ ಜನರಿಗೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು’ ಎಂದು ಹೇಳಿದರು.

ನಂತರ, ಫೌಜಿಯಾ ತರನ್ನುಮ್ ಅವರು ದೇವಸ್ಥಾನದ ಹೊಸಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಂಗನವಾಡಿ ಆವರಣದಲ್ಲಿ ನಿರ್ಮಿಸಲಾಗಿರುವ ಉದ್ಯಾನ, ಮಳೆ ನೀರು ಸಂಗ್ರಹ ವ್ಯವಸ್ಥೆ ಕಾಮಗಾರಿ ವೀಕ್ಷಿಸಿದರು. ರೆಡ್ಡಿಗೊಲ್ಲವಾರಹಳ್ಳಿ ಅಂಗನವಾಡಿಗೆ ಕೇಂದ್ರಗಳ ದುರಸ್ತಿ ಕಾಮಗಾರಿ ಹಾಗೂ ಮಳೆ ನೀರು ಸಂಗ್ರಹ ವ್ಯವಸ್ಥೆ ಕಾಮಗಾರಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.