ಚಿಂತಾಮಣಿ: ಜಾರ್ಖಂಡ್‌ನಲ್ಲಿ ನಡೆದ ಜಿಲ್ಲಾ ನ್ಯಾಯಾಧೀಶರ ಕೊಲೆಯನ್ನು ಖಂಡಿಸಿ ಹಾಗೂ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ನಗರದ ಜೆಎಂಎಫ್‌ಸಿ ನ್ಯಾಯಾಲಯದ ವಕೀಲರು ಶನಿವಾರ ಕಾರ್ಯಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ಎಸ್.ರಾಜಾರಾಂ ಮಾತನಾಡಿ, ಬೆಳಗ್ಗೆ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿರುವಾಗ ನ್ಯಾಯಾಧೀಶರಿಗೆ ವಾಹನ ಡಿಕ್ಕಿಹೊಡೆಸಿ ಕೊಲೆ ಮಾಡಿದ್ದಾರೆ. ಇದು ಆಕಸ್ಮಿಕವಲ್ಲ, ಉದ್ದೇಶಪೂರ್ವಕ ಹಾಗೂ ಪೂರ್ವಯೋಜಿತ ಕೃತ್ಯವಾಗಿದೆ ಎಂದು ಆರೋಪಿಸಿದರು.
ನ್ಯಾಯಾಧೀಶರನ್ನು ಕೊಲೆ ಮಾಡಿರುವುದು ಖಂಡನೀಯ. ಸಮಾಜ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬ ಚಿಂತನೆಯನ್ನು ಮಾಡಬೇಕು. ನ್ಯಾಯಾಧೀಶರಿಗೆ ರಕ್ಷಣೆ ಇಲ್ಲ ಎಂದರೆ ಸಾಮಾನ್ಯ ಜನರ ಪಾಡೇನು?. ನ್ಯಾಯಾಧೀಶರಿಗೆ ರಕ್ಷಣೆ ನೀಡಲು ಸಮರ್ಪಕ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.
ನ್ಯಾಯ ಸಿಗದವರು, ತೊಂದರೆಯಾದವರು ನ್ಯಾಯವನ್ನು ಕೋರಿ ನ್ಯಾಯಾಲಯಕ್ಕೆ ಬರುತ್ತಾರೆ. ಅಂತಹವರಿಗೆ ವಕೀಲರು, ನ್ಯಾಯಾಧೀಶರು ನ್ಯಾಯ ಒದಗಿಸುತ್ತಾರೆ. ನ್ಯಾಯದಾನ ಮಾಡುವ ನ್ಯಾಯಾಧೀಶರನ್ನು ಬಹಿರಂಗವಾಗಿ ಕೊಲೆ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಸಂಘದ ಉಪಾಧ್ಯಕ್ಷ ಶಿವಾನಂದ್, ಕಾರ್ಯದರ್ಶಿ ಶ್ರೀನಾಥ್, ಮಾಜಿ ಅಧ್ಯಕ್ಷ ಮಂಜುನಾಥರೆಡ್ಡಿ, ವಕೀಲರಾದ ವೆಂಕಟಾಚಲಪತಿ, ಶಿವಕುಮಾರ್, ಶಿವಾರೆಡ್ಡಿ, ಗೋಪಿನಾಥ್, ಈಶ್ವರ್‌ಗೌಡ, ಅನ್ವರ್‌ಖಾನ್, ವಜೀರ್, ಶ್ರೀದೇವಿ, ಎ.ವಿ.ಬೈರಾರೆಡ್ಡಿ, ದೇವರಾಜ್, ಚಂದ್ರಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.