ಚಿಂತಾಮಣಿ: ಅಂಗವಿಕಲರ ಓಡಾಟದ ಅನುಕೂಲಕ್ಕಾಗಿ ಸರ್ಕಾರ ಉಚಿತವಾಗಿ ನೀಡುವ ಯಂತ್ರಚಾಲಿತ ತ್ರಿಚಕ್ರ ವಾಹನವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಮತ್ತು ಜಾಗರೂಕತೆಯಿಂದ ಚಲಾಯಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸಿ ಮಾತನಾಡಿದರು.
ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಶಾಸಕರ ಸಂಪೂರ್ಣ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲಾಗುತ್ತಿದೆ. ಅಂಗವಿಕಲರಲ್ಲಿ ಮತ್ತಷ್ಟು ಆತ್ಮಸ್ಥೈರ್ಯ ತುಂಬಬೇಕು. ₹2 ಕೋಟಿ ವೆಚ್ಚದ ಸೌಲಭ್ಯ ಒಂದೇ ಬಾರಿಗೆ ತಾಲ್ಲೂಕಿನಲ್ಲಿ ದೊರೆಯುತ್ತಿರುವುದು ದಾಖಲೆಯಾಗಿದೆ ಎಂದರು.
ಸಂಚಾರ ನಿಯಮಗಳ ಕುರಿತು ಹೆಚ್ಚಿನ ಅರಿವನ್ನು ಹೊಂದುವ ಮೂಲಕ ಸುರಕ್ಷಿತ ಹಾಗೂ ಜಾಗರೂಕತೆಯ ಚಾಲನೆಗೆ ಆದ್ಯತೆ ನೀಡಬೇಕು. ವೇಗಮಿತಿ ಕಡೆಯೂ ಹೆಚ್ಚಿನ ಗಮನ ಹರಿಸಬೇಕು. ಈಗಾಗಲೇ ವೈದ್ಯಕೀಯ ಅರ್ಹತಾ ಪರೀಕ್ಷೆ ನಡೆಸಿ ಅರ್ಹರಿಗೆ ಮಾತ್ರ ತ್ರಿಚಕ್ರ ವಾಹನ ನೀಡಲಾಗುತ್ತಿದೆ ಎಂದರು.
ಗ್ರಾಮೀಣ ಪ್ರದೇಶಗಳಿಂದ ತಾಲ್ಲೂಕು ಕೇಂದ್ರಕ್ಕೆ ಆಗಮಿಸಲು ಹಾಗೂ ದೈನಂದಿನ ಚಟುವಟಿಕೆಗೆ ತ್ರಿಚಕ್ರವಾಹನ ಸಹಕಾರಿ. ಈಗಾಗಲೇ 84 ವಾಹನಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಉಳಿದ 116 ವಾಹನಗಳನ್ನು ನಿಯಮಾನುಸಾರ ಪರಿಶೀಲಿಸಿ ವಿತರಿಸಲಾಗುವುದು ಎಂದರು.
ಸಮರ್ಥನಂ ಇಂಟರ್‌ನ್ಯಾಷನಲ್ ಸ್ಥಾಪಕ ಮತ್ತು ಅಧ್ಯಕ್ಷ ಡಾ.ಮಹಾಂತೇಶ್ ಜಿ. ಕಿವಡಸಣ್ಣವರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರೆಡ್ಡಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಎನ್.ಎಂ. ಜಗದೀಶ್, ಪೌರಾಯುಕ್ತ ಚಲಪತಿ, ನಗರಸಭೆ ಅಧ್ಯಕ್ಷ ಆರ್.ಜಗನ್ನಾಥ್, ಉಪಾಧ್ಯಕ್ಷೆ ಕೆ.ರಾಣಿಯಮ್ಮ, ತಹಶೀಲ್ದಾರ್ ಸುದರ್ಶನ ಯಾದವ್, ತಾಲ್ಲೂಕು ಪಂಚಾಯಿತಿ ಇಒ ಎಸ್.ಆನಂದ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಶ್ರೀನಾಥಬಾಬು, ನಗರಸಭೆ ಸದಸ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಅಧಿಕಾರಿಗೆ ತರಾಟೆ
200 ತ್ರಿಚಕ್ರ ವಾಹನ ತರಿಸದ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಎನ್.ಎಂ.ಜಗದೀಶ್ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು. 84 ವಾಹನ ಮಾತ್ರ ತರಲಾಗಿದೆ. ಉಳಿದ 116 ವಾಹನಗಳನ್ನು ತರದೇ ಇರುವ ಕಾರಣಕ್ಕೆ ಸಚಿವರು ತಮ್ಮ ಭಾಷಣದಲ್ಲೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅಂಗವಿಕಲರನ್ನು ಇಲ್ಲಿಗೆ ಕರೆಸಿ ಬರಿಗೈಲಿ ಕಳುಹಿಸುವುದು ಸರಿಯೇ? ಇಂತಹ ನಾಲಾಯಕ್ ಅಧಿಕಾರಿಯನ್ನು ನಾನು ಎಂದು ನೋಡಿಲ್ಲ. ನನಗೆ ಬಹಳ ಬೇಸರವಾಗುತ್ತಿದೆ. ಇದು ನನ್ನ ಕನಸಿನ ಕಾರ್ಯಕ್ರಮ. ಒಬ್ಬ ಅಧಿಕಾರಿಯ ನಿರ್ಲಕ್ಷ್ಯದಿಂದ ಎಲ್ಲ ಕಾರ್ಯಕ್ರಮ ಹಾಳಾಗಿ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.