ಚಿಂತಾಮಣಿ: ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಝಾನ್ಸಿ ಕ್ರೀಡಾಂಗಣದಲ್ಲಿ 14 ವರ್ಷ ಮತ್ತು 17 ವರ್ಷದ ಒಳಗಿನ ಬಾಲಕ, ಬಾಲಕಿಯರ ಕಬಡ್ಡಿ ಹಾಗೂ ಥ್ರೋ ಬಾಲ್ ಕ್ರೀಡಾಕೂಟವು ಶುಕ್ರವಾರ ಆರಂಭವಾಯಿತು.
ಕಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲೆಯ 6 ತಾಲ್ಲೂಕಿನ ತಂಡಗಳು ಭಾಗವಹಿಸಿದ್ದವು. 14 ಮತ್ತು 17 ವರ್ಷದ ಒಳಗಿನ ಎರಡು ವಿಭಾಗಗಳಲ್ಲಿ ತಲಾ ಆರು ತಂಡಗಳಂತೆ, ಬಾಲಕರ ವಿಭಾಗದಲ್ಲಿ 12 ಮತ್ತು ಬಾಲಕಿಯರ ವಿಭಾಗದಲ್ಲಿ 12 ಸೇರಿ 24 ತಂಡಗಳು ಭಾಗವಹಿಸಿದ್ದವು.
ಅದೇ ರೀತಿ ಥ್ರೋ ಬಾಲ್ ಕ್ರೀಡಾಕೂಟದಲ್ಲಿ 24 ತಂಡಗಳು ಭಾಗವಹಿಸಿದ್ದವು. ಧ್ವಜಾರೋಹಣ, ಪಥಸಂಚಲನ, ಕ್ರೀಡಾಪಟುಗಳ ಪರಿಚಯ ನಡೆಯಿತು.
17 ವರ್ಷದ ಒಳಗಿನ ಬಾಲಕರ ವಿಭಾಗದ ಕಬಡ್ಡಿಯಲ್ಲಿ ಚಿಂತಾಮಣಿ ತಾಲ್ಲೂಕಿನ ಆದರ್ಶ ಶಾಲೆ, ಬಾಲಕಿಯರ ವಿಭಾಗದಲ್ಲಿ ಚೇಳೂರು ತಾಲ್ಲೂಕಿನ ಚಿಲಕಲನೇರ್ಪು ತಂಡ, 14 ವರ್ಷದ ಒಳಗಿನ ಬಾಲಕರ ವಿಭಾಗದ ಕಬಡ್ಡಿಯಲ್ಲಿ ಗೌರಿಬಿದನೂರು ತಾಲ್ಲೂಕಿನ ತಂಡ, ಬಾಲಕಿಯರ ವಿಭಾಗದಲ್ಲಿ ಗುಡಿಬಂಡೆ ತಾಲ್ಲೂಕಿನ ತಂಡ ವಿಜೇತರಾಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾದರು.
ವಿಜೇತ ತಂಡಗಳ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಮಾರುತಿ, ರಮೇಶ, ವಿಜಿಕುಮಾರ, ರಂಗನಾಥ್, ಸುರೇಶ ಬಾಬು, ಉಷಾ, ಶ್ರೀಧರ್ ಹಿರೇಮಠ, ಪುನೀತ್ ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಪರಮೇಶ್ವರ್, ಉಪೇಂದ್ರ, ಗಿರೀಶ್, ನಾಗೇಶ್, ಶ್ರೀಕಾಂತ್, ಮಂಜುನಾಥ್, ವೇಣು, ಕಾರ್ಯನಿರ್ವಹಿಸಿದರು.
ಆರೋಪ: ಜಿಲ್ಲಾಮಟ್ಟದ ಕ್ರೀಡಾಕೂಟ ನಡೆಯುತ್ತಿದ್ದರೂ ಯಾವುದೇ ಪ್ರಚಾರವಿಲ್ಲದೆ, ಮಾದ್ಯಮಗಳಿಗೂ ಮಾಹಿತಿ ನೀಡದೆ ಶಿಕ್ಷಣ ಇಲಾಖೆ ಕಾಟಾಚಾರಕ್ಕೆಎಂಬಂತೆ ಕ್ರೀಡಾಕೂಟ ನಡೆಸುತ್ತಿದೆ ಎಂದು ಹಲವು ಹಿರಿಯ ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳನ್ನು ಹೊರತುಪಡಿಸಿ ಪ್ರೇಕ್ಷಕರೇ ಇರಲಿಲ್ಲ. ಉದ್ಘಾಟನಾ ಕಾರ್ಯಕ್ರಮದಲ್ಲಿ ಒಬ್ಬರಾದರೂ ಜನಪ್ರತಿನಿಧಿಗಳಾಗಲಿ, ಚುನಾಯಿತ ಪ್ರತಿನಿಧಿಗಳು, ಮುಖಂಡರು ಭಾಗವಹಿಸಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.