ADVERTISEMENT

ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬೇಡಿ

ಜನತಾ ದರ್ಶನದಲ್ಲಿ ಅಧಿಕಾರಿಗಳಿಗೆ ಶಾಸಕ ಡಾ.ಕೆ.ಸುಧಾಕರ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2018, 11:24 IST
Last Updated 18 ಜುಲೈ 2018, 11:24 IST
ಜನತಾ ದರ್ಶನದಲ್ಲಿ ಅಂಗವಿಕಲರೊಬ್ಬರು ಶಾಸಕ ಡಾ.ಕೆ.ಸುಧಾಕರ್ ಅವರಿಗೆ ಅಹವಾಲು ಸಲ್ಲಿಸಿದರು.
ಜನತಾ ದರ್ಶನದಲ್ಲಿ ಅಂಗವಿಕಲರೊಬ್ಬರು ಶಾಸಕ ಡಾ.ಕೆ.ಸುಧಾಕರ್ ಅವರಿಗೆ ಅಹವಾಲು ಸಲ್ಲಿಸಿದರು.   

ಚಿಕ್ಕಬಳ್ಳಾಪುರ: ‘ಪ್ರತಿಯೊಂದು ಇಲಾಖೆ ಅಧಿಕಾರಿಗಳು ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸುವ ಪ್ರವೃತ್ತಿ ಬಿಡಬೇಕು. ಬಡ ಜನರ ಕೆಲಸಗಳನ್ನು ಆದ್ಯತೆ ಮೆರೆಗೆ ಮಾಡಿಕೊಡಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುತ್ತದೆ’ ಎಂದು ಅಧಿಕಾರಿಗಳಿಗೆ ಶಾಸಕ ಡಾ.ಕೆ.ಸುಧಾಕರ್ ಖಡಕ್ ಎಚ್ಚರಿಕೆ ನೀಡಿದರು.

ತಾಲ್ಲೂಕು ಕಚೇರಿಯಲ್ಲಿ ಇತ್ತೀಚೆಗೆ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಅಹವಾಲು ಆಲಿಸುತ್ತ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಜನತಾ ದರ್ಶನದಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ವಾರದೊಳಗೆ ಬಗೆಹರಿಸಬೇಕು. ಮತ್ತೆ ಮತ್ತೆ ಸಾರ್ವಜನಿಕರು ಒಂದೇ ಸಮಸ್ಯೆಯನ್ನು ಹಿಡಿದು ತಮ್ಮ ಬಳಿ ಬಂದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇನೆ. ಜನತಾ ದರ್ಶನಕ್ಕೆ ಜನರು ಬರುವ ಪರಿ ನೋಡಿದರೆ ಅಧಿಕಾರಿಗಳು ಯಾರೂ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ ಎಂದು ತೋರುತ್ತಿದೆ. ಅಧಿಕಾರಿಗಳು ಕಚೇರಿಯಲ್ಲಿ ಕೂರುವುದು ಬಿಟ್ಟು ಕೆಲಸ ಮಾಡಲು ಮುಂದಾಗಬೇಕು’ ಎಂದು ಹೇಳಿದರು.

ADVERTISEMENT

ಶಾಸಕರು ನಡೆಸಿದ ಮೂರನೇ ಜನತಾ ದರ್ಶನದಲ್ಲಿ ಸುಮಾರು 120 ಅಹವಾಲುಗಳು ಸಲ್ಲಿಕೆಯಾದವು. ಪಿಂಚಣಿ ಬರುತ್ತಿಲ್ಲ. ಕಂದಾಯ ಅಧಿಕಾರಿಗಳು ಖಾತೆ ಮಾಡಿಕೊಡುತ್ತಿಲ್ಲ. ನಮ್ಮ ವಾರ್ಡ್‌ಗೆ ಕುಡಿಯುವ ನೀರು ಬರುತ್ತಿಲ್ಲ. ಶಾಲೆಯಲ್ಲಿ ಶಿಕ್ಷಕರಿಲ್ಲ. ರಸ್ತೆ ಹಾಳಾಗಿದೆ. ಸ್ಮಶಾನಕ್ಕೆ ಜಾಗವಿಲ್ಲ. ಪಡಿಚರ ಚೀಟಿ ಇಲ್ಲ ಎಂಬ ದೂರುಗಳು ಕೇಳಿಬಂದವು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ಮುಖಂಡ ಯಲುವಹಳ್ಳಿ ರಮೇಶ್, ತಹಶೀಲ್ದಾರ್ ಕೆ.ನರಸಿಂಹಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ಪಿ.ಸಂಜೀವಪ್ಪ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.