
ಚಿಕ್ಕಬಳ್ಳಾಪುರ: ಈಗಾಗಲೇ ಜಿಲ್ಲೆಯ ಕೆಲವು ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮ ಮಾಡಲಾಗಿದೆ. ಅದೇ ರೀತಿ ಚಿಕ್ಕಬಳ್ಳಾಪುರವನ್ನು ಸಹ ತಂಬಾಕು ಮುಕ್ತ ಜಿಲ್ಲೆಯಾಗಿಸಲು ಜಿಲ್ಲಾಡಳಿತ ಮುಂದಾಗಿದೆ. ಈ ಕಾರ್ಯಕ್ಕೆ ನಾಗರಿಕರು ಕೈ ಜೋಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ವೈ. ನವೀನ್ ಭಟ್ ಮನವಿ ಮಾಡಿದರು.
ನಗರದಲ್ಲಿ ಗುರುವಾರ ನಶೆಮುಕ್ತ ಭಾರತ್ ಮತ್ತು ತಂಬಾಕು ಮುಕ್ತ ಯುವ ಅಭಿಯಾನ ಹಾಗೂ ಮಾದಕ ವಸ್ತು ವ್ಯಸನ ತಡೆಗಟ್ಟುವ ಕುರಿತು ಆಯೋಜಿಸಿದ್ದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಶ್ರಿತ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಯುವಜನರು ಹೆಚ್ಚಾಗಿ ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ಯುವಜನರು ಮತ್ತು ಸಾರ್ವಜನಿಕರು ಮಾದಕ ವಸ್ತು ಹಾಗೂ ತಂಬಾಕು ಸೇವನೆ ತ್ಯಜಿಸಬೇಕು. ತಂಬಾಕು ಉತ್ಪನ್ನಗಳ ವ್ಯಸನಕ್ಕೆ ಬಲಿ ಆಗಿರುವವರಿಗೆ ಆರೋಗ್ಯ ಇಲಾಖೆಯ ಮೂಲಕ ನಿಕೋಟಿನ್ ಚೂಯಿಂಗ್ ಗಮ್ ನೀಡಿ ವ್ಯಸನದಿಂದ ಹೊರಬರಲು ಸಹಾಯ ಮಾಡಲಾಗುತ್ತಿದೆ ಎಂದು ಹೇಳಿದರು.
ನಶಾಮುಕ್ತ ಭಾರತ್ ಮತ್ತು ತಂಬಾಕು ಮುಕ್ತ ಯುವ ಅಭಿಯಾನದ ಅಂಗವಾಗಿ ಅಂಗವಿಕಲರಿಂದ ಬೈಕ್ ರ‍್ಯಾಲಿ ಆಯೋಜಿಸಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ‘ಇನ್ನು ಮುಂದೆ ಯಾವುದೇ ರೀತಿಯ ತಂಬಾಕು ಉತ್ಪನ್ನಗಳನ್ನು ಬಳಸುವುದಿಲ್ಲ, ಸೇವಿಸುವುದಿಲ್ಲ’ ಎಂದು ಪ್ರತಿಜ್ಞಾವಿಧಿ ಸ್ವೀಕರಿಸಿ ತಂಬಾಕು ಮುಕ್ತ ಸಮಾಜಕ್ಕೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪಾ ಅವರು ಮಾತನಾಡಿ, ಯುವಕರು ಪ್ರತಿ ರಾಷ್ಟ್ರದ ಶಕ್ತಿ. ಯುವ ಶಕ್ತಿಯು ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಕೊಡುಗೆ ನೀಡುತ್ತದೆ ಎಂದರು.
ಸಮುದಾಯ, ಕುಟುಂಬ, ಸ್ನೇಹಿತರು ಮಾತ್ರವಲ್ಲದೆ ಎಲ್ಲರೂ ಮಾದಕ ವ್ಯಸನದಿಂದ ಮುಕ್ತರಾಗಬೇಕು. ಬದಲಾವಣೆ ನಮ್ಮಿಂದಲೇ ಪ್ರಾರಂಭವಾಗಬೇಕಿದೆ ಎಂದು ತಿಳಿಸಿದರು.
‘ನನ್ನ ದೇಶವನ್ನು ಮಾದಕ ವಸ್ತು ವ್ಯಸನದಿಂದ ಮುಕ್ತಗೊಳಿಸಲು ನನ್ನ ಕೈಲಾದಷ್ಟು ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇನೆ’ ಎಂದು ನೆರೆದಿದ್ದವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಿರಣ್ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದಿಂದ ಆರಂಭಗೊಂಡ ಬೈಕ್ ರ‍್ಯಾಲಿ ಶಿಡ್ಲಘಟ್ಟ ರಸ್ತೆ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಜಿಲ್ಲಾ ನ್ಯಾಯಾಲಯದ ಮುಂಭಾಗದ ಮೂಲಕ ಮತ್ತೆ ಜಿಲ್ಲಾಡಳಿತ ಭವನ ತಲುಪಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಎಸ್.ಎಸ್ ಮಹೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರೆಡ್ಡಿ, ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಜ್ಯೋತಿ ಲಕ್ಷ್ಮಿ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.