ADVERTISEMENT

ಮದ್ಯದ ಅಮಲು; ಕಳ್ಳತನಕ್ಕೆ ಬಂದವ ಮನೆಯಲ್ಲಿಯೇ ಮಲಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 13:42 IST
Last Updated 9 ಫೆಬ್ರುವರಿ 2026, 13:42 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಗೌರಿಬಿದನೂರು: ಕಳ್ಳತನಕ್ಕೆ ಬಂದ ಕಳ್ಳ ಮದ್ಯದ ಅಮಲಿನಲ್ಲಿ ಮನೆಯೊಳಗೆ ಮಲಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಪ್ರಸಂಗ ಇಲ್ಲಿ ನಡೆದಿದೆ.

ನಗರ ಹೊರವಲಯದ ಹಳೇ ಆರ್‌ಟಿಒ ಕಚೇರಿ ಬಳಿಯ ಪ್ರೇಮನಾಥ್ ಅವರ ಮನೆಗೆ ಬಣ್ಣ ಬಳಿಯುವ ಕೆಲಸಕ್ಕೆ ದೇವರಾಜು (40) ಆಗಾಗ್ಗೆ ಬರುತ್ತಿದ್ದ.

ADVERTISEMENT

ಪ್ರೇಮನಾಥ್ ಕೆಲಸದ ನಿಮಿತ್ತ ಹೈದರಾಬಾದ್‌ಗೆ ಹೋಗಿದ್ದರು. ಈ ವಿಚಾರ ದೇವರಾಜ್‌ಗೆ ತಿಳಿದಿತ್ತು. ಭಾನುವಾರ ಮಧ್ಯರಾತ್ರಿ ದೇವರಾಜ್ ಮತ್ತು ಆತನ ಸ್ನೇಹಿತ ಪ್ರೇಮನಾಥ್ ಮನೆಯಲ್ಲಿ ಕಳ್ಳತನಕ್ಕೆ ಬಂದಿದ್ದಾರೆ. ಬೈಕ್‌ನ ನಂಬರ್ ಪ್ಲೇಟ್‌ಗೆ ಕಪ್ಪು ಕವರ್ ಸುತ್ತಿ ಸಮೀಪದ ಲೇಔಟ್‌ನಲ್ಲಿ ನಿಲ್ಲಿಸಿದ್ದಾರೆ.

ಪ್ರೇಮನಾಥ್ ಮನೆ ಚಾವಣಿ ತಗಡು ಕತ್ತರಿಸಿ ಒಳ ನುಗ್ಗಿದ್ದಾರೆ. ಬೀರುವಿನಲ್ಲಿದ್ದ ₹ 45 ಸಾವಿರ ಮತ್ತು ಚಿನ್ನದ ಆಭರಣ ದೋಚಿದ್ದಾರೆ.

ದೇವರಾಜ್ ಜೊತೆ ಬಂದಿದ್ದ ಆತನ ಸ್ನೇಹಿತ ಹಣ ಮತ್ತು ಆಭರಣದೊಂದಿಗೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಹೆಚ್ಚು ಮದ್ಯ ಸೇವಿಸಿದ್ದ ‌ದೇವರಾಜು ಮನೆಯಿಂದ ಹೊರಗೆ ಹೋಗಲಾಗದೆ ಸೋಫಾ ಮೇಲೆಯೇ ಮಲಗಿದ್ದಾನೆ.

ರಾತ್ರಿಯೇ ಇದನ್ನು ಗಮನಿಸಿದ ನೆರೆ ಮನೆಯವರು ಕಳ್ಳತನಕ್ಕೆ ಕತ್ತರಿಸಿದ್ದ ತಗಡಿಗೆ ಸಿಮೆಂಟ್ ಇಟ್ಟಿಗೆಗಳನ್ನು ಅಡ್ಡವಾಗಿ ಇಟ್ಟು ಕಾವಲು ಕಾದಿದ್ದಾರೆ. ಬೆಳಿಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ದೇವರಾಜು ಜೇಬಿನಲ್ಲಿ ₹ 5 ಸಾವಿರ ಸಿಕ್ಕಿದೆ, ಉಳಿದ ಹಣವನ್ನು ಸ್ನೇಹಿತ ತೆಗೆದುಕೊಂಡು ಹೋಗಿದ್ದಾನೆ.  

‘₹45 ಸಾವಿರ ಮತ್ತು ಬಂಗಾರದ ಆಭರಣಗಳು ಕಳ್ಳತನವಾಗಿದೆ’ ಎಂದು ಮನೆ ಮಾಲೀಕ ಪ್ರೇಮನಾಥ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.