ADVERTISEMENT

‘ಬಗರ್‌ಹುಕುಂ; ದಯಾಮರಣ ಕೊಡಿ’

ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ವಿರುದ್ಧ ದಲಿತ ಮುಖಂಡ ನಾರಾಯಣಪ್ಪ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಮೇ 2022, 10:32 IST
Last Updated 28 ಮೇ 2022, 10:32 IST
ಶಿಡ್ಲಘಟ್ಟ ತಾಲ್ಲೂಕಿನ ಕಲ್ಯಾಪುರದ ಸರ್ವೆ ನಂಬರ್ 60ರ ಜಮೀನಿನಲ್ಲಿ ನಾವು ಅನುಭವದಲ್ಲಿ ಇದ್ದೇವೆ ಎಂದು ಈಸ್ತೂರು ಗ್ರಾಮದ ಪರಿಶಿಷ್ಟ ಜಾತಿ ಕುಟುಂಬಗಳು ದಾಖಲೆಗಳನ್ನು ಪ್ರದರ್ಶಿಸುತ್ತಿರುವುದು
ಶಿಡ್ಲಘಟ್ಟ ತಾಲ್ಲೂಕಿನ ಕಲ್ಯಾಪುರದ ಸರ್ವೆ ನಂಬರ್ 60ರ ಜಮೀನಿನಲ್ಲಿ ನಾವು ಅನುಭವದಲ್ಲಿ ಇದ್ದೇವೆ ಎಂದು ಈಸ್ತೂರು ಗ್ರಾಮದ ಪರಿಶಿಷ್ಟ ಜಾತಿ ಕುಟುಂಬಗಳು ದಾಖಲೆಗಳನ್ನು ಪ್ರದರ್ಶಿಸುತ್ತಿರುವುದು   

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಕಲ್ಯಾಪುರದಲ್ಲಿ ಐದು ಮಂದಿ ಪರಿಶಿಷ್ಟ ಜಾತಿಯವರಿಗೆ ಬಗರ್‌ಹುಕುಂ ಯೋಜನೆಯಡಿ ಜಮೀನು ಮಂಜೂರಾಗಿದೆ. ಈ ಜಮೀನಿಗೆ ಜಿಲ್ಲಾಧಿಕಾರಿ ಸಾಗುವಳಿ ಚೀಟಿ ನೀಡುತ್ತಿಲ್ಲ ಎಂದು ದಲಿತ ಮುಖಂಡ ಈಸ್ತೂರು ನಾರಾಯಣಪ್ಪ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಪುರದ ಸರ್ವೆ ನಂ 60ರ ಜಮೀನಿನಲ್ಲಿ ಕಳೆದ 35 ವರ್ಷಗಳಿಂದ ನೆರೆಯ ಹೊಸಕೋಟೆ ತಾಲ್ಲೂಕು ಈಸ್ತೂರಿನ ಪರಿಶಿಷ್ಟ ಜಾತಿಯ ಜನರು ಉಳುಮೆ ಮಾಡುತ್ತಿದ್ದಾರೆ. ಈ ಜಮೀನು ಪರಿಶಿಷ್ಟರಿಗೆ ಮಂಜೂರು ಸಹ ಆಗಿದೆ. ಆದರೆ ಇಲ್ಲಿಂದ 20 ಕಿ.ಮೀ ದೂರದ ಸವರ್ಣಿಯರು ನಮಗೆ ಹಕ್ಕುಪತ್ರ ನೀಡದಂತೆ ಮಾಡಿದ್ದಾರೆ. ನಮ್ಮ ಮೇಲೆ ದೌರ್ಜನ್ಯ ಸಹ ನಡೆಸಿದ್ದಾರೆ ಎಂದು ದೂರಿದರು.

ಜಿಲ್ಲಾಧಿಕಾರಿ ಆರ್.ಲತಾ ಮತ್ತು ಈ ಹಿಂದೆ ಉಪವಿಭಾಗಾಧಿಕಾರಿಯಾಗಿದ್ದ ಹಾಗೂ ಈಗ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿರುವ ಎಚ್.ಅಮರೇಶ್ ಅವರು ನಮಗೆ ನ್ಯಾಯದೊರಕಿಸಿಕೊಟ್ಟಿಲ್ಲ. ಸವರ್ಣಿಯರು ಸಾಗುವಳಿ ಮಾಡದಿದ್ದರೂ ಅವರಿಗೆ ಸಾಗುವಳಿ ಚೀಟಿ ನೀಡಿದ್ದಾರೆ ಎಂದು ಹೇಳಿದರು.

ADVERTISEMENT

ಸಂವಿಧಾನವನ್ನು ಅಧಿಕಾರಿಗಳು ಗಾಳಿಗೆ ತೂರಿದ್ದಾರೆ.‌ ಸಂವಿಧಾನದ ಅಡಿಯಲ್ಲಿ ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಕೆಲಸ ಮಾಡುತಿಲ್ಲ. ನಮ್ಮ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ, ಕಂದಾಯ ಸಚಿವರು, ಸರ್ಕಾರದ ಕಾರ್ಯದರ್ಶಿಗೂ ದೂರು ನೀಡಿದ್ದೇವೆ. ಆದರೆ ಯಾವುದೇ ಕ್ರಮವಾಗಿಲ್ಲ.ನಮಗೆ ಅನ್ಯಾಯವಾಗಿದೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ದಯಾಮರಣ ಕೊಡಿ ಎಂದರು.

ಈ ವಿಚಾರವನ್ನು ಸಚಿವರ ಗಮನಕ್ಕೂ ತರಲಾಗಿದೆ. ಪರಿಶಿಷ್ಟರ ಸಮಸ್ಯೆಗಳಿಗೆ ಸ್ಪಂದಿಸದಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದರು.

ಸಮತಾ ಸೈನಿಕ ದಳದ ಜಿಲ್ಲಾ ಅಧ್ಯಕ್ಷ ಜಿ.ಸಿ.ವೆಂಕಟರಮಣಪ್ಪ ಮಾತನಾಡಿ, ಕಲ್ಯಾಪುರದಲ್ಲಿ ಜಮೀನೇ ಇಲ್ಲ ಎಂದು ಹೇಳುತ್ತಾರೆ. ಆದರೆ ಕಂದಾಯ ಇಲಾಖೆ ನಿರೀಕ್ಷಕರೇ ಜಮೀನು ಇರುವ ಬಗ್ಗೆ ದಾಖಲೆ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರೆ ಯಾರು ಜಮೀನು ಉಳುಮೆ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ ಎಂದು ಹೇಳಿದರು.

ಗಂಗಾಧರ್ ಇತರರು ಗೋಷ್ಠಿಯಲ್ಲಿ ಇದ್ದರು.

**

ಜಿಲ್ಲಾಧಿಕಾರಿ ಹಠಾವೊ

ಜಿಲ್ಲಾಧಿಕಾರಿ ದಲಿತರ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ. ನಾವು ಈ ಸಮಸ್ಯೆ ಪರಿಹಾರಕ್ಕೆ ಕೋರಿ ಅವರಿಗೆ ಮನವಿ ಸಲ್ಲಿಸಲು ಹೋಗಿದ್ದೆವು. ಆಗ ನೀವು ಹೈಕೋರ್ಟ್‌ಗೆ ಹೋಗಿ ಎಂದು ಹೇಳಿದರು. ದಲಿತರು ಹೈಕೋರ್ಟ್‌ಗೆ ಹೋಗುವಷ್ಟು ಆರ್ಥಿಕವಾಗಿ ಸಬಲರಾಗಿಲ್ಲ. ದಲಿತ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸದ ಜಿಲ್ಲಾಧಿಕಾರಿ ವಿರುದ್ಧ ವಿವಿಧ ಸಂಘಟನೆಗಳು ಸೇರಿ ಶೀಘ್ರದಲ್ಲಿಯೇಜಿಲ್ಲಾಧಿಕಾರಿ ಹಠಾವೊ ಎಂದು ಪ್ರತಿಭಟನೆ ನಡೆಸುತ್ತೇವೆ ಎಂದು ಸಮತಾ ಸೈನಿಕ ದಳದ ಜಿಲ್ಲಾ ಅಧ್ಯಕ್ಷ ಜಿ.ಸಿ.ವೆಂಕಟರಮಣಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.