ADVERTISEMENT

ಚಿಂತಾಮಣಿ ತಾಲ್ಲೂಕಿನ 565 ಕೆರೆ ಖಾಲಿ ಖಾಲಿ

ಭೂಗಳ್ಳರ ದಾಹಕ್ಕೆ ಒತ್ತುವರಿಯಾಗಿರುವ ಕೆರೆ: ಅಂತರ್ಜಲ ಮಟ್ಟ ಕುಸಿತ

ಎಂ.ರಾಮಕೃಷ್ಣಪ್ಪ
Published 8 ಏಪ್ರಿಲ್ 2024, 7:02 IST
Last Updated 8 ಏಪ್ರಿಲ್ 2024, 7:02 IST
<div class="paragraphs"><p>ಚಿಂತಾಮಣಿಯ ಮಾಳಪ್ಪಲ್ಲಿಯ ಬರಿದಾಗಿರುವ ಕೆರೆ</p></div>

ಚಿಂತಾಮಣಿಯ ಮಾಳಪ್ಪಲ್ಲಿಯ ಬರಿದಾಗಿರುವ ಕೆರೆ

   

ಚಿಂತಾಮಣಿ: ತಾಲ್ಲೂಕಿನಲ್ಲಿ ಮಳೆಯ ಕೊರತೆಯಿಂದ ಭೀಕರ ಬರಗಾದ ಎದುರಾಗಿದೆ. ಜಿಲ್ಲಾ ಪಂಚಾಯಿತಿ ಮತ್ತು ಸಣ್ಣ ನೀರಾವರಿ ಇಲಾಖೆ ಕೆರೆಗಳು ಬರಿದಾಗಿವೆ. ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಯಾವ ಕೆರೆಗಳಿಗೂ ನೀರು ಹರಿಯಲಿಲ್ಲ. ಹೀಗಾಗಿ ಕೆರೆ ಭಣಗುಡುತ್ತಿವೆ. ಕೆಲವು ಕೆರೆಗಳ ಒಡಲು ಬತ್ತಿ ಬಾಯ್ದೆರೆದಿದೆ.

ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ 16, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 546 ಸೇರಿ ಒಟ್ಟು 565 ಕೆರೆಗಳಿವೆ. 7-8 ಕೆರೆಗಳಲ್ಲಿ ಅಲ್ಪಸ್ವಲ್ಪ ನೀರಿದ್ದು ಉಳಿದವು ಬತ್ತಿ ಹೋಗಿವೆ. ಬೇಸಿಗೆಯ ಬಿಸಿಲಿನ ಪ್ರಖರತೆಗೆ ಕೆರೆಗಳಲ್ಲಿ ಸಂಗ್ರಹವಾಗಿದ್ದ ನೀರು ಬರಿದಾಗಿದೆ. ಕೆರೆಗಳ ಸುತ್ತಮುತ್ತಲಿನ ಪ್ರದೇಶಗಳ ಅಂತರ್ಜಲ ಮಟ್ಟವೂ ಕುಸಿದಿದೆ.

ADVERTISEMENT

ಒತ್ತುವರಿ ಹಾವಳಿ ಕೆರೆಗಳನ್ನು ಕಬಳಿಸುತ್ತಾ ಬಂದಿದೆ. ಗ್ರಾಮಕ್ಕೊಂದು ಕೆರೆ, ಊರಿಗೊಂದು ನೆಡುತೋಪು ಇರಬೇಕು ಎಂಬುದು ಹಿರಿಯರ ನೀತಿಯಾಗಿತ್ತು. ಹಿರಿಯರು ಕಟ್ಟಿಸಿದ ಕೆರೆಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಹಲವು ಕೆರೆಗಳು ಶಿಥಿಲಗೊಂಡಿವೆ. ತೂಬುಗಳು, ಕಟ್ಟೆಗಳು ಹಾಳಾಗಿವೆ.

ತಾಲ್ಲೂಕಿನ ಕೆರೆಗಳು ಬತ್ತಿಹೋಗಿದ್ದು ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಇಳಿಯುತ್ತಿದೆ. ಅದೃಷ್ಟವಶಾತ್ ಇದುವರೆಗೂ ಗಂಭೀರವಾದ ನೀರಿಲ್ಲ ಸಮಸ್ಯೆ ಎಲ್ಲೂ ಕಂಡುಬಂದಿಲ್ಲ. ಟ್ಯಾಂಕರ್ ಮೂಲಕ ನೀರು ಪೂರೈಸುವ ಸ್ಥಿತಿ ನಿರ್ಮಾಣವಾಗಿಲ್ಲ. ಏಪ್ರಿಲ್‌ನಲ್ಲಿ ಯುಗಾದಿ ನಂತರ ಮತ್ತು ಮೇ ತಿಂಗಳಿನಲ್ಲಿ ಮಳೆ ಬಾರದಿದ್ದರೆ ಪರಿಸ್ಥಿತಿ ಬಿಗಡಾಯಿಸಬಹುದು ಎಂಬ ಆತಂಕ ಜನರನ್ನು ಕಾಡುತ್ತಿದೆ. ಮಳೆ ಬಾರದಿದ್ದರೆ ಏಪ್ರಿಲ್ ತಿಂಗಳ ಕೊನೆಗೆ ಸಮಸ್ಯೆ ತೀವ್ರವಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಅವ್ಯಾಹತ ಒತ್ತುವರಿ ಪರಿಣಾಮ ಕೆರೆಗಳು ತುಂಬಿದರೂ ಬಹು ಬೇಗ ಅವುಗಳ ಒಡಲು ಬರಿದಾಗುತ್ತದೆ. ಕೆರೆ ಅಚ್ಚುಕಟ್ಟು ಭಾಗದ ರೈತರು ತಮ್ಮ ಜಮೀನಿಗೆ ಹೊಂದಿಕೊಂಡಿರುವ ಕೆರೆ ಪ್ರದೇಶವನ್ನು ಅತಿಕ್ರಮಿಸಿಕೊಂಡು ಹತ್ತಾರು ವರ್ಷಗಳಿಂದ ವಿವಿಧ ಬೆಳೆ ಬೆಳೆಯುತ್ತಿದ್ದಾರೆ. ಕೆಲವು ಕೆರೆಗಳ ಭಾಗಗಳಲ್ಲಿ ಬಲಾಡ್ಯರು ಎಕರೆಗಟ್ಟಲೆ ಕೆರೆ ಜಮೀನನ್ನು ಅತಿಕ್ರಮಿಸಿಕೊಂಡ ದೂರುಗಳು ಇವೆ.

ಕೆರೆಯ ಭೂಮಿ ಕೃಷಿ ಭೂಮಿಯಾಗಿ ಬದಲಾವಣೆ ಹೊಂದಿರುವ ಆಕ್ಷೇಪಗಳು ಕೇಳಿ ಬರುತ್ತಿವೆ. ಗ್ರಾಮಸ್ಥರು ಅತಿಕ್ರಮಣದ ಬಗ್ಗೆ ಮನವಿ ಮಾಡಿದ ಗ್ರಾಮಗಳ ಕೆರೆಗಳನ್ನು ಮಾತ್ರ ಅಧಿಕಾರಿಗಳು ತೆರವುಗೊಳಿಸಿದ್ದಾರೆ ಎನ್ನುವ ಸಾರ್ವಜನಿಕರ ಆರೋಪ ವ್ಯಾಪಕವಾಗಿದೆ.

ತಾಲ್ಲೂಕಿನಲ್ಲಿ ಕೆರೆಗಳ ಸಂರಕ್ಷಣೆ ಮಾಡಿಲ್ಲ. ಕೆರೆಗಳ ಒತ್ತುವರಿ, ಹೂಳು ತುಂಬಿಕೊಂಡು ನೀರಿನ ಸಂಗ್ರಹಣೆ ಸಾಮರ್ಥ್ಯವನ್ನು ಕಳೆದುಕೊಂಡಿವೆ. ತ್ಯಾಜ್ಯವಸ್ತುಗಳ ಸಂಗ್ರಹವಾಗಿ ಮಾರ್ಪಟ್ಟಿವೆ. ಕೆರೆಗಳ ಸುತ್ತಲೂ ಕಸಕಡ್ಡಿಯನ್ನು ಹಳೆಯ ಕಟ್ಟಡಗಳ ಕೆಡವಿದ ಮಣ್ಣು ಮತ್ತಿತರ ವ್ಯರ್ಥ ವಸ್ತುಗಳು ಕೆರೆಗಳ ಒಡಲು ತುಂಬುತ್ತಿವೆ. ನಗರದ ನೆಕ್ಕುಂದಿಕೆರೆ, ಮಾಳಪ್ಪಲ್ಲಿ ಕೆರೆ, ಗೋಪಸಂದ್ರ ಮತ್ತಿತರ ಕೆರೆಗಳು ನಿಧಾನವಾಗಿ ಅಸ್ತಿತ್ವವನ್ನೇ ಕಳೆದುಕೊಳ್ಳುವಂತಾಗಿದೆ. ಕೆರೆಗಳಷ್ಟೇ ಅಲ್ಲದೆ ನೀರು ಹರಿದು ಬರುವ ರಾಜಕಾಲುವೆಗಳ ಒತ್ತುವರಿಯಾಗಿದೆ.

546 ಕೆರೆಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿವೆ. ಜಿಲ್ಲಾ ಪಂಚಾಯಿತಿಯ ತಾಂತ್ರಿಕ ವಿಭಾಗ ಕೆರೆಗಳ ನಿರ್ವಹಣೆ ಮಾಡುತ್ತಿದೆ. ಕೆಲವು ಕೆರೆಗಳಲ್ಲಿ ಗ್ರಾಮ ಪಂಚಾಯಿತಿಯಿಂದಲೇ ಗಿಡಮರಗಳನ್ನು ಬೆಳೆಸಲಾಗಿದೆ. ಜಾಲಿಮರಗಳು ಬೆಳೆದು ಕೆರೆಗಳ ನೀರಿನ ಸಂಗ್ರಹಣೆ ಸಾಮರ್ಥ್ಯವನ್ನು ಕಳೆದುಕೊಂಡಿವೆ. ತಳಗವಾರ, ಅಕ್ಕಿಮಂಗಲ ಕೆರೆಗಳಲ್ಲಿ ಜಾಲಿ ಮರಗಳನ್ನು ಬೆಳೆಸಿದ್ದರಿಂದ ಕೆರೆಗಳು ಹಾಳಾಗಿವೆ.

ಜಿಲ್ಲಾ ಪಂಚಾಯಿತಿಯ ಅಂಕಿ ಅಂಶಗಳ ಪ್ರಕಾರ 8,344 ಎಕರೆ 21 ಗುಂಟೆ ವಿಸ್ತೀರ್ಣವುಳ್ಳ 546 ಕೆರೆಗಳ ಪೈಕಿ 1,563 ಎಕರೆ 37 ಗುಂಟೆ ವಿಸ್ತೀರ್ಣದ 74 ಕೆರೆಗಳನ್ನು ಸರ್ವೆ ಮಾಡಲಾಗಿದೆ. ಇನ್ನೂ 472 ಕೆರೆ ಸರ್ವೆ ಮಾಡಬೇಕಾಗಿದೆ. ಸರ್ವೆ ಮಾಡಿರುವ 74 ಕೆರೆಗಳಲ್ಲಿ 163 ಎಕರೆ 39 ಗುಂಟೆ ಒತ್ತುವರಿ ಗುರುತಿಸಲಾಗಿದೆ. ಅದರಲ್ಲಿ 58 ಕೆರೆಗಳ 124 ಎಕರೆ 8 ಗುಂಟೆ ತೆರವುಗೊಳಿಸಲಾಗಿದೆ. ಇನ್ನು 16 ಕೆರೆಗಳ 39 ಎಕರೆ 31 ಗುಂಟೆ ತೆರವುಗೊಳಿಸಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ತಾಲ್ಲೂಕಿನ ಕೃಷಿಯ ಉದ್ದೇಶಕ್ಕೆ ಕೆರೆಗಳಿಗೆ ಕೆ.ಸಿ.ವ್ಯಾಲಿಯ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಂಡಿದೆ. ಆದರೆ ಯೋಜನೆ ಕುಂಟುತ್ತಾ ಸಾಗಿದೆ. ಮೊದಲ ಹಂತದಲ್ಲಿ 5 ಕೆರೆಗಳಿಗೆ ನೀರು ಹರಿಸಿದರೂ ನಂತರ ಸ್ಥಗಿತಗೊಂಡಿದೆ. ಎರಡನೇ ಹಂತದಲ್ಲಿ 55 ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಜನಪ್ರತಿನಿಧಿಗಳು ಭರವಸೆಯಲ್ಲೇ ಕಾಲ ದೂಡುತ್ತಿದ್ದಾರೆ. ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಕಾಮಗಾರಿಯು ಪೂರ್ಣಗೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.