
ಗೌರಿಬಿದನೂರು: ಕಂದಾಯ ಇಲಾಖೆಯಿಂದ ದಾಖಲೆ ಪಡೆಯಬೇಕೆಂದರೆ ರೈತರು ಮತ್ತು ಸಾರ್ವಜನಿಕರು ತಾಲ್ಲೂಕು ಮತ್ತು ನಾಡ ಕಚೇರಿಗಳಿಗೆ ಅಲೆಯಬೇಕಿತ್ತು.
ಈಗ ಸರ್ಕಾರ ಜಾರಿಗೆ ತಂದಿರುವ ಇ–ಪೌತಿ ಖಾತೆ ಆಂದೋಲನದಿಂದ ಸಾರ್ವಜನಿಕರು ಆಸ್ತಿಗಳ ಪೌತಿ ಖಾತೆಗಾಗಿ ತಾಲ್ಲೂಕು ಕಚೇರಿ ಮತ್ತು ನಾಡ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿದಂತಾಗಿದೆ.
ತಾಲ್ಲೂಕಿನಲ್ಲಿ 186 ಗ್ರಾಮಗಳಲ್ಲಿ 38,364 ಪೌತಿ ಖಾತದಾರರು ಇದ್ದು, ಒಟ್ಟು 25,936 ಸರ್ವೆ ನಂಬರ್‌ಗಳನ್ನು ಒಳಗೊಂಡಿದೆ. ಕಳೆದ ಒಂದು ತಿಂಗಳಿನಿಂದ 84 ಗ್ರಾಮಗಳಲ್ಲಿ ಖಾತಾ ಆಂದೋಲನ ನಡೆಸಿ 3007 ಫಲಾನುಭವಿಗಳಿಗೆ ಖಾತೆ ನೀಡಲು ಕ್ರಮಕೈಗೊಳ್ಳಲಾಗಿದೆ.
ತಾಲ್ಲೂಕಿನಲ್ಲಿ ಅನೇಕ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಆಸ್ತಿಗಳ ದಾಖಲೆಗಳು ಮೃತಪಟ್ಟವರ ಹಿರಿಯರ ಹೆಸರಿನಲ್ಲಿವೆ. ಅವರು ಮೃತಪಟ್ಟು ವರ್ಷಗಳೇ ಕಳೆದಿದ್ದರೂ ಆಸ್ತಿ ದಾಖಲೆಗಳನ್ನು ಅವರ ಮಕ್ಕಳು, ಮೊಮ್ಮಕ್ಕಳ ಹೆಸರಿಗೆ ಬದಲಿಸಿಕೊಂಡಿಲ್ಲ. ಇದರಿಂದ ಆಸ್ತಿ ಭಾಗ, ಪಾಲುದಾರಿಕೆ, ಮಾರಾಟ, ಬ್ಯಾಂಕ್‌ನಲ್ಲಿ ಅಡ ಇಟ್ಟು ಸಾಲ ಪಡೆಯುವುದು, ಆಸ್ತಿ ದಾಖಲೆ ಭದ್ರಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಸರ್ಕಾರ ಭೂಮಿ ಉಸ್ತುವಾರಿ ಕೋಶ, ಕಂದಾಯ ಆಯುಕ್ತಾಲಯ ಮೊಬೈಲ್ ಮತ್ತು ವೆಬ್ ಆಧಾರಿತ ತಂತ್ರಾಂಶದ ಮೂಲಕ ಇ-ಪೌತಿ ಖಾತೆ ಆಂದೋಲನ ಆರಂಭಿಸಿದೆ. ಗ್ರಾಮ ಆಡಳಿತಾಧಿಕಾರಿಗಳು ಆಧಾರ್ ಜೋಡಣೆ ಮಾಡುವ ಸಂದರ್ಭದಲ್ಲಿ ಮರಣ ಹೊಂದಿದ ವ್ಯಕ್ತಿ ಹೆಸರಿನಲ್ಲಿರುವ ಪಹಣಿ ಗುರುತಿಸಿದ್ದಾರೆ. ಮೃತ ವ್ಯಕ್ತಿ ಕಾನೂನುಬದ್ಧ ವಾರಸುದಾರರ ಆಧಾರ್ ಇಕೆವೈಸಿ ಮಾಡುವ ಮೂಲಕ ಅವರ ಒಪ್ಪಿಗೆಯನ್ನು ಪಡೆದು ಗ್ರಾಮ ಆಡಳಿತಾಧಿಕಾರಿಗಳು ವಾರಸುದಾರರ ಫೋಟೊವನ್ನು ತಂತ್ರಾಂಶದ ಮೂಲಕ ಸೆರೆ ಹಿಡಿದು ಪೌತಿ ಖಾತೆ ಮಾಡುತ್ತಿದ್ದಾರೆ.
ಮೃತ ವ್ಯಕ್ತಿಗೆ ಸಂಬಂಧಿಸಿದ ಇತರ ಜಮೀನುಗಳ ಸರ್ವೆ ನಂಬರ್‌ಗಳನ್ನು ದಾಖಲಿಸಿ ಮೃತ ವ್ಯಕ್ತಿಯ ಎಲ್ಲ ವಾರಸುದಾರರ ಒಪ್ಪಿಗೆಯನ್ನು ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ. ಈ ಎಲ್ಲ ವಿವರಗಳು ದಾಖಲಾದ ಮಾಹಿತಿಯು ಭೂಮಿ ಕೇಂದ್ರಕ್ಕೆ ರವಾನೆಯಾಗಿ ಸ್ವಯಂ ಚಾಲಿತವಾಗಿ ಮ್ಯುಟೇಷನ್ ಪ್ರಕ್ರಿಯೆ ಮೂಲಕ ವಾರುಸುದಾರರ ಹೆಸರಿಗೆ ಕಡಿಮೆ ಸಮಯದಲ್ಲಿ ಪಹಣಿ ಬರಲಿದೆ.
ಕಾನೂನು ಬದ್ಧರಲ್ಲದ ವಾರಸುದಾರರಿಗೆ ಖಾತೆಯಾಗುವುದು ತಪ್ಪುತ್ತದೆ. ಈಗಾಗಲೇ ಸರ್ಕಾರ ಕಂದಾಯ ಇಲಾಖೆಗೆ ಒಳಪಟ್ಟಿರುವ ಜಮೀನು ಪಹಣಿಗಳಿಗೆ ಮಾಲೀಕರ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗಿದೆ. ಕಂದಾಯ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ರೈತರ ಬಳಿಯೇ ಇ–ಪೌತಿ ಖಾತೆಗೆ ಬೇಕಾದ ಸೂಕ್ತ ದಾಖಲೆ ಪಡೆದುಕೊಂಡು ನಿಗದಿತ ಸಮಯದಲ್ಲಿ ಫಲಾನುಭವಿಗಳಿಗೆ ಇ–ಪೌತಿ ಖಾತೆ ನೀಡಲಾಗುತ್ತಿದೆ. ಇದರಿಂದ ಒಂದೇ ಕುಟುಂಬದ ಅಣ್ಣ, ತಮ್ಮಂದಿರು, ಅಕ್ಕ, ತಂಗಿಯರ ನಡುವೆ ಕಲಹ ತಪ್ಪುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಸಾರ್ವಜನಿಕರು ಪೌತಿ ಖಾತೆ ನಮೂನೆ-19 ಅರ್ಜಿ, ಮರಣ ಹೊಂದಿದವರ ಮರಣ ಪ್ರಮಾಣ ಪತ್ರ, ವಂಶವೃಕ್ಷ ಪ್ರಮಾಣ ಪತ್ರ, ವಾರಸುದಾರರ ಆಧಾರ್ ಕಾರ್ಡ್ ಪ್ರತಿ ಮತ್ತು ಸರ್ವೆ ನಂಬರ್‌ಗಳ ಗಣಕೀಕೃತ ಪಹಣಿ ಪ್ರತಿಗಳನ್ನು ನೀಡಿದರೆ ಇ–ಪೌತಿ ಖಾತೆಯನ್ನು ಅಧಿಕಾರಿಗಳು ನೀಡಲಿದ್ದಾರೆ.
ಸರ್ಕಾರ ಇ–ಪೌತಿ ಖಾತೆ ನೀಡಲು ಸರಳೀಕೃತ ಆಪ್ ಅಭಿವೃದ್ಧಿಪಡಿಸಲಾಗಿದೆ. ಸಾರ್ವಜನಿಕರು ಕೆಲವೇ ದಾಖಲೆಗಳನ್ನು ನೀಡಿದ್ದಾರೆ. ನಿಗದಿತ ಸಮಯದಲ್ಲಿ ಇ–ಪೌತಿ ಖಾತೆ ಪಡೆಯಬಹುದು. ಸಾರ್ವಜನಿಕರು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು.–ಅರವಿಂದ್ ಕೆ.ಎಂ, ತಹಶೀಲ್ದಾರ್ ಗೌರಿಬಿದನೂರು
ಇಷ್ಟು ದಿನಗಳು ಖಾತೆ ಬೇಕಾದರೆ ಕಚೇರಿಗಳಿಗೆ ಅಲೆಯಬೇಕಾಗಿತ್ತು. ಸರ್ಕಾರದ ಈ ಯೋಜನೆಯಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ–ರಾಜಣ್ಣ ಫಲಾನುಭವಿ, ಹಿರೇಬಿದನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.