ಶಾಲೆ
(ಸಾಂಕೇತಿಕ ಚಿತ್ರ)
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಗಳು, ಆದರ್ಶ ವಿದ್ಯಾಲಯಗಳು, ಪಿ.ಎಂ.ಶ್ರೀ ಶಾಲೆಗಳಿಗೆ ಅಭಿವೃದ್ಧಿಗೆ ನೀಡುತ್ತಿರುವ ಅನುದಾನ ದುರ್ಬಳಕೆ ಆಗುತ್ತಿದೆಯೇ ಎನ್ನುವ ಅನುಮಾನ ಖುದ್ದು ಶಿಕ್ಷಣ ಇಲಾಖೆಯಲ್ಲಿಯೇ ಮೂಡಿದೆ.
ಈ ಅನುಮಾನದ ಹಿನ್ನೆಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಜಿಲ್ಲೆಯ ಎಲ್ಲ ಕರ್ನಾಟಕ ಪಬ್ಲಿಕ್ ಶಾಲೆಗಳು, ಆದರ್ಶ ವಿದ್ಯಾಲಯಗಳು, ಪಿ.ಎಂ.ಶ್ರೀ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಶೈಕ್ಷಣಿಕ ತಪಾಸಣೆ ಮತ್ತು ಲೆಕ್ಕಪತ್ರಗಳ ತಪಾಸಣೆ ಕೈಗೊಳ್ಳಲು ಜಿಲ್ಲಾ ಶಿಕ್ಷಣ ಇಲಾಖೆ ಮುಂದಾಗಿದೆ.
ಈ ಸಂಬಂಧ ಈ ಶಾಲೆಗಳಿಗೆ ಪತ್ರ ಬರೆಯಲಾಗಿದೆ. 2024–25 ಮತ್ತು 2025–26ನೇ ಸಾಲಿನಲ್ಲಿ ಬಿಡುಗಡೆ ಆಗಿರುವ ಅನುದಾನಗಳ ವೆಚ್ಚಗಳ ಸಂಪೂರ್ಣ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಡಿಡಿಪಿಐ ಹಾಗೂ ಸಮಗ್ರ ಶಿಕ್ಷಣ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಪತ್ರದ ಮೂಲಕ ಈ ಶಾಲೆಗಳಿಗೆ ತಿಳಿಸಿದ್ದಾರೆ.
ಶಾಲೆಗಳ ಮುಖ್ಯ ಶಿಕ್ಷಕರ ನಿರ್ಲಕ್ಷ್ಯ ಮತ್ತ ಬೇಜವಾಬ್ದಾರಿ ತೋರುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಪಬ್ಲಿಕ್ ಶಾಲೆಗಳು, ಆದರ್ಶ ವಿದ್ಯಾಲಯಗಳು, ಪಿ.ಎಂ.ಶ್ರೀ ಶಾಲೆಗಳಿಗೆ ಶಾಲಾ ನಿರ್ವಹಣೆ ಮತ್ತು ಇತರೆ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಪ್ರತಿ ವರ್ಷ ಸರ್ಕಾರವು ವಿಶೇಷ ಅನುದಾನ ಬಿಡುಗಡೆ ಮಾಡಿದೆ.
ತಾಲ್ಲೂಕಿನ ಮಂಡಿಕಲ್ಲು ಗ್ರಾಮದ ಕೆಪಿಎಸ್ ಶಾಲೆಗೆ ಇತ್ತೀಚೆಗೆ ಶಿಕ್ಷಣ ಇಲಾಖೆ ಆಯುಕ್ತ ತ್ರಿಲೋಕಚಂದ್ರ ಭೇಟಿ ನೀಡಿದ್ದರು. ಈ ವೇಳೆ ಶಾಲೆಯಲ್ಲಿ ವಿದ್ಯುತ್ ಸಂಪರ್ಕದ ಕೊರತೆ, ಶೌಚಾಲಯಗಳು ಸ್ವಚ್ಛತೆಯಿಂದ ಇಲ್ಲದೇ ಇರುವುದು, ಶಾಲೆಯಲ್ಲಿ ಸ್ವಚ್ಛತೆಗಳು ಇಲ್ಲದಿರುವುದು ಕಂಡು ಬಂದಿತ್ತು. ಆಯುಕ್ತರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಡಿಪಿಐ ಶಾಲೆಗಳಲ್ಲಿ ತಪಾಸಣೆಗೆ ಮುಂದಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.