ADVERTISEMENT

ಚಿಕ್ಕಬಳ್ಳಾಪುರ: ಬರದ ನಾಡ ಸಮೃದ್ಧಗೊಳಿಸಿತು ಮಳೆ

ಹೆಚ್ಚಿದ ಅಂತರ್ಜಲ: ಮೂರ್ನಾಲ್ಕು ವರ್ಷಗಳ ಕಾಲ ಸಮೃದ್ಧವಾಗಲಿದೆ ರೈತರ ಬದುಕು

ಡಿ.ಎಂ.ಕುರ್ಕೆ ಪ್ರಶಾಂತ
Published 29 ನವೆಂಬರ್ 2021, 7:52 IST
Last Updated 29 ನವೆಂಬರ್ 2021, 7:52 IST
ಮಳೆಯಿಂದಾಗಿ‌ ಕೋಡಿ ಹರಿಯುತ್ತಿರುವ ಮಂಚೇನಹಳ್ಳಿ ಕೆರೆ
ಮಳೆಯಿಂದಾಗಿ‌ ಕೋಡಿ ಹರಿಯುತ್ತಿರುವ ಮಂಚೇನಹಳ್ಳಿ ಕೆರೆ   

ಚಿಕ್ಕಬಳ್ಳಾಪುರ: ಹೊರ ಜಿಲ್ಲೆಗಳ ಜನರಿಗೆ ಚಿಕ್ಕಬಳ್ಳಾಪುರ ಎಂದರೆ ನೀರಿಲ್ಲದ ಬರಡು ನಾಡು. ಜಿಲ್ಲೆಗೆ ಯಾವುದೇ ಶಾಶ್ವತವಾದ ನದಿ ನೀರಾವರಿ ಮೂಲಗಳು ಇಲ್ಲ. ಗುಟುಕು ನೀರಿಗಾಗಿ 1,500 ಅಡಿ ಆಳದವರೆಗೆ ಕೊಳೆವೆ ಬಾವಿಗಳನ್ನು ಕೊರೆಯಲಾಗುತ್ತಿದೆ. ದೊರೆಯುವ ಅಲ್ಪಸ್ವಲ್ಪ ನೀರಿನಲ್ಲಿಯೇರೈತರು ಹೂ, ತರಕಾರಿ, ಹಣ್ಣು ಬೆಳೆದು ಜೀವನ ಸಾಗಿಸುತ್ತಿದ್ದಾರೆ.

ಇಂತಿಪ್ಪ ಬರದ ಜಿಲ್ಲೆಗೆ 2021ನೇ ಸಾಲು ಭರಪೂರವಾದ ಮಳೆಯನ್ನು ತಂದ ವರ್ಷ. ಈ ಮಳೆ ಹರ್ಷವನ್ನೂ ತಂದಿದೆ. ಸಂಕಟ, ನೋವನ್ನೂ ತಂದಿದೆ. ಈ ಎರಡಕ್ಕೂ ಕಾರಣ ಭರಪೂರ ಮಳೆ. ಆದರೆ ಸದಾ ಬರದಿಂದ ಕಂಗೆಟ್ಟಿದ್ದಜಿಲ್ಲೆಯ ಜನರಿಗೆ ಭಾರಿ ಮಳೆ ಸಂತಸವನ್ನೇ ಹೆಚ್ಚು ತಂದಿದೆ.ಅದಕ್ಕೆ ಕಾರಣ ಅಂತರ್ಜಲ ಹೆಚ್ಚಳ. ಬತ್ತಿದ ಕೆರೆಗಳಲ್ಲಿ ಸಮೃದ್ಧವಾಗಿ ನೀರು ತುಂಬಿದೆ. ಹನಿ ನೀರು ಜಿನುಗದ ಕೊಳವೆ ಬಾವಿಗಳು ಉಕ್ಕಿ ಹರಿದಿವೆ. ಜಿಲ್ಲಾ ಭೂ ಜಲ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಅಂತರ್ಜಲ ಮಟ್ಟ ಸಮೃದ್ಧವಾಗಿ ಹೆಚ್ಚಿದೆ.

ಈ ವರ್ಷ ಬೆಳೆ ಹಾನಿಯಾದರೂ ಐದಾರು ವರ್ಷಗಳ ಕಾಲ ಅಂತರ್ಜಲ ಸಮೃದ್ಧವಾಗಿರುತ್ತದೆ. ತುಂಬಿರುವ ಕೆರೆ, ಕಟ್ಟೆಗಳು ವಾತಾವರಣವನ್ನು ತಂಪಾಗಿಸುತ್ತದೆ ಎನ್ನುತ್ತಿದ್ದಾರೆ ಜನರು.

ADVERTISEMENT

ಜಿಲ್ಲೆಯಲ್ಲಿ 1,300ಕ್ಕೂ ಹೆಚ್ಚು ಕೆರೆಗಳು ಪೂರ್ಣವಾಗಿ ತುಂಬಿವೆ. ಕಲ್ಯಾಣಿಗಳು, ಕುಂಟೆಗಳು, ಚೆಕ್‌ಡ್ಯಾಂಗಳಲ್ಲಿ ಜೀವಜಲ ಸಮೃದ್ಧವಾಗಿದೆ. ಹೀಗೆ ಒಮ್ಮೆಯೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೆರೆಗಳು ತುಂಬಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಈ ‌ಜಲಸಮೃದ್ಧಿ ಮೂರು ದಶಕಗಳ ಬಳಿಕ ಕಾಣಸಿಕ್ಕಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಅತಿದೊಡ್ಡ ಕೆರೆ ಎನಿಸಿರುವ ಅಮಾನಿ ಗೋಪಾಲಕೃಷ್ಣ ಕೆರೆ ಮೈದುಂಬಿಕೊಂಡಿದೆ. ಶ್ರೀನಿವಾಸಸಾಗರವು ಪ್ರವಾಸಿತಾಣವಾಗಿ ಮಾರ್ಪಟ್ಟಿದೆ. ಚಿತ್ರಾವತಿ ಜಲಾಶಯ, ಜಕ್ಕಲಮಡುಗು ಜಲಾಶಯ ಭೋರ್ಗರೆಯುತ್ತಿವೆ. ಉತ್ತರ ಪಿನಾಕಿನಿ ನದಿ ಸಹ ತುಂಬಿ ಹರಿಯುತ್ತಿದೆ.

ಜಿಲ್ಲೆಯಲ್ಲಿ ಎರಡು ಮೂರು ದಶಕಗಳಿಂದ ನೀರು ಕಾಣದಿದ್ದ ಕೆರೆಗಳು ಭರ್ತಿಯಾಗಿವೆ. ನೀರಿನ ಹರಿವು ಹೆಚ್ಚಿ ಆರು ಕೆರೆಗಳು ಒಡೆದಿವೆ.

ಶಾಲೆಗಳಿಗೆ ಹಾನಿ: ಭಾರಿ ವರ್ಷಧಾರೆಗೆ ಜಿಲ್ಲೆಯ ಸರ್ಕಾರಿ ಶಾಲೆಗಳ400 ಕೊಠಡಿಗಳಿಗೆ ಹಾನಿಯಾಗಿದೆ. ಮಳೆಯಿಂದ ಇಷ್ಟೊಂದು ದೊಡ್ಡಪ್ರಮಾಣದಲ್ಲಿ ಶಾಲೆಗಳಿಗೆ ಹಾನಿ ಆಗಿರುವುದು ಇದೇ ಮೊದಲು.ಶಾಲೆಗಳ ಕೊಠಡಿಗಳ ಚಾವಣಿಗಳು ಬಿರುಕುಬಿಟ್ಟಿದ್ದು, ನೀರು ಸೋರುತ್ತಿದೆ. ಕೆಲವು ಕಡೆ ಪಾಚಿ ಮೂಡಿದೆ. ಹಾನಿಗೆ ಒಳಗಾದ ಕೊಠಡಿಗಳ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಕೆಲವು ಕಡೆ ಸೋರುತ್ತಿರುವ ಕೊಠಡಿಗಳಲ್ಲಿಯೇ ಮಕ್ಕಳು ಪಾಠ ಕೇಳುತ್ತಿದ್ದಾರೆ.

ಶಾಲೆಗಳಿಗೆ ರಜೆ: ಮಳೆಗಾಲದ ಸಂದರ್ಭದಲ್ಲಿ ಮಲೆನಾಡು ಭಾಗಗಳ ಶಾಲೆಗಳಿಗೆ ಮಾತ್ರ ಸರ್ಕಾರ ರಜೆ ಘೋಷಿಸುತ್ತಿತ್ತು. ಆದರೆ ಈ ಬಾರಿಜಿಲ್ಲೆಯಲ್ಲಿ ವ್ಯಾಪಕ ಮಳೆ ಆಗುತ್ತಿರುವ ಕಾರಣ ನ.19 ಮತ್ತು 20ರಂದು ಶಾಲೆಗಳಿಗೆ ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಯಿತು. ಈ ರಜೆ ಘೋಷಣೆಯೇ ಜಿಲ್ಲೆಯಲ್ಲಿ ಮಳೆ ಯಾವ ಪ್ರಮಾಣದಲ್ಲಿ ಸುರಿದಿದೆ ಎನ್ನುವುದನ್ನು ಎತ್ತಿ ತೋರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.