ADVERTISEMENT

ಚಿಕ್ಕಬಳ್ಳಾಪುರ: ಗೊಂದಲದ ಗೂಡಾದ ದಾಖಲಾತಿ ಪರಿಶೀಲನೆ

ಮಧ್ಯಾಹ್ನದವರೆಗೆ ಕಾದು ಬೆಂಗಳೂರಿಗೆ ತೆರಳಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 7:20 IST
Last Updated 28 ಡಿಸೆಂಬರ್ 2021, 7:20 IST
ಮೂಲದಾಖಲೆ ಪರಿಶೀಲನೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಬಂದಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು
ಮೂಲದಾಖಲೆ ಪರಿಶೀಲನೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಬಂದಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು   

ಚಿಕ್ಕಬಳ್ಳಾಪುರ: ಇಲ್ಲಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸೋಮವಾರ ನಡೆಯಬೇಕಾಗಿದ್ದ ವಿದ್ಯಾರ್ಥಿಗಳ ಮೂಲದಾಖಲಾತಿ ಪರಿಶೀಲನೆ ಗೊಂದಲದ ಗೂಡಾಯಿತು.

ಬಿಎಸ್ಸಿ ನರ್ಸಿಂಗ್, ಬಿಪಿಟಿ, ಫಿಸಿಯೋಥೆರಪಿ, ಬಿಪಿಒ, ಬಿಎಸ್ಸಿ ಅಲೈಡ್ ಸೈನ್ಸ್ ಕೋರ್ಸ್‌ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ದಾಖಲಾತಿ ಪರಿಶೀಲನೆ ಸಲುವಾಗಿ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಬಂದಿದ್ದ ಪೋಷಕರು ಮತ್ತು ವಿದ್ಯಾರ್ಥಿಗಳು ಸಮಸ್ಯೆ ಎದುರಿಸಿದರು. ಅಂತಿಮವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾತಿ ಪರಿಶೀಲನೆ ಇಲ್ಲ ಎನ್ನುವುದು ತಿಳಿದು ಬೇಸರದಲ್ಲಿ ಬೆಂಗಳೂರಿನ ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ
ತೆರಳಿದರು.

ಪರೀಕ್ಷಾ ಪ್ರಾಧಿಕಾರದಲ್ಲಿ ಪರಿಶೀಲನೆಗಾಗಿ ಹೆಚ್ಚಿನ ವಿದ್ಯಾರ್ಥಿಗಳು ಬಂದಿದ್ದರಿಂದ ಆಯಾ ಜಿಲ್ಲಾ ಕೇಂದ್ರಗಳಲ್ಲಿ ದಾಖಲೆ ಪರಿಶೀಲನೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ನೀಡಿತ್ತು. ಡಿ.27ರಿಂದ 29ರವರೆಗೆ ಆಯಾ ಜಿಲ್ಲೆಯಲ್ಲಿ ನಿಗದಿಪಡಿಸಿದ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ವಿದ್ಯಾರ್ಥಿಗಳು ಹಾಜರಾಗಬೇಕು ಎಂದು ಸೂಚಿಸಿತ್ತು.

ADVERTISEMENT

ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಬೆಳಿಗ್ಗೆ 9ರಿಂದ ದಾಖಲಾತಿ ಪರಿಶೀಲನೆ ಆರಂಭವಾಗಬೇಕಿತ್ತು. ಬಹಳಷ್ಟು ವಿದ್ಯಾರ್ಥಿಗಳು ಆಸ್ಪತ್ರೆ ಆವರಣಕ್ಕೆ ಬಂದಿದ್ದರು. ದಾಖಲೆ ಪರಿಶೀಲನೆಗೆ ಅಗತ್ಯ ಸಿದ್ಧತೆಗಳನ್ನೂ ಅಧಿಕಾರಿಗಳು ಮಾಡಿಕೊಂಡಿದ್ದರು. ಆದರೆ ಅಂತಿಮವಾಗಿ ಇಲ್ಲಿ ಪರಿಶೀಲನೆಗೆ ಅವಕಾಶವಿಲ್ಲ. ಪರೀಕ್ಷಾ ಪ್ರಾಧಿಕಾರಕ್ಕೆ ತೆರಳಬೇಕು ಎನ್ನುವ ಮಾಹಿತಿ ತಿಳಿದು ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಮುಖದಲ್ಲಿ ಆತಂಕ ಮತ್ತು ಬೇಸರ ಎದ್ದು ಕಾಣುತ್ತಿತ್ತು.

‘ಬೆಳಿಗ್ಗೆಯಿಂದಲೇ ನಮ್ಮಂತೆ ಬಹಳಷ್ಟು ವಿದ್ಯಾರ್ಥಿಗಳು ಇಲ್ಲಿಗೆ ಬಂದಿದ್ದಾರೆ. ಸಂಜೆಯವರೆಗೂ ಪರಿಶೀಲನೆ ಇದೆ. ಇಲ್ಲಿ ದಾಖಲಾತಿ ಪರಿಶೀಲನೆ ರದ್ದಾಗಿರುವುದು ವಿದ್ಯಾರ್ಥಿಗಳಿಗೆ ತಿಳಿದೇ ಇಲ್ಲ. ಈಗ ಮತ್ತೆ ಇಲ್ಲಿಂದ ಬೆಂಗಳೂರಿಗೆ ತೆರಳಬೇಕು ಎಂದರೆ ಸಮಸ್ಯೆ ಅಲ್ಲವೇ. ಜಿಲ್ಲಾ ಕೇಂದ್ರಗಳಲ್ಲಿ ಪರಿಶೀಲನೆ ರದ್ದಾಗಿರುವ ಬಗ್ಗೆ ವಿದ್ಯಾರ್ಥಿಗಳಿಗೆ ಮೊದಲೇ ಮಾಹಿತಿ ನೀಡಬೇಕಾಗಿತ್ತು’ ಎಂದು ಪೋಷಕ ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಸ್ಥಳದಲ್ಲಿದ್ದ ವಿದ್ಯಾರ್ಥಿಗಳ ಪೋಷಕರೆಲ್ಲ ಸೇರಿ ವಾಹನದ ವ್ಯವಸ್ಥೆ ಮಾಡಿಕೊಂಡು ಬೆಂಗಳೂರಿನತ್ತ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.