ADVERTISEMENT

ಚಿಕ್ಕಬಳ್ಳಾಪುರ: ತುಂಬಿ ಹರಿಯುತ್ತಿವೆ ಕೆರೆ, ಕಟ್ಟೆ, ಜಲಾಶಯ

ಜಿಲ್ಲೆಯಲ್ಲಿ ಎಲ್ಲೆಡೆ ವ್ಯಾಪಕ ಮಳೆ; ಶಿಡ್ಲಘಟ್ಟ ರಸ್ತೆಯಲ್ಲಿ ಹೊಲಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 5:29 IST
Last Updated 10 ಅಕ್ಟೋಬರ್ 2021, 5:29 IST
ಶ್ರೀನಿವಾಸಸಾಗರ ತುಂಬಿ ಹರಿಯುತ್ತಿರುವುದನ್ನು ಕಣ್ತುಂಬಿಕೊಳ್ಳುತ್ತಿರುವ ಜನರು
ಶ್ರೀನಿವಾಸಸಾಗರ ತುಂಬಿ ಹರಿಯುತ್ತಿರುವುದನ್ನು ಕಣ್ತುಂಬಿಕೊಳ್ಳುತ್ತಿರುವ ಜನರು   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಮಳೆ ಆರಂಭವಾಯಿತು. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಬಹಳಷ್ಟು ಕೆರೆ, ಕೆಟ್ಟೆ, ಜಲಾಶಯಗಳು ಭರ್ತಿಯಾಗಿವೆ. ಮಳೆ ಸಂಭ್ರಮವನ್ನು ಮೂಡಿಸಿದೆ. ಚಿಕ್ಕಬಳ್ಳಾಪುರ ನಗರ ಹಾಗೂ ತಾಲ್ಲೂಕಿನಲ್ಲಿ ಬೆಳಿಗ್ಗೆಯೇ ಮಳೆ ಆರಂಭವಾಯಿತು. ಮಧ್ಯಾಹ್ನದವರೆಗೆ ಮಳೆ ಸುರಿಯಿತು. ಸಂಜೆಯವರೆಗೂ ಮೋಡದ ವಾತಾವರಣವಿತ್ತು.

ಚಿಕ್ಕಬಳ್ಳಾಪುರ ನಗರದ ಹೊರವಲಯದ ಶಿಡ್ಲಘಟ್ಟ ರಸ್ತೆಯಲ್ಲಿರುವ ಬೆಸ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಮಳೆ ನೀರು ರೈತರ ಹೊಲಗಳಿಗೆ ನುಗ್ಗಿದೆ. ಇಲ್ಲಿ ಹಾದಿ ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಿಲ್ಲ. ಇದರಿಂದ ನೀರು ರೈತರ ಹೊಲಗಳಿಗೆ ನುಗ್ಗಿದೆ ಎಂದು ನಾಗರಿಕ ವೆಂಕಟೇಶ್ ದೂರಿದರು. ಈ ಹೊಲಗಳಲ್ಲಿದ್ದ ಬಹಳಷ್ಟು ಬೆಳೆಗಳು ಸಹ ಹಾನಿಗೆ ತುತ್ತಾಗಿವೆ.

ಶ್ರೀನಿವಾಸ ಸಾಗರ ಕೆರೆ ಪ್ರವಾಸಿಗರ ನೆಚ್ಚಿನ ತಾಣ ಎನ್ನುವಂತೆ ಆಗಿದೆ. ಕಾರು, ಆಟೊ, ದ್ವಿಚಕ್ರ ವಾಹನಗಳಲ್ಲಿ ನಿತ್ಯ ಹೇರಳ ಸಂಖ್ಯೆಯಲ್ಲಿ ಇಲ್ಲಿಗೆ ಜನರು ಭೇಟಿ ನೀಡುತ್ತಿದ್ದಾರೆ. ಉಕ್ಕಿ ಹರಿಯುತ್ತಿರುವ ನೀರನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಜಕ್ಕಲಮಡುಗು ಜಲಾಶಯ ಸಹ ತುಂಬಿ ಹರಿಯುತ್ತಿದೆ.

ADVERTISEMENT

ಗ್ರಾಮೀಣ ಭಾಗಗಳಲ್ಲಿ ಹೊಲಗಳಲ್ಲಿ ಹೇರಳವಾಗಿ ನೀರು ನಿಂತಿದೆ. ರಸ್ತೆಯ ಹೊಂಡಗಳಲ್ಲಿ, ಗುಂಡಿಗಳು ತುಂಬಿವೆ. ಗ್ರಾಮೀಣ ಭಾಗಗಳಲ್ಲಿ ಎತ್ತ ನೋಡಿದರೂ ಮಳೆ ನೀರು ಎನ್ನುವ ಸ್ಥಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.