ADVERTISEMENT

ನಕಲಿ ಚಿನ್ನ ಕೊಟ್ಟು ₹1.5 ಲಕ್ಷದ ಅಸಲಿ ಚಿನ್ನದ ಸರ ಕದ್ದೊಯ್ದರು!

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2023, 7:26 IST
Last Updated 28 ಏಪ್ರಿಲ್ 2023, 7:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಂತಾಮಣಿ: ಅಪರಿಚಿತ ಮಹಿಳೆಯೊಬ್ಬರು ನಕಲಿ ಆಭರಣಗಳನ್ನು ನೀಡಿ ₹1.5 ಲಕ್ಷ ವಂಚಿಸಿದ್ದಾರೆ ಎಂದು ಆರೋಪಿಸಿ ಗೌರಮ್ಮ ಎಂಬುವರು ನಗರಠಾಣೆಗೆ ದೂರು ನೀಡಿದ್ದಾರೆ. 

ಬುಧವಾರ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಎಲೆ, ಅಡಿಕೆ ಖರೀದಿಸುತ್ತಿದ್ದಾಗ ಬಂದ ಅಪರಿಚಿತ ಮಹಿಳೆಯೊಬ್ಬರು, ಆಸ್ಪತ್ರೆಗೆ ಎಲ್ಲಿದೆ ಎಂದು ಕೇಳಿದಳು. ಹೀಗೆ ಮಾತುಕತೆ ನಡೆಸಿದ ಆಕೆ, ತನ್ನ ಮಗಳಿಗೆ ಆರೋಗ್ಯ ಸರಿ ಇಲ್ಲ. ಹೀಗಾಗಿ ಆಕೆಗೆ ಚಿಕಿತ್ಸೆ ಕೊಡಿಸಬೇಕು. ಆದರೆ, ತನ್ನಲ್ಲಿ ಹಣವಿಲ್ಲದ ಕಾರಣ ಆಸ್ಪತ್ರೆ ವೆಚ್ಚಕ್ಕಾಗಿ ತನ್ನಲ್ಲಿರುವ ಬಂಗಾರದ ಗುಂಡುಗಳು ಮತ್ತು ಕಾಸುಗಳನ್ನು ಪೋಣಿಸುವ ಎರಡು ಕರಿಮಣಿ ಸರಗಳನ್ನು ಮಾರಬೇಕು. ಆದರೆ, ಬಂಗಾರದ ಅಂಗಡಿಯಲ್ಲಿ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ತಾವು 2 ಲಕ್ಷ ಕೊಟ್ಟರೆ, ಮಾರುತ್ತೇನೆ ಎಂದಿದ್ದರು ಎಂದು ಸಂತ್ರಸ್ತ ಮಹಿಳೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

ಇದನ್ನು ನಂಬಿದ ನಾನು, ‘ಅವರ ಒಡವೆಗಳನ್ನು ಮನೆಯಲ್ಲಿ ತೋರಿಸಿ ಬರುವುದಾಗಿ ಹೇಳಿದ್ದೆ. ಜತೆಗೆ ಆಕೆಯ ಸರಗಳಿಗೆ ಆಧಾರವಾಗಿ ನನ್ನ ಕತ್ತಿನಲ್ಲಿದ್ದ ಸುಮಾರು 33 ಗ್ರಾಂ ತೂಕದ ₹1.5 ಲಕ್ಷ ಬೆಲೆಯ ಸರವನ್ನು ನೀಡಿದ್ದೆ. ಆದರೆ, ಅಪರಿಚಿತ ಮಹಿಳೆ ಕೊಟ್ಟಿದ್ದ ಸರ ನಕಲಿ ಎಂದು ಮನೆಯ ಹತ್ತಿರದ ಆಚಾರಿ ತಿಳಿಸಿದ್ದಾರೆ. ಹೀಗಾಗಿ ನಕಲಿ ಒಡವೆಗಳನ್ನು ನೀಡಿ, ನನ್ನ ಅಸಲಿ ಒಡವೆ ಪಡೆಯಲು ವಾಪಸ್ಸಾದಾಗ, ಆರೋಪಿಗಳು ಪರಾರಿಯಾಗಿದ್ದರು. ಆಗ ನನಗೆ ಮೋಸವಾಗಿರುವುದು ಗೊತ್ತಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.