
ಚಿಕ್ಕಬಳ್ಳಾಪುರ: ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಮತ್ತು ಮುಖಂಡರು ನಗರದ ಜಿಲ್ಲಾಡಳಿತ ಭವನದ ಮುಂಭಾಗ ಬುಧವಾರ ಪ್ರತಿಭಟಿಸಿದರು.
ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರು ಜಿಲ್ಲಾಡಳಿತ ಭವನದ ಮುಂಭಾಗ ಮೆಕ್ಕೆಜೋಳ ಸೇರಿ ಹಲವು ತರಕಾರಿಗಳನ್ನು ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಮೆಕ್ಕೆಜೋಳದ ಬೆಲೆ ಕ್ವಿಂಟಲ್‌ಗೆ ₹7,500ರಿಂದ ₹3,000ಕ್ಕೆ ಕುಸಿದಿದೆ. ಈ ನಿಟ್ಟಿನಲ್ಲಿ ಸರ್ಕಾರ ಮೂರ್ನಾಲ್ಕು ದಿನಗಳಲ್ಲಿ ಮೆಕ್ಕೆಜೋಳದ ರೈತರಿಗೆ ಸೂಕ್ತ ಪ್ರೋತ್ಸಾಹ ಬೆಲೆ ಘೋಷಿಸಬೇಕು. ನ್ಯಾಯ ಒದಗಿಸದಿದ್ದರೆ ಮೆಕ್ಕೆ ಜೋಳದ ಮೂಟೆಗಳೊಂದಿಗೆ ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಬ್ಬಿಗೆ ನಿಗದಿಪಡಿಸಿರುವ ಬೆಂಬಲ ಬೆಲೆಯು ಅವೈಜ್ಞಾನಿಕವಾಗಿದೆ. ಸರ್ಕಾರ ಎಲ್ಲ ರೈತ ಮುಖಂಡರ ಸಭೆ ನಡೆಸಿ ಸೂಕ್ತ ಬೆಲೆ ನಿಗದಿಪಡಿಸಬೇಕು. ಬೆಲೆ ಕುಸಿದಿರುವ ಮೆಕ್ಕೆಜೋಳ, ಈರುಳ್ಳಿ ಸೇರಿ ಇನ್ನಿತರೆ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು. ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.
ಪೆರೇಸಂದ್ರದ ಮೆಕ್ಕೆಜೋಳದ ವ್ಯಾಪಾರಿ ರಾಮಕೃಷ್ಣಪ್ಪ ಎಂಬುವರಿಗೆ ಹೈದರಾಬಾದ್ ಮೂಲದ ವ್ಯಾಪಾರಿಗಳು ₹ 2 ಕೋಟಿ ವಂಚಿಸಿದ್ದಾರೆ. ಈ ವಂಚಕರಿಗೆ ಸಚಿವ ಜಮೀರ್ ಅಹಮದ್ ಖಾನ್ ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ನಿಗದಿಪಡಿಸಿರುವ ಜಮೀನುಗಳಲ್ಲಿ ಹಿಪ್ಪು ನೇರಳೆ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ಇದೀಗ ಹಿಪ್ಪುನೇರಳೆ ಬೆಳೆಗಳನ್ನು ನಾಶಮಾಡಿ ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಚಾಲನೆ ನೀಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಈ ನಿಟ್ಟಿನಲ್ಲಿ ಜಂಗಮಕೋಟೆ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಭೂಸ್ವಾಧೀನವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.