ADVERTISEMENT

ಗೌರಿಬಿದನೂರು: ಕೃಷಿಗೆ ಎತ್ತುಗಳ ಬದಲು ಜನರ ಬಳಕೆ

ಬೇಸಾಯವನ್ನೆ ನಂಬಿ ಸ್ವಾಭಿಮಾನದಿಂದ ಬದುಕುವ ಜೀವಗಳು

ಎ.ಎಸ್.ಜಗನ್ನಾಥ್
Published 22 ಜುಲೈ 2020, 8:47 IST
Last Updated 22 ಜುಲೈ 2020, 8:47 IST
ಮಂಚೇನಹಳ್ಳಿ ಹೋಬಳಿಯ ಕಾಟನಾಗೇನಹಳ್ಳಿಯ‌ ರೈತ ನರಸಪ್ಪ ಅವರು ಮಗ ಮತ್ತು ಸೊಸೆಯ‌ ಸಹಾಯದಿಂದ ಜಮೀನಿನಲ್ಲಿ ಕುಂಟೆ ಹೊಡೆಯುತ್ತಿರುವುದು
ಮಂಚೇನಹಳ್ಳಿ ಹೋಬಳಿಯ ಕಾಟನಾಗೇನಹಳ್ಳಿಯ‌ ರೈತ ನರಸಪ್ಪ ಅವರು ಮಗ ಮತ್ತು ಸೊಸೆಯ‌ ಸಹಾಯದಿಂದ ಜಮೀನಿನಲ್ಲಿ ಕುಂಟೆ ಹೊಡೆಯುತ್ತಿರುವುದು   

ಗೌರಿಬಿದನೂರು: ಬಡ ರೈತರಿಗೆ ಬೇಸಾಯದ ಖರ್ಚು, ವೆಚ್ಚಗಳನ್ನು ಭರಿಸಲು‌ ಸಾಧ್ಯವಾಗುತ್ತಿಲ್ಲ. ಜಾನುವಾರು ಸಾಕಲು ಸಾಧ್ಯವಾಗದ ರೈತರು ತಮ್ಮ ಕುಟುಂಬದವರ ಸಹಾಯದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ದೃಶ್ಯಗಳು ತಾಲ್ಲೂಕಿನ ಅಲ್ಲಲ್ಲಿ ಕಂಡುಬರುತ್ತವೆ.

ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿ ಕಾಟನಾಗೇನಹಳ್ಳಿ ರೈತ ನರಸಪ್ಪ ಅವರು ತಮ್ಮ 2 ಎಕರೆ ಭೂಮಿಯಲ್ಲಿ ನೆಲಗಡಲೆ ಬಿತ್ತನೆ ಮಾಡಿದ್ದಾರೆ. ಇತ್ತೀಚೆಗೆ ಸುರಿಯುತ್ತಿರುವಮಳೆಯಿಂದ ಬೀಜ ಮೊಳಕೆಯೊಡೆದು ಗಿಡಗಳಾಗಿವೆ. ಗಿಡಗಳ‌ ನಡುವಿನ ಕಳೆ ತೆಗೆಯಲು ಕೂಲಿಯವರುಸಿಗುತ್ತಿಲ್ಲ. ಕುಂಟೆ ಹೊಡೆಯಲು ದುಬಾರಿ ಮೊತ್ತವನ್ನು ಕೇಳುತ್ತಾರೆ. ಈ ದುಬಾರಿ ವೆಚ್ಚ ಭರಿಸಲಾಗದೆ ತಮ್ಮ ಮಗ, ಸೊಸೆ ಸಹಕಾರದಿಂದ ಜಮೀನಿನಲ್ಲಿ ಕಳೆತೆಗೆಯುತ್ತಿದ್ದಾರೆ.

‘ಕಳೆ ತೆಗೆಯಲು ಮಹಿಳೆಗೆ ₹200 ಹಾಗೂ ಕುಂಟೆ ಹೊಡೆಯಲು ದಿನಕ್ಕೆ (ಬೆಳಿಗ್ಗೆ 7ರಿಂದ 1 ಗಂಟೆಯವರೆಗೆ) ₹800ರಿಂದ ₹1,000 ಕೇಳುತ್ತಾರೆ. ಎತ್ತುಗಳ ಸಹಕಾರವಿಲ್ಲದೆ ಮಗ, ಸೊಸೆಯ ಬೆಂಬಲದಿಂದ ಈ‌ ಬಾರಿ ಬೇಸಾಯದ ಕೆಲಸವನ್ನು ನಾವೇ ಮಾಡಿಕೊಂಡಿದ್ದೇವೆ. ಪ್ರತಿಯೊಂದಕ್ಕೂ ಯಂತ್ರ, ಕೂಲಿಯವರನ್ನು ನಂಬಿಬೆಳೆ ಬೆಳೆದರೆ ನಮಗೇನೂ ಉಳಿಯುವುದಿಲ್ಲ’ ಎನ್ನುತ್ತಾರೆ ರೈತ ನರಸಪ್ಪ.

ADVERTISEMENT

‘ಕೃಷಿಕರ ಕುಟುಂಬದಲ್ಲಿ‌ ಹುಟ್ಟಿ ಕೃಷಿ ‌ಕಾರ್ಯ ಮಾಡಲು‌ ಯಾವುದೇ ಹಿಂಜರಿಕೆಯಿಲ್ಲ. ಸ್ವಾಭಿಮಾನಿಗಳಾಗಿ ಬದುಕು ಸಾಧಿಸುವ ಜತೆಗೆ ನಮ್ಮ ಜಮೀನಿನಲ್ಲಿ ಮನೆಯವರೇ‌ ಒಟ್ಟಾಗಿ ಕೆಲಸ ಮಾಡುತ್ತೇವೆ. ಇದರಿಂದ ಹಣ ಉಳಿಯುತ್ತದೆ. ಆರೋಗ್ಯವಾಗಿರಲು ಸಹಕಾರಿಯಾಗುತ್ತದೆ’ ಎಂದು ಬೇಸಾಯದಲ್ಲಿ ತೊಡಗಿಸಿಕೊಂಡಿದ್ದ ನರಸಪ್ಪ ಅವರ ಸೊಸೆ ಹೇಮಾವತಿ ಹೇಳಿದರು.

ಬೇಸಾಯಕ್ಕೆ ಉಪಕರಣ: ಹಳ್ಳಿಗಳಲ್ಲಿ ‌ಸಾಕಷ್ಟು ಮಂದಿ ಸಣ್ಣ ಪುಟ್ಟ ಸಲಕರಣೆಗಳ ಸಹಕಾರದಿಂದ ಕೃಷಿ ಮಾಡಿಕೊಳ್ಳುತ್ತಿದ್ದಾರೆ. ಜೋಳ, ರಾಗಿ, ನೆಲಗಡಲೆ ಬೆಳೆಗಳಲ್ಲಿ ‌ಕಳೆ ತೆಗೆಯಲು ಸೈಕಲ್ ಮಾದರಿ ಉಪಕರಣ ಬಳಸಿಕೊಳ್ಳುತ್ತಿದ್ದಾರೆ. ತಮ್ಮದೇ ವಿಧಾನಗಳಲ್ಲಿ
ಬೇಸಾಯದ ಪರಿಕರಗಳನ್ನು ಸಿದ್ಧಪಡಿಸಿಕೊಂಡು ರೈತರು ಪ್ರಯೋಗ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.