
ಶಿಡ್ಲಘಟ್ಟ: ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಸುಮಾರು 13 ಹಳ್ಳಿಗಳ ರೈತಪರ ಹೋರಾಟ ಸಮಿತಿ ನಿರಂತರ ಒಂದೂವರೆ ವರ್ಷದ ಹೋರಾಟದ ಪ್ರತಿಫಲವಾಗಿ ಈ ಭಾಗದ ಸುಮಾರು 471 ಎಕರೆ ನೀರಾವರಿ ಪ್ರದೇಶವನ್ನು ಕೈಬಿಟ್ಟಿರುವುದು ಸ್ವಾಗತಾರ್ಹ ಎಂದು ಕೆಐಎಡಿಬಿ 13 ಹಳ್ಳಿಗಳ ರೈತಪರ ಹೋರಾಟ ಸಮಿತಿಯ ರಾಮಾಂಜನೇಯ ಹೇಳಿದರು.
ತಾಲ್ಲೂಕಿನ ಜಂಗಮಕೋಟೆ ಪೂಜಮ್ಮ ದೇವಾಲಯದ ಆವರಣದಲ್ಲಿ ಗುರುವಾರ ಕೆಐಎಡಿಬಿ 13 ಹಳ್ಳಿಗಳ ರೈತಪರ ಹೋರಾಟ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಈ ಹಿಂದೆ ಕೆಐಎಡಿಬಿಯಿಂದ ಅದಿಸೂಚನೆ ಹೊರಡಿಸಿದ್ದ 2823 ಎಕರೆ ಜಮೀನಿನ ಪೈಕಿ ಫಲವತ್ತಾದ ಹಾಗೂ ನೀರಾವರಿ ಪ್ರದೇಶವಾದ 471 ಎಕರೆ ಹೊರತುಪಡಿಸಿ ಉಳಿದ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸುವ ಮೂಲಕ ತ್ವರಿತವಾಗಿ ಈ ಭಾಗದಲ್ಲಿ ಕೈಗಾರಿಕೆ ಸ್ಥಾಪಿಸಲು ಸರ್ಕಾರ ಮುಂದಾಗಬೇಕು ಎಂದರು.
ಜಂಗಮಕೋಟೆ ಹೋಬಳಿಯಲ್ಲಿ ಕೆಲ ಬಲಾಢ್ಯರು ರಿಯಲ್ ಎಸ್ಟೇಟ್ ದಂದೆ ಮಾಡುವ ಮೂಲಕ ಬಡವರಿಗೆ ಕಡಿಮೆ ಹಣ ನೀಡಿ ಜಮೀನುಗಳ ಜಿಪಿಎ ಮಾಡಿಸಿಕೊಂಡು ಮೋಸ ಮಾಡಿರುತ್ತಾರೆ. ಇದನ್ನೆಲ್ಲಾ ತಪ್ಪಿಸಬೇಕಾದರೆ ಸರ್ಕಾರ ತ್ವರಿತವಾಗಿ ಕೈಗಾರಿಕೆ ಸ್ಥಾಪನೆಗಳಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ರಾಮಾಂಜನೇಯ, ಕೆಐಎಡಿಬಿ ರೈತ ಪರ ಹೋರಾಟ ಸಮಿತಿ ಪದಾಧಿಕಾರಿ ಬಸವಪಟ್ಟಣ ಆಂಜಿನಪ್ಪ, ತಿಪ್ಪೇಗೌಡ, ರಾಮದಾಸು, ವೆಂಕಟೇಶ್, ನಾಗರಾಜ್, ನಲ್ಲೇನಹಳ್ಳಿ ಸುಬ್ರಮಣಿ, ನಡಿಪಿನಾಯಕನಹಳ್ಳಿ ಮುನಿರಾಜ್, ಆಂಜಿ, ಯಣ್ಣಂಗೂರಿನ ನರಸಿಂಹಮೂರ್ತಿ, ಅತ್ತಿಗಾನಹಳ್ಳಿ ಮುನೇಗೌಡ, ಚೀಮಂಗಲ ಚಿನ್ನಪ್ಪ, ಜಂಗಮಕೋಟೆ ಜೆ.ಸಿ.ಮಂಜುನಾಥ್, ನಾರಾಯಣಸ್ವಾಮಿ, ಮಧು, ಮುನಿರಾಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.