ADVERTISEMENT

56 ಇಂಚಿನ ಎದೆ 28 ಇಂಚು ಎನಿಸಿದೆ: ಸಚಿವ ಡಾ.ಎಂ.ಸಿ.ಸುಧಾಕರ್ ಲೇವಡಿ

ಅಮೆರಿಕ ಅಧ್ಯಕ್ಷರಿಗೆ ಹೆದರಿ ಮಕಾಡೆ ಮಲಗಿದ ಪ್ರಧಾನಿ; ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಲೇವಡಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 7:38 IST
Last Updated 20 ಫೆಬ್ರುವರಿ 2026, 7:38 IST

ಚಿಕ್ಕಬಳ್ಳಾಪುರ: ‘ಪ್ರಧಾನಿ ಅವರದ್ದು 56 ಇಂಚಿನ ಎದೆ ಎನ್ನುತ್ತಿದ್ದರು. ಆದರೆ ಅಮೆರಿಕ ಅಧ್ಯಕ್ಷರಿಗೆ ಹೆದರಿ ಮಕಾಡೆ ಮಲಗಿದರು. ಅಮೆರಿಕ ಒತ್ತಡಕ್ಕೆ ಹೆದರಿದರು. ಈಗ 28 ಇಂಚಿನ ಎದೆ ಎನಿಸಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಲೇವಡಿ ಮಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಂತಹವರು ದೇಶವನ್ನು ಎಲ್ಲಿಗೆ ಕೊಂಡೊಯ್ಯುವರೊ ನೋಡಬೇಕು. ಇಬ್ಬರು, ಮೂವರು ಉದ್ಯಮಿಗಳ ಕೈಯಲ್ಲಿ ದೇಶದ ಸಂಪತ್ತಿದೆ. ವಿವಿಧ ದೊಡ್ಡ ಸಂಸ್ಥೆಗಳನ್ನೂ ಅವರ ಸುಪರ್ದಿಗೆ ವಹಿಸಿದ್ದಾರೆ. ಬ್ರಿಟಿಷರ ಕಾಲದ ಈಸ್ಟ್ ಇಂಡಿಯಾ ಕಂಪನಿಯ ಕಾಲಕ್ಕೆ ಕಾಲಿಡುತ್ತಿದ್ದೇವೆ ಎನಿಸುತ್ತದೆ ಎಂದು ಟೀಕಿಸಿದರು.

ನರೇಗಾ ಯೋಜನೆಯನ್ನು ವಿಬಿ–ಜಿ ರಾಮ್‌ ಜಿ ಎಂದು ಬದಲಿಸಿರುವುದರ ವಿರುದ್ಧ ಚಿಕ್ಕಬಳ್ಳಾಪುರಲ್ಲಿ 23ರಂದು ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಒಳಗೊಂಡು ಇಲ್ಲಿ ಸಮಾವೇಶ ನಡೆಯಲಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಪಾಲ್ಗೊಳ್ಳುವರು ಎಂದು ಹೇಳಿದರು.

ADVERTISEMENT

ಸಮಾವೇಶಕ್ಕೆ ಸಂಬಂಧಿಸಿದಂತೆ ತಯಾರಿಗಳು ಮತ್ತು ರೂಪುರೇಷೆಗಳು ನಡೆಯುತ್ತಿವೆ. ಜನರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಶಿಡ್ಲಘಟ್ಟದ ರಾಜೀವ್ ಗೌಡ ಅವರು ಪಕ್ಷದಿಂದ ಅಮಾನತಾಗಿದ್ದಾರೆ. ಅವರು ಪಕ್ಷದ ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಹೇಳಿದರು.

ಬೆಳಗಾವಿ ಅಧಿವೇಶನದ ವೇಳೆ ಹೈನುಗಾರಿಕೆ ಮತ್ತು ಮೀನುಗಾರಿಕೆಯ ವಿಚಾರವಾಗಿ ಅಧ್ಯಯನ ನಡೆಸಲು ವಿದೇಶ ಪ್ರವಾಸಕ್ಕೆ ಹೋಗಬೇಕು ಎಂದು ಕೆಲವು ಶಾಸಕರು ಪ್ರಸ್ತಾಪಿಸಿದರು. ಅವರು ತಮ್ಮ ಸ್ವಂತ ಹಣದಲ್ಲಿ ಪ್ರವಾಸ ಹೋಗಿದ್ದಾರೆ. ಬೇರೆಯವರ ಹಣ ಪಡೆದಿಲ್ಲ ಎಂದರು.

ನಾಯಕತ್ವದ ವಿಚಾರವಾಗಿ ಪಕ್ಷದಲ್ಲಿ ಗುದ್ದಾಟವೇನೂ ಇಲ್ಲ. ವರಿಷ್ಠರು ಎಲ್ಲ ವಿಚಾರಗಳನ್ನು ಗಮನಿಸುವರು. ಸೂಕ್ತ ಸಮಯದಲ್ಲಿ ತೀರ್ಮಾನ ಕೈಗೊಳ್ಳುವರು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.