ADVERTISEMENT

ಕಾಡುಮಲ್ಲೇಶ್ವರ ಬೆಟ್ಟಕ್ಕೆ ಕಿಡಿಗೇಡಿಗಳಿಂದ ಬೆಂಕಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 3:24 IST
Last Updated 5 ಮಾರ್ಚ್ 2021, 3:24 IST

ಚಿಂತಾಮಣಿ: ನಗರಕ್ಕೆ ಹೊಂದಿಕೊಂಡಿರುವ ಕಾಡುಮಲ್ಲೇಶ್ವರಕ್ಕೆ ಬೆಟ್ಟಕ್ಕೆ ಕಿಡಿಗೇಡಿಗಳು ಬುಧವಾರ ರಾತ್ರಿ ಬೆಂಕಿ ಹಾಕಿದ್ದಾರೆ. ಬೆಟ್ಟಕ್ಕೆ ಮೋಜಿ ಮಸ್ತಿ ಮಾಡಲು ಹೋಗುವ ಕಿಡಿಗೇಡಿಗಳು ಬೆಂಕಿ ಹಾಕಿರಬಹುದು ಎಂದು ಶಂಕಿಸಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹರಸಾಹಸ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.

ಬೆಂಕಿಯಿಂದಾಗಿ ಅಪಾರ ಪ್ರಮಾಣದ ಹಸಿರು, ಪ್ರಕೃತಿ ಸೌಂದರ್ಯ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.
ಇಡೀ ರಾತ್ರಿ ಬೆಂಕಿ ಹತ್ತಿ ಉರಿಯಿತು. ಅಧಿಕಾರಿಗಳು ರಾತ್ರಿಯೇ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಕಳೆದ ಎರಡು ವಾರದ ಹಿಂದೆಯೂ ಬೆಟ್ಟದ ಪಶ್ಚಿಮ ಭಾಗದಲ್ಲಿ ಬೆಂಕಿ ಬಿದ್ದಿತ್ತು.

ಬೆಟ್ಟಕ್ಕೆ ಉತ್ತಮ ರಸ್ತೆ ಇರುವುದರಿಂದ ಬೇಸಿಗೆ ಕಾಲದಲ್ಲಿ ಯುವಕರು ರಾತ್ರಿ ಸಮಯದಲ್ಲಿ ಪಾರ್ಟಿಗಳನ್ನು ನಡೆಸಲು ಹೋಗುತ್ತಾರೆ. ಕುಡಿದ ಮತ್ತಿನಲ್ಲಿ ಬೀಡಿ, ಸಿಗರೇಟ್ ತುಂಡುಗಳನ್ನು ಎಸೆಯುತ್ತಾರೆ. ಅದರಿಂದ ಬೆಂಕಿ ಬೀಳುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ADVERTISEMENT

‘ಪ್ರತಿವರ್ಷ ಬೇಸಿಗೆ ಸಮಯದಲ್ಲಿ ಬೆಂಕಿ ಬೀಳುವುದು ಸಾಮಾನ್ಯವಾಗಿದೆ. ಮೋಜುಮಸ್ತಿಗಾಗಿ ಹೋಗುವವರ ಮೇಲೆ ನಿಗಾ ವಹಿಸಿದರೆ ಬೆಂಕಿಗೆ ಕಡಿವಾಣ ಹಾಕಬಹುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕಾವಲು ವ್ಯವಸ್ಥೆ ಮಾಡಬೇಕು’ ಎಂದು ಸ್ಥಳೀಯ ನಾಗರಿಕ ರಾಮಕೃಷ್ಣ ಒತ್ತಾಯಿಸಿದರು.

ಬೆಟ್ಟವು ಹಸಿರುಮಯವಾಗಿದ್ದು ನಗರಕ್ಕೆ ಹೊಂದಿಕೊಂಡಿರುವುದರಿಂದ ಯುವಕ-ಯುವತಿಯರು, ಹಿರಿಯ ಜೀವಿಗಳು ವಾಯು ವಿಹಾರಕ್ಕಾಗಿ ಹಾಗೂ ಪ್ರಕೃತಿಯ ಸೌಂದರ್ಯ ಸವಿಯಲು ಪ್ರತಿನಿತ್ಯ ಬೆಟ್ಟಕ್ಕೆ ಹೋಗುತ್ತಾರೆ. ಇದೀಗ ಬೆಂಕಿಯ ಕೆನ್ನಾಲಿಗೆಯಿಂದ ಹಸಿರು ಸುಟ್ಟು ಕರಕಲಾಗಿದೆ. ಅನೇಕ ಗಿಡ ಮರಗಳು, ಸಣ್ಣ ಪುಟ್ಟ ಪ್ರಾಣಿಗಳು ಬೆಂಕಿಗೆ ಆಹುತಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.