ಚಿಕ್ಕಬಳ್ಳಾಪುರ: ಗಾಂಜಾ ಸಾಗಾಣಿಕೆ ನಡೆಸುತ್ತಿದ್ದ ಐದು ಮಂದಿಯನ್ನು ಚಿಕ್ಕಬಳ್ಳಾಪುರ ಸಿಇಎನ್ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ. ₹ 17.50 ಲಕ್ಷ ಮೌಲ್ಯದ 36 ಕೆ.ಜಿ ಗಾಂಜಾ, ಆಂಧ್ರಪ್ರದೇಶ ನೋಂದಣಿಯ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಬಾಗೇಪಲ್ಲಿ ತಾಲ್ಲೂಕಿನ ಗೆರಗಿರೆಡ್ಡಿ ಪಾಳ್ಯದ ದೇವಮ್ಮ (38), ಆದಿನಾರಾಯಣ (26), ಆಂಜಿ (18), ಪಲ್ಲಿಗುಂಟೆ ಗ್ರಾಮದ ಮಾರಪ್ಪ (63) ಮತ್ತು ಆಂಧ್ರಪ್ರದೇಶದ ಮದನಪಲ್ಲಿ ಮಂಡಲದ ಚಿಂತಮಾಕಲಪಲ್ಲಿ ಗ್ರಾಮದ ವೆಂಕಟರಮಣ (24) ಬಂಧಿತರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ವಿವರ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಆಂಧ್ರಪ್ರದೇಶದ ತಿರುಪತಿ ಕಡೆಯಿಂದ ಮುಳಬಾಗಿಲು, ಶ್ರೀನಿವಾಸಪುರ ಮಾರ್ಗವಾಗಿ ಚೇಳೂರು ಕಡೆಗೆ ನಾಲ್ಕು ಮಂದಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮಂಗಳವಾರ ರಾತ್ರಿ ಡಿವೈಎಸ್‌ಪಿ ರವಿಕುಮಾರ್ ಅವರಿಗೆ ದೊರೆತಿತ್ತು. ಆ ಹಿನ್ನೆಲೆಯಲ್ಲಿ ಕಾರ‍್ಯಾಚರಣೆ ನಡೆಸಿದ್ದರು ಎಂದರು.
ಆರೋಪಿ ದೇವಮ್ಮ, ಮತ್ತೊಬ್ಬ ಆರೋಪಿ ಮಾರಪ್ಪ ಅವರ ಪುತ್ರಿ ಆಗಿದ್ದಾರೆ. ದೇವಮ್ಮ ಅವರ ಪುತ್ರ ಆಂಜಿ ಸಹ ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. ದೇವಮ್ಮ ಮೇಲೆ ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಯಲ್ಲಿಯೂ ಗಾಂಜಾ ಮಾರಾಟ ಪ್ರಕರಣಗಳು ದಾಖಲಾಗಿವೆ. ಆಕೆಯ ಪುತ್ರ ಆಂಜಿ ಮೇಲೆ ಚೇಳೂರು ಠಾಣೆಯಲ್ಲಿ ಫೋಕ್ಸೊ ಪ್ರಕರಣ ಸಹ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ಖರೀದಿಸಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದರು. ಇವರು ಬೇರೆ ಬೇರೆ ಕಡೆಗಳಿಗೆ ಗಾಂಜಾವನ್ನು ಪೂರೈಸುತ್ತಿದ್ದಾರೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲಾಗುತ್ತಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣ, ಓಡಿಶಾದ ಗಡಿಭಾಗಗಳಿಂದ ರಾಜ್ಯಕ್ಕೆ ಗಾಂಜಾ ಹೆಚ್ಚು ಪೂರೈಕೆ ಆಗುತ್ತಿದೆ. ವಿಶಾಖಪಟ್ಟಣದಿಂದ ದೊಡ್ಡ ಪ್ರಮಾಣದಲ್ಲಿ ಗಾಂಜಾ ಖರೀದಿಸಿ ರೈಲಿನಲ್ಲಿ ತಿರುಪತಿಗೆ ತಂದಿದ್ದಾರೆ. ಅಲ್ಲಿಂದ ಕಾರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ತರುತ್ತಿದ್ದರು. ಗಾಂಜಾವನ್ನು ಚಿಕ್ಕಪೊಟ್ಟಣಗಳಾಗಿ ಮಾಡಿ ಬೇರೆ ಬೇರೆ ಪೆಡ್ಲರ್‌ಗಳಿಗೆ ಮಾರಾಟ ಮಾಡುತ್ತಿದ್ದರು ಎಂದರು.
2025ರಲ್ಲಿ 45ರಿಂದ 50 ಕೆ.ಜಿ ಗಾಂಜಾವನ್ನು ಜಿಲ್ಲೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಗಾಂಜಾ ಮಾರಾಟ ಪ್ರಕರಣಗಳ ತಡೆಗೆ ಇಲಾಖೆ ಮುಂದಾಗಿದೆ. ಕಾರ‍್ಯಾಚರಣೆ ಹೆಚ್ಚಿದ ಪರಿಣಾಮ ಆರೋಪಿಗಳು ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳ ಮಾರಾಟ, ಸೇವನೆ ಬಗ್ಗೆ ಯುವ ಸಮುದಾಯಕ್ಕೆ ಜಾಗೃತಿ ಸಹ ಮೂಡಿಸುತ್ತಿದ್ದೇವೆ ಎಂದು ಹೇಳಿದರು.
ಡಿವೈಎಸ್‌ಪಿ ರವಿಕುಮಾರ್, ಇನ್‌ಸ್ಪೆಕ್ಟರ್ ಎಂ. ಸೂರ್ಯಪ್ರಕಾಶ್, ಸಿಬ್ಬಂದಿ ವಿ.ಸುಬ್ರಮಣಿ, ಕೃಷ್ಣಪ್ಪ, ಅಂಬರೀಷ್, ನಾರಾಯಣಸ್ವಾಮಿ, ಜವರಪ್ಪ ಪರಸಂಗಿ, ಬಾರೇಶವಲ್ಲಿ, ಬಾಲಾಜಿ, ಭಾಗ್ಯಮ್ಮ, ಮಹಬೂಬ್ ಬಾಷ ಕರ‍್ಯಾಚರಣೆಯ ತಂಡದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.