ADVERTISEMENT

ಹಳ್ಳಿ ಅಖಾಡದಲ್ಲಿ ‘ಪ್ರತಿಷ್ಠೆ’ ಪಣಕ್ಕೆ

ಗ್ರಾ.ಪಂ. ಚುನಾವಣೆ: ಮೂರು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಬಿರುಸು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 4:11 IST
Last Updated 20 ಡಿಸೆಂಬರ್ 2020, 4:11 IST
ಟಿ.ರಾಮಲಿಂಗಪ್ಪ
ಟಿ.ರಾಮಲಿಂಗಪ್ಪ   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಡಿ. 22 ಮತ್ತು 27ರಂದು ಎರಡು ಹಂತಗಳಲ್ಲಿ ನಡೆಯಲಿರುವ 152 ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ಹಳ್ಳಿ ಮತದಾರರನ್ನು ಸೆಳೆಯುವ ಮೂಲಕ ರಾಜಕೀಯ ಬೇರುಗಳನ್ನು ಗಟ್ಟಿಗಳಿಸಿಕೊಳ್ಳಲು ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪ್ರಯತ್ನ ನಡೆಸಿವೆ.

ಚುನಾವಣೆಗೆ ನಾಮಪತ್ರ ಸಲ್ಲಿಕೆ, ವಾಪಸ್‌ ಪಡೆಯುವ ಪ್ರಕ್ರಿಯೆ ಮುಗಿದಿದ್ದೇ ಹಳ್ಳಿಗಳಲ್ಲಿ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಚುನಾವಣೆಯು ಪಕ್ಷಗಳ ಚಿಹ್ನೆಯಲ್ಲಿ ನಡೆಯದಿದ್ದರೂ, ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಜತೆಗೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ಕೂಡ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಸೇರಿದಂತೆ ಜಿಲ್ಲೆಯ ಶಾಸಕರೆಲ್ಲರೂ ತಮ್ಮ ಬೆಂಬಲಿಗರ ಮೂಲಕ ತಳಮಟ್ಟದಲ್ಲಿ ತಮ್ಮ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಯತ್ನಿಸುತ್ತಿದ್ದಾರೆ. ಮತದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ.

ADVERTISEMENT

ಪಕ್ಷದ ಚಿಹ್ನೆ, ಬ್ಯಾನರಿ ಅಡಿ ಈ ಚುನಾವಣೆ ನಡೆಯುತ್ತಿಲ್ಲವಾದರೂ ಪ್ರತಿ ಅಭ್ಯರ್ಥಿಯೂ ಒಂದಿಲ್ಲೊಂದು ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಆಯಾ ಪಕ್ಷದ ಸಾಂಪ್ರದಾಯಿಕ ವೋಟುಗಳನ್ನು ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ಬಹುತೇಕ ಕ್ಷೇತ್ರಗಳಲ್ಲಿ ಮೂರು ಪಕ್ಷಗಳೂ ತಮ್ಮ ಕಾರ್ಯಕರ್ತರನ್ನೇ ಕಣಕ್ಕಿಳಿಸಿವೆ.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ಗೆ ತಮ್ಮ ಅಸ್ತಿತ್ವ ಕಾಯ್ದುಕೊಳ್ಳುವ ಸವಾಲು ಎದುರಾಗಿದ್ದರೆ, ಬಿಜೆಪಿಗೆ ಎಲ್ಲೆಡೆ ಕೇಸರಿಯ ‘ಘಮ’ ಪಸರಿಸುವ ಹೊಸ ಜವಾಬ್ದಾರಿ ಹೆಗಲೇರಿದೆ. ಪ್ರಜಾಪ್ರಭುತ್ವದ ಅಡಿಗಲ್ಲಿನಂತಿರುವ ಈ ಚುನಾವಣೆ ಎಲ್ಲ ಪಕ್ಷದವರಿಗೂ ರಾಜಕೀಯವಾಗಿ ಬೇರೂರಲು ಗೆಲ್ಲುವ ಅನಿವಾರ್ಯತೆ ಎದುರಾಗಿದೆ.

ಬಿಜೆಪಿ ಮತ್ತು ಕಾಂಗ್ರೆಸ್‌ ಮುಖಂಡರು ಈಗಾಗಲೇ ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರವಾರು ಸಭೆ ನಡೆಸಿ ಪಕ್ಷ ಸಂಘಟಿಸಲು ಯತ್ನಿಸಿದ್ದಾರೆ. ಜೆಡಿಎಸ್‌ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಮೊದಲೇ ಕಾರ್ಯಕರ್ತರ ಸಭೆ ಕರೆದು ಅವರನ್ನು ಚುನಾವಣೆಗೆ ಸಜ್ಜುಗೊಳಿಸಲು ಅದರ ಮುಖಂಡರು ಕಸರತ್ತು
ನಡೆಸಿದ್ದಾರೆ.

ಆಡಳಿತಾರೂಢ ಬಿಜೆಪಿ ಬೆಂಬಲಿತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ಮನವರಿಕೆ ಮಾಡುವ ಮೂಲಕ ತಮ್ಮನ್ನು ಬೆಂಬಲಿಸುವಂತೆ ಮತದಾರರ ಮನವೊಲಿಸುವ ಕೆಲಸ ಮಾಡುತ್ತಿದ್ದರೆ, ಇನ್ನೊಂದೆಡೆ ವಿರೋಧ ಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್‌ನವರು ಬಿಜೆಪಿಯವರ ಆಡಳಿತ ವೈಫಲ್ಯಗಳ ಬಗ್ಗೆ ಪ್ರಚಾರ ನಡೆಸುವ ಮೂಲಕ ಬದಲಾವಣೆಗಾಗಿ ತಮ್ಮ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ‘ಪ್ರತಿಷ್ಠೆ’ ಕಣದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎನ್ನುವುದು ಸದ್ಯದ ಕುತೂಹಲ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.