ADVERTISEMENT

6,269 ಮನೆಗಳಿಗೆ ಉಚಿತ ‘ಬೆಳಕು’

ಅಂದಾರ್ಲಹಳ್ಳಿಯಲ್ಲಿ ಉಜ್ವಲ ಭಾರತ ಉಜ್ವಲ ಭವಿಷ್ಯ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 5:23 IST
Last Updated 30 ಜುಲೈ 2022, 5:23 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ಅಂದಾರ್ಲಹಳ್ಳಿಯಲ್ಲಿ ಆಯೋಜಿಸಿದ್ದ ವಿದ್ಯುತ್ ಮಹೋತ್ಸವವನ್ನು ಸಚಿವರಾದ ಎಂ.ಟಿ.ಬಿ.ನಾಗರಾಜ್, ಡಾ.ಕೆ.ಸುಧಾಕರ್ ಉದ್ಘಾಟಿಸಿದರು
ಚಿಕ್ಕಬಳ್ಳಾಪುರ ತಾಲ್ಲೂಕಿನ ಅಂದಾರ್ಲಹಳ್ಳಿಯಲ್ಲಿ ಆಯೋಜಿಸಿದ್ದ ವಿದ್ಯುತ್ ಮಹೋತ್ಸವವನ್ನು ಸಚಿವರಾದ ಎಂ.ಟಿ.ಬಿ.ನಾಗರಾಜ್, ಡಾ.ಕೆ.ಸುಧಾಕರ್ ಉದ್ಘಾಟಿಸಿದರು   

ಚಿಕ್ಕಬಳ್ಳಾಪುರ/ಗುಡಿಬಂಡೆ: ವಿದ್ಯುತ್ ಸಂಪರ್ಕ ಇಲ್ಲದ ಜಿಲ್ಲೆಯ 6,269 ಮನೆಗಳಿಗೆ ರಾಜ್ಯ ಸರ್ಕಾರವು ಬೆಳಕು ‘ಯೋಜನೆ’ಯಡಿ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಿದೆ.ಚಿಕ್ಕಬಳ್ಳಾಪುರ ತಾಲ್ಲೂಕಿನ 501 ಬಿಪಿಎಲ್ ಕುಟುಂಬಗಳಿಗೆ ಯೋಜನೆಯಡಿ ವಿದ್ಯುತ್ ಸಂಪರ್ಕ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಹೇಳಿದರು.

ತಾಲ್ಲೂಕಿನ ಅಂದಾರ್ಲಹಳ್ಳಿಯಲ್ಲಿ ಮತ್ತು ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ವಿದ್ಯುತ್ ಮಹೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ₹ 14.61 ಕೋಟಿ ವೆಚ್ಚದಲ್ಲಿ ಜಿಲ್ಲೆಯ 771 ಗ್ರಾಮಗಳ 7,321 ಮನೆಗಳಿಗೆ ಹಾಗೂ ಚಿಕ್ಕಬಳ್ಳಾಪುರತಾಲೂಕಿನ 109 ಗ್ರಾಮಗಳ 1,146 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.

ADVERTISEMENT

ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯಡಿ ₹ 11.5 ಕೋಟಿ ಅನುದಾನದಲ್ಲಿ 27.66 ಕಿಲೋ ಮೀಟರ್ ಮಾರ್ಗಗಳನ್ನು, 23.61 ಕಿಲೋ ಎಲ್.ಟಿ ಮಾರ್ಗಗಳು ನಿರ್ಮಿಸಲಾಗಿದೆ ಎಂದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ,ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಕತ್ತಲೆಯಲ್ಲಿದ್ದ 18,374 ಗ್ರಾಮಗಳ 2.86 ಕೋಟಿ ಮನೆಗಳಿಗೆ ಕೇವಲ 987 ದಿನಗಳಲ್ಲಿ ಬೆಳಕು ನೀಡುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ ಎಂದು ಹೇಳಿದರು.

‘ನಾನು ನುಡಿದಂತೆ ನಡೆದುಕೊಂಡಿದ್ದೇನೆ. ಈ ಹಿಂದಿನ ಎಲ್ಲ ರಾಜಕಾರಣಿಗಳು ಭರವಸೆಗಳಿಗೆ ಮಾತ್ರ ಸೀಮಿತವಾಗಿದ್ದರು. ಇದರಿಂದ ಜನರು ನಂಬಿಕೆಯನ್ನೇ ಕಳೆದುಕೊಳ್ಳುವ ಹಂತ ತಲುಪಿದ್ದರು. ಆದರೆ ನಾನು ನೀಡಿದ ಭರವಸೆಯಂತೆ ಈಗಾಗಲೇ ಎಚ್.ಎನ್.ವ್ಯಾಲಿ ಯೋಜನೆಯಡಿ ನೀರು ತರುವ ಮೂಲಕ ಜಿಲ್ಲೆಯ ಕೊಳವೆ ಬಾವಿಗಳು, ತೆರೆದ ಬಾವಿಗಳಲ್ಲಿ ನೀರು ಬರುವಂತೆ ಮಾಡಿದ್ದೇನೆ’ ಎಂದು ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಬಿಪಿಎಲ್ ಕಾರ್ಡ್‌ದಾರರಿಗೆ ಪ್ರತಿ ತಿಂಗಳು 75 ಯುನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಶುಕ್ರವಾರದಿಂದ ಸರ್ಕಾರ ಜಾರಿಗೊಳಿಸಿದೆ. ಯೋಜನೆಗೆ ಅರ್ಹವಾಗುವ ಕುಟುಂಬಗಳು ಬಳಸುವ 75 ಯುನಿಟ್ ವಿದ್ಯುತ್ ಬಿಲ್ ಗೆ ಸಂಬಂಧಿಸಿದ ಮೊತ್ತವನ್ನು ಅವರ ಖಾತೆಗೆ ಸರ್ಕಾರವೇ ವರ್ಗಾಯಿಸಲಿದೆ ಎಂದರು.

ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್,ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜು, ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ಎಸ್ಪಿ ಡಿ.ಎಲ್.ನಾಗೇಶ್, ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಎಸ್.ಜಯಚಂದ್ರ, ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟನರಸಪ್ಪ, ಪವರ್ ಗ್ರೀಡ್ ಪ್ರಧಾನ ವ್ಯವಸ್ಥಾಪಕ ಪಿ.ಶ್ರೀನಿವಾಸ್, ಪಿ.ಎಲ್.ಡಿ ಬ್ಯಾಂಕಿನ ನಿರ್ದೇಶಕ ಆನಂದಮೂರ್ತಿ, ಅಧೀಕ್ಷಕ ಇಂಜಿನಿಯರ್ ಎ.ಆರ್.ಮೃತ್ಯುಂಜಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.