ಗೌರಿಬಿದನೂರು: ‘ಕೈಗೆಟುಕದ ದ್ರಾಕ್ಷಿ, ಹುಳಿ’ ಎಂಬ ಗಾದೆ ಇದೆ. ಆದರೆ ತಾಲ್ಲೂಕಿನ ಮಂಚೇನಹಳ್ಳಿ ಸಮೀಪದ ಉಪ್ಪಾರಹಳ್ಳಿ ರೈತ ಸಂಜೀವಪ್ಪ ದ್ರಾಕ್ಷಿ ಬೆಳೆಯಿಂದ ಜೀವನವನ್ನು ಸಿಹಿಯಾಗಿಸಿಕೊಂಡಿದ್ದಾರೆ.
ಬಾಲ್ಯದಿಂದಲೇ ಕೃಷಿಯನ್ನು ಹುಚ್ಚಾಗಿಸಿಕೊಂಡಿರುವ ಸಂಜೀವಪ್ಪ ಅವರ ಅವಿಭಕ್ತ ಕುಟುಂಬ ಸಮಗ್ರ ಕೃಷಿ ಮೂಲಕ ಲಾಭ ಗಳಿಸುತ್ತಾ ನೆಮ್ಮದಿ ಜೀವನ ನಡೆಸುತ್ತಿದೆ.
ಕುಟುಂಬದಲ್ಲಿ 10 ಮಂದಿ ದೊಡ್ಡವರಿದ್ದು, ನಾಲ್ಕು ಮಕ್ಕಳಿವೆ. ಕುಟುಂಬದ ಸದಸ್ಯರೆಲ್ಲ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ.
ತಮಗಿರುವ 7 ಎಕರೆ ಜಮೀನಿನಲ್ಲಿ 2 ಎಕರೆಯಲ್ಲಿ ವಾಣಿಜ್ಯ ಬೆಳೆಯಾದ ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆಯುತ್ತಿದ್ದಾರೆ. ಇದಕ್ಕಾಗಿ ₹2 ಲಕ್ಷ ಖರ್ಚಾಗಿದೆ. ವರ್ಷಕ್ಕೆ ಎರಡು ಬೆಳೆ ಬರುತ್ತದೆ. ಇದರಿಂದ ₹7–8ಲಕ್ಷ ಗಳಿಸಬಹುದು ಎನ್ನುವ ಸಂಜೀವಪ್ಪ, ಕಳೆದ ವರ್ಷದ ದ್ರಾಕ್ಷಿ ಉತ್ತಮ ಇಳುವರಿ ನೀಡುತ್ತು. ಇದರಿಂದ ₹8 ಲಕ್ಷ ಲಾಭ ಬಂದಿತ್ತು. ಈ ಬಾರಿಯೂ ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದೇವೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ದ್ರಾಕ್ಷಿಯೊಂದಿಗೆ ಎರಡು ಎಕರೆಯಲ್ಲಿ ಹೂ ಕೋಸು ಬೆಳೆಯುತ್ತಿದ್ದಾರೆ. ಉತ್ತಮ ಇಳುವರಿ ಸಹ ಬಂದಿದೆ. ₹2 ಲಕ್ಷ ಲಾಭ ಬರಬಹುದೆಂದು ನಿರೀಕ್ಷಿಸಲಾಗಿದೆ. ಬೆಳೆಗಳಿಗೆ ರೋಗ ಮತ್ತು ಕೀಟಗಳ ಹತೋಟಿಗಾಗಿ 2,000 ಚೆಂಡು ಹೂವಿನ ಗಿಡಗಳನ್ನು ಬೆಳೆದಿದ್ದಾರೆ. ಇದರಿಂದ ರೋಗ ನಿಯಂತ್ರಣ ಜೊತೆಗೆ ಆದಾಯವು ಬರುತ್ತಿದೆ.
ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಗೊಬ್ಬರವನ್ನು ಬಳಕೆ ಮಾಡುತ್ತಿದ್ದೇವೆ. ಹಸು, ಕುರಿ, ಕೋಳಿ ಗೊಬ್ಬರವನ್ನು ಮಾರಾಟ ಮಾಡದೇ ಎಲ್ಲಾ ಜಮೀನಿಗೂ ಬಳಸುತ್ತೇವೆ. ಇದರಿಂದ ರಸಗೊಬ್ಬರದ ಬಳಕೆ ಕಡಿಮೆಯಾಗಿದೆ. ಸಾವಯವ ಬೆಳೆ ಬೆಳೆದಂತಾಗುತ್ತಿದೆ ಎನ್ನುತ್ತಾರೆ ಸಂಜೀವಪ್ಪ.
ಸರ್ಕಾರದಿಂದ ರೈತರಿಗೆ ಸಿಗುವ, ಸೌಲಭ್ಯ ಬಳಸಿಕೊಂಡು ಎಲ್ಲಾ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ದ್ರಾಕ್ಷಿ ಚಪ್ಪರಕ್ಕೆ ಸ್ಪಿಂಕ್ಲೆರ್ ಅಳವಡಿಸಲಾಗಿದೆ, ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.
ಜಮೀನಿನ ಬದುಗಳಲ್ಲಿ 60 ತೆಂಗಿನ ಮರ, ಅಡಿಕೆ ಮರ, ಸೀಬೆ, ಮಾವು, ಸೇಬು, ವಾಟರ್ ಆಪಲ್, ಎಲೆ ಬಳ್ಳಿ, ಸಪೋಟ ಸೇರಿದಂತೆ ಹಣ್ಣಿನ ಗಿಡ–ಮರ ಬೆಳೆಸಿದ್ದೇವೆ.ಇವೆಲ್ಲದರಿಂದ ಸುಖಿ ಜೀವನ ನಡೆಸುತ್ತಿದ್ದೇವೆ ಎಂದು ನಗು ನುಗುತ್ತಲೆ ಹೇಳಿದರು ಸಂಜೀವಪ್ಪ.
ಮನೆ ನಿರ್ವಹಿಸಲು ಹೈನುಗಾರಿಕೆ
ಮನೆ ನಿರ್ವಹಣೆಗಾಗಿ ಹೈನುಗಾರಿಕೆಗೆ ನಡೆಸುತ್ತಿರುವ ಸಂಜೀವಪ್ಪ ಕುಟುಂಬ 12 ಸೀಮೆ ಹಸು ಸಾಕಾಣೆ ಮಾಡುತ್ತಿದ್ದಾರೆ. ಇವುಗಳಿಂದ ಪ್ರತಿ ದಿನ ಡೈರಿಗೆ 40 ಲೀಟರ್ ಹಾಲು ಸರಬರಾಜು ಮಾಡುತ್ತಾರೆ. ಇದರಿಂದ ತಿಂಗಳಿಗೆ ₹12ರಿಂದ ₹15 ಸಾವಿರ ಆದಾಯ ಬರುತ್ತದೆ. ಆಧುನಿಕ ಶೆಡ್ ನಿರ್ಮಿಸಿಕೊಂಡು 70 ಕುರಿ ಸಾಕಣಿಕೆ ಮಾಡುತ್ತಿದ್ದಾರೆ. 3 ರಿಂದ 4 ತಿಂಗಳಿಗೊಮ್ಮೆ ಟಗರು ಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ.
ಹೆಣ್ಣು ಮತ್ತು ನಾಟಿ ಕುರಿಗಳನ್ನು ಮಾರಾಟ ಮಾಡದೇ ಸಂತಾನ ವೃದ್ಧಿಗೆ ಸಾಕಣಿಕೆ ಮಾಡಲಾಗುತ್ತಿದೆ. ಜೊತೆಗೆ ಶೆಡ್ ಕೆಳ ಭಾಗದಲ್ಲಿ ನಾಟಿ ಕೋಳಿ ಸಾಕುವ ಮೂಲಕ ಮನೆಗೆ ಬೇಕಾದ ಮೊಟ್ಟೆ ಮತ್ತು ಮಾಂಸ ಉತ್ಪಾದನೆ ಮಾಡಿಕೊಳ್ಳುತ್ತಿದ್ದಾರೆ. ಹಸುಗಳ ಮೇವಿಗಾಗಿ ಜೋಳದ ಸಪ್ಪೆ ಅಗಸೆ ಗಿಡ ರಾಗಿ ಹುಲ್ಲು ಮತ್ತು ನೇಪಿಯರ್ ಹುಲ್ಲು ಬೆಳೆಯಲಾಗಿದೆ. ಇದರ ಮದ್ಯದಲ್ಲಿ ಕುಂಬಳ ಕಾಯಿ ಗಿಡಳನ್ನು ಸಹ ನಾಟಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.