ADVERTISEMENT

ಗೌರಿಬಿದನೂರು: ರೈತರ ಬದುಕಿಗೆ ಸುಗಂಧ ಬೀರಿದ ದವನ

ಕೆ.ಎನ್‌.ನರಸಿಂಹಮೂರ್ತಿ
Published 2 ಫೆಬ್ರುವರಿ 2026, 6:29 IST
Last Updated 2 ಫೆಬ್ರುವರಿ 2026, 6:29 IST
ಗೌರಿಬಿದನೂರು ತಾಲ್ಲೂಕಿನ ಲಕ್ಷ್ಮಿಪುರದ ರೈತ ಬಾಬು ರೆಡ್ಡಿ ಬೆಳೆದಿರುವ ದವನ
ಗೌರಿಬಿದನೂರು ತಾಲ್ಲೂಕಿನ ಲಕ್ಷ್ಮಿಪುರದ ರೈತ ಬಾಬು ರೆಡ್ಡಿ ಬೆಳೆದಿರುವ ದವನ   

ಗೌರಿಬಿದನೂರು: ತಾಲ್ಲೂಕಿನ ರೈತರು ಸಾಂಪ್ರದಾಯಿಕ ಬೆಳೆದು ನಷ್ಟ ಅನುಭವಿಸಿ ಕಂಗಾಲಾಗುತ್ತಿದ್ದರು. ಕಾಲ ಬದಲಾದಂತೆ ವಾಣಿಜ್ಯ ಬೆಳೆ ಬೆಳೆದು ಲಾಭಗಳಿಸುವತ್ತ ನಿಧಾನವಾಗಿ ಮುಖ ಮಾಡುತ್ತಿದ್ದಾರೆ.

ದೇವರಿಗೆ, ರಥೋತ್ಸವ ಮತ್ತು ಆಯುರ್ವೇದಗಳಿಗೆ ಮಾತ್ರ ಸೀಮಿತವಾಗಿದ್ದ ದವನ ಬೇಸಾಯ, ಈಗ ಸುಗಂಧ ದ್ರವ್ಯದಲ್ಲಿ ಬಳಕೆ ಮಾಡಲು ಪ್ರಾರಂಭವಾಗಿ ವಿದೇಶಗಳಿಗೆ ರಫ್ತಾಗುತ್ತಿದೆ. ರೈತರು ಸಾಂಪ್ರದಾಯಿಕ ಬೆಳೆಗಳಾದ ರಾಗಿ, ಜೋಳ, ಕಡಲೆ ಸೇರಿದಂತೆ ಹಲವು ಬೆಳೆಗಳನ್ನು ಬೆಳೆದು ಅಲ್ಪಸ್ವಲ್ಪ ಆದಾಯ ಗಳಿಸುತ್ತಿದ್ದರು. ಕಾಲಕ್ರಮೇಣ ಕಡಿಮೆ ಸಮಯದಲ್ಲಿ ಯಾವುದೇ ನಷ್ಟವಿಲ್ಲದೆ, ಕೂಲಿ ಆಳುಗಳ ಮೇಲೆ ಹೆಚ್ಚು ಅವಲಂಬಿತರಾಗದೆ, ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ತರುವ ವಾಣಿಜ್ಯ ಬೆಳೆ ದವನ ಬೆಳೆಯುವತ್ತ ನಿಧಾನವಾಗಿ ವಾಲುತ್ತಿದ್ದಾರೆ.

ಗೌರಿಬಿದನೂರು, ಮಂಚೇನಹಳ್ಳಿ, ಡಿ.ಪಾಳ್ಯ, ನಗರಗೆರೆ, ಹೊಸೂರು ಭೀಮನಹಳ್ಳಿ ಸೇರಿದಂತೆ 400ರಿಂದ 500 ಎಕರೆಯಲ್ಲಿ ದವನ ಬೆಳೆಯಲಾಗುತ್ತಿದೆ.
ಈ ಬೆಳೆ ಬೆಳೆಯಲು ಹೆಚ್ಚಿನ ನೀರಿನ ಅವಶ್ಯಕತೆ ಬೇಕಾಗಿಲ್ಲ. ಕಡಿಮೆ ನೀರಿನಲ್ಲಿ ಮತ್ತು ಕಡಿಮೆ ನಿರ್ವಹಣೆಯಲ್ಲಿ ಬೆಳೆಯಬಹುದಾದ ವಾಣಿಜ್ಯ ಬೆಳೆಯಾಗಿದೆ. ಖಾಸಗಿ ಕಂಪನಿಗಳು ಈ ದವನ ಬೆಳೆಯಲು ರೈತರಿಗೆ ಬೇಕಾದ ಬೀಜ, ಗೊಬ್ಬರ, ಸೇರಿದಂತೆ ಮಾರುಕಟ್ಟೆಯ ವ್ಯವಸ್ಥೆಯನ್ನು ಒದಗಿಸುವುದರಿಂದ ರೈತರಿಗೆ ಯಾವುದೇ ತಲೆಬಿಸಿ ಇರುವುದಿಲ್ಲ.

ADVERTISEMENT

ಈ ಬೆಳೆಗೆ ಕಡಿಮೆ ರೋಗಬಾಧೆ ಇರುವುದರಿಂದ ಯಾವಾಗಲೂ ಔಷಧಿ ಸಿಂಪಡಣೆ ತೊಂದರೆ ಇರುವುದಿಲ್ಲ. ಬೆಳೆಯಲು ರೈತರಿಗೆ ಯಾವುದೇ ತಾಂತ್ರಿಕ ಮಾರ್ಗದರ್ಶನ ಬೇಕಾಗಿಲ್ಲ. ಬೆಳೆ ಕಟಾವಿನ ಬಳಿಕ ಮಾರುಕಟ್ಟೆ ಸಮಸ್ಯೆ ಇರುವುದಿಲ್ಲ. ಕಂಪನಿಗಳು ರೈತರೊಂದಿಗೆ ಬೀಜ ನೀಡುವುದು, ಸರಕು ಸಾಗಣೆ ಮತ್ತು ಸರಕನ್ನು ಕೊಂಡುಕೊಳ್ಳುವುದನ್ನು ಮುಂಗಡವಾಗಿ ಒಪ್ಪಂದ ಮಾಡಿಕೊಳ್ಳುತ್ತಾರೆ. ಇದರಿಂದ ಬೆಳೆ ಕೊಯ್ಲಿಗೆ ಬಂದಾಗಲೂ ನೆಮ್ಮದಿಯಿಂದ ಇರಬಹುದು. ಮೂರು ತಿಂಗಳ ಸಮಯದಲ್ಲಿ ರೈತರ ಕೈಗೆ ಹಣ ಸಿಗುತ್ತಿದೆ.

ಈ ಸಸ್ಯವು ಉತ್ತಮ ಪರಿಮಳ ಮತ್ತು ಔಷಧೀಯ ಗುಣ ಹೊಂದಿದೆ. ಆಯುರ್ವೇದದಲ್ಲಿ ಸಹ ಬಳಸಲಾಗುತ್ತದೆ. ಚಳಿಗಾಲದಲ್ಲಿ ಬೆಳೆ ನಾಟಿ ಮತ್ತು ಕೊಯ್ಲು ಮಾಡಲು ಸೂಕ್ತವಾಗಿವೆ. ಈ ಸಮಯದಲ್ಲಿ ಉತ್ತಮ ಎಣ್ಣೆಯ ಅಂಶವನ್ನು ಹೊಂದಿರುತ್ತದೆ. ಇದರಲ್ಲಿ ನಾಟಿ ಮತ್ತು ಹೈಬ್ರಿಡ್ ವಿಧಗಳಿದ್ದು ಟನ್‌ಗೆ ನಾಟಿ ವಿಧದ ದವನಕ್ಕೆ ₹16 ಸಾವಿರದಿಂದ ₹17ಸಾವಿರದವರೆಗೆ ಮಾರುಕಟ್ಟೆಯಲ್ಲಿ ದರವಿದೆ. ಹೈಬ್ರಿಡ್ ವಿಧಕ್ಕಾದರೆ ₹15ಸಾವಿರ ದರ ನಿಗದಿಪಡಿಸಲಾಗಿದೆ.

ಒಂದು ಎಕರೆಗೆ ಕನಿಷ್ಠ 8 ಟನ್ ಬೆಳೆಯಬಹುದು. ಕೆಲವು ರೈತರು 15 ಟನ್‌ವರೆಗೂ ಬೆಳೆದಿದ್ದಾರೆ. ಸ್ಥಳೀಯವಾಗಿರುವ ಗೌರಿಬಿದನೂರು, ದೊಡ್ಡಬಳ್ಳಾಪುರ, ಮಂಚೇನಹಳ್ಳಿ, ತೊಂಡೇಬಾವಿ, ದೇವಗಾನಹಳ್ಳಿ ಕಡೆಗಳಲ್ಲಿ ಸುಗಂಧ ತಯಾರು ಮಾಡುವ ಸಣ್ಣ ಕಂಪನಿಗಳು ರೈತರು ಬೆಳೆದ ಬೆಳೆಯನ್ನು ಖರೀದಿಸುತ್ತಾರೆ.

ಬೇಸಿಗೆ ಪ್ರಾರಂಭದಲ್ಲಿ ದವನ ಬೆಳೆಯು ಉತ್ತಮವಾಗಿ ರೈತರಿಗೆ ಅನುಕೂಲವಾಗುತ್ತಿದೆ. 75 ದಿನಗಳಲ್ಲಿ ಬೆಳೆ ಪೂರ್ಣಗೊಳ್ಳುತ್ತದೆ. ಸಾಕಷ್ಟು ಆದಾಯ ಬರುವುದರಿಂದ ರೈತರು ದವನ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ
ಕಿರಣ್ ತೋಟಗಾರಿಕೆ ಸಹಾಯಕ ನಿರ್ದೇಶಕ
ದವನ ಬೆಳೆ ಕಡಿಮೆ ಖರ್ಚಿನಲ್ಲಿ ಕಡಿಮೆ ಶ್ರಮದಲ್ಲಿ ಮತ್ತು ಕಡಿಮೆ ಸಮಯದಲ್ಲಿ ಉತ್ತಮ ಆದಾಯ ಗಳಿಸಬಹುದು. ರೈತರು ದವನ ಬೆಳೆಯಲು ಉತ್ತಮ ಅವಕಾಶ
ಬಾಬು ರೆಡ್ಡಿ ಲಕ್ಷ್ಮೀಪುರ
ಕಡಿಮೆ ನೀರಿನ ಮತ್ತು ಕಡಿಮೆ ಆಳುಗಳ ಸಹಾಯದಿಂದ ದವನ ಬೆಳೆಯಬಹುದು. ಮಾರಾಟ ಮಾಡಲು ಯಾವುದೇ ಯೋಚನೆ ಇರುವುದಿಲ್ಲ. ಸಕಾಲಕ್ಕೆ ಹಣ ಕೊಟ್ಟು ಕಂಪನಿಯವರೇ ಖರೀದಿ ಮಾಡುತ್ತಾರೆ
ಶ್ರೀನಿವಾಸ್ ಗೌಡ ನಾಗಲಮ್ಮ ಬಡಾವಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.