ADVERTISEMENT

ಗೌರಿಬಿದನೂರು: ಡಾ.ಎಚ್.ಎನ್ ಪ್ರಾಧಿಕಾರಕ್ಕೆ ಶಿವಶಂಕರ ರೆಡ್ಡಿ ಸಾರಥಿ

​ಪ್ರಜಾವಾಣಿ ವಾರ್ತೆ
Published 14 ಮೇ 2025, 15:51 IST
Last Updated 14 ಮೇ 2025, 15:51 IST
ಎನ್.ಎಚ್ ಶಿವಶಂಕರ ರೆಡ್ಡಿ
ಎನ್.ಎಚ್ ಶಿವಶಂಕರ ರೆಡ್ಡಿ   

ಗೌರಿಬಿದನೂರು: ನೂತನವಾಗಿ ರಚನೆಯಾಗಿರುವ ಡಾ.ಎಚ್.ಎನ್ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಥಮ ಅಧ್ಯಕ್ಷರಾಗಿ ಮಾಜಿ ಕೃಷಿ ಸಚಿವ, ಎನ್.ಎಚ್ ಶಿವಶಂಕರರೆಡ್ಡಿ ಅವರನ್ನು ನೇಮಕ ಮಾಡಿ ಬುಧವಾರ ಸರ್ಕಾರ ಆದೇಶ ಹೊರಡಿಸಿದೆ.

ವಿಚಾರವಾದಿ, ಶಿಕ್ಷಣ ತಜ್ಞ, ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ.ಎಚ್.ನರಸಿಂಹಯ್ಯ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಾಧಿಕಾರ ರಚಿಸಿದೆ. ಐವರು ಸದಸ್ಯರನ್ನೂ ನೇಮಿಸುವ ಜೊತೆಗೆ ಮೂವರು ತಜ್ಞರ ನೇತೃತ್ವದ ರಾಜ್ಯ ಸಲಹಾ ಸಮಿತಿಯನ್ನೂ ನೇಮಿಸಿ ಆದೇಶ ಹೊರಡಿಸಿದೆ.

ಡಾ.ಎಚ್.ನರಸಿಂಹಯ್ಯ ವಿಜ್ಞಾನ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ಎಂದು ನಾಮಕರಣವಾಗಿರುವ ಈ ಪ್ರಾಧಿಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಡಿಯಲ್ಲಿ ಬರಲಿದೆ. ನೂತನವಾಗಿ ರಚನೆಗೊಂಡಿರುವ ಈ ಪ್ರಾಧಿಕಾರದ ವ್ಯಾಪ್ತಿಗೆ ಡಾ.ಎಚ್.ಎನ್ ಸೈನ್ಸ್ ಪಾರ್ಕ್, ವಿದುರಾಶ್ವತ್ಥದ ಸ್ವಾತಂತ್ರ್ಯ ಯೋಧರ ಹುತಾತ್ಮ ಸ್ಮಾರಕ-ವೀರಸೌಧ, ಡಾ.ಎಚ್.ಎನ್ ಕಲಾ ಭವನ, ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರಗಳು ಒಳಪಡಲಿವೆ.

ADVERTISEMENT

ಸೈನ್ಸ್‌ ಪಾರ್ಕ್‌ನಲ್ಲಿ ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಟ್ಟು, ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನ ಕಲಿಕೆಗೆ ಪ್ರೋತ್ಸಾಹ ನೀಡುವುದು, ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಅಂಬೇಡ್ಕರ್ ಚಿಂತನೆ ಪ್ರಚಾರಗೊಳಿಸುವುದು, ಕಲಾ ಭವನವನ್ನು ಸಾಂಸ್ಕೃತಿಕ ಕೇಂದ್ರವಾಗಿಸುವ ಯೋಜನೆ ಹಾಗೆಯೇ ಸ್ವಾತಂತ್ರ್ಯ ಯೋಧರ ಸ್ಮಾರಕದಲ್ಲಿ ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕಾರ್ಯ ಪ್ರಾಧಿಕಾರದ ಜವಾಬ್ದಾರಿಯಾಗಲಿದೆ.

ಶಿವಶಂಕರ ರೆಡ್ಡಿ ಅವರು ಡಾ.ಎಚ್ ನರಸಿಂಹಯ್ಯ ಪ್ರಾಧಿಕಾರ ರಚನೆ ಮಾಡಲು ಮುತುವರ್ಜಿ ವಹಿಸಿ, ಪ್ರಾಧಿಕಾರದ ರೂಪುರೇಷೆ ಸಿದ್ಧಪಡಿಸಿ ಸರ್ಕಾರದ ಆಯವ್ಯಯದಲ್ಲಿ ಮಂಡನೆಯಾಗಿ ಒಪ್ಪಿಗೆ ಪಡೆಯುವಂತೆ ಮಾಡುವಲ್ಲಿ ಪರಿಶ್ರಮಪಟ್ಟಿದ್ದಾರೆ.

ಶಿವಶಂಕರ ರೆಡ್ಡಿ ಅವರ ನೇಮಕವಾಗುತ್ತಿದ್ದಂತೆ ಅಭಿಮಾನಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.