ಗೌರಿಬಿದನೂರು: ನಗರದ ಜನಸಂದಣಿ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲದೆ ಮಹಿಳೆಯರು, ವೃದ್ಧರು, ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ನಗರ ವೇಗವಾಗಿ ಬೆಳೆಯುತ್ತಿದೆ. ಆದರೆ, ಸಾರ್ವಜನಿಕ ಶೌಚಾಲಯ ಮಾತ್ರ ನಗರದ ಪ್ರಮುಖ ಜಾಗಗಳಲ್ಲಿ ಇಲ್ಲದಿರುವುದು ಸಾರ್ವಜನಿಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಸರ್ಕಾರ ಕೋಟ್ಯಂತರ ಹಣ ವಿನಿಯೋಗಿಸಿ ಮೂಲ ಸೌಕರ್ಯಕ್ಕೆ ವಿನಿಯೋಗಿಸುತ್ತಿದೆ. ಸ್ವಚ್ಛ ಭಾರತ್ ಅಭಿಯಾನದಂತಹ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಆದರೆ, ಸಂಬಂಧಪಟ್ಟ ಇಲಾಖೆಗಳು ಮಾತ್ರ ನಗರವನ್ನು ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಬಿಂಬಿಸಿಕೊಳ್ಳುವುದರಲ್ಲಿ ಮಗ್ನವಾಗಿವೆ.
ಶೌಚಾಲಯಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕಣ್ಮುಚ್ಚಿ ಕುಳಿತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ. ನಗರದ ಬೆಂಗಳೂರು ವೃತ್ತ, ನ್ಯಾಷನಲ್ ಕಾಲೇಜು, ಮಧುಗಿರಿ ವೃತ್ತ, ವಾಲ್ಮೀಕಿ ವೃತ್ತ, ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಶೌಚಾಲಯಗಳಿಲ್ಲ. ಇದು ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ಕಪ್ಪು ಚುಕ್ಕೆ. ನಗರದಿಂದ ಪ್ರತಿದಿನ ಚಿಕ್ಕಬಳ್ಳಾಪುರ, ಬೆಂಗಳೂರು ನಗರಗಳಿಗೆ ನೂರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ ಮತ್ತು ನಗರದಲ್ಲಿರುವ ಅನೇಕ ಶಾಲಾ ಕಾಲೇಜುಗಳಿಗೆ ಸಾವಿರಾರು ಮಂದಿ ವಿದ್ಯಾರ್ಥಿಗಳು ಬರುತ್ತಾರೆ. ಆದರೆ, ಮೂತ್ರ ವಿಸರ್ಜನೆಗೆ ಶೌಚಾಲಯಗಳಿಲ್ಲ.
ಪ್ರತಿನಿತ್ಯ ನಗರದಿಂದ ಹೊರ ಹೋಗುವ ಮತ್ತು ಒಳ ಬರುವ ಪ್ರಯಾಣಿಕರ ಸಂಖ್ಯೆ ಪ್ರತಿದಿನ ಹೆಚ್ಚುತ್ತಲೇ ಇದೆ. ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಸ್ಥಳೀಯ ಆಡಳಿತ ಸಂಸ್ಥೆಗಳ ಜವಾಬ್ದಾರಿ. ಆದರೆ, ನಗರ ಆಡಳಿತ ಮಾತ್ರ ಈ ಬಗ್ಗೆ ಯೋಚನೆ ಮಾಡಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.
ನಗರ ಪ್ರದೇಶದಲ್ಲಿ 31 ವಾರ್ಡಗಳಿವೆ. 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ನಗರದಲ್ಲಿರುವ ಬೆರಳಣಿಕೆ ಸಾರ್ವಜನಿಕ ಶೌಚಾಲಯಗಳು ಉಪಯೋಗಕ್ಕೆ ಬಾರದೆ ನಿಷ್ಕ್ರೀಯವಾಗಿವೆ. ನಗರದ ಉತ್ತರ ಪಿನಾಕಿನಿ ದಡ ಮತ್ತು ವೀರಂಡಹಳ್ಳಿಯಲ್ಲಿರುವ ಎರಡು ಸಮುದಾಯ ಶೌಚಾಲಯಗಳು ಪಾಳುಬಿದ್ದು ವರ್ಷಗಳೇ ಉರುಳಿವೆ.
ಹಳೆ ಹೂವಿನ ಮಾರುಕಟ್ಟೆ ಬಳಿ ಒಂದು ಶೌಚಾಲಯವಿದ್ದರೂ ಸಾರ್ವಜನಿಕರು ಒಳಗೆ ಹೋಗಲು ಆಗದ ಪರಿಸ್ಥಿತಿ ಇದೆ. ಸರ್ಕಾರಿ ಬಸ್ ನಿಲ್ದಾಣದಲ್ಲಿ ಒಂದು ಶೌಚಾಲಯವನ್ನು ಖಾಸಗಿ ಅವರು ನಿರ್ವಹಣೆ ಮಾಡುತ್ತಿದ್ದಾರೆ ಮತ್ತು ಹಿಂದೂಪುರ ವೃತ್ತದಲ್ಲಿ ಮತ್ತೊಂದು ಖಾಸಗಿ ಶೌಚಾಲಯವಿದ್ದರು ಸಹ ಬಸ್ ನಿಲ್ದಾಣದಿಂದ ಒಳಗಡೆ ಇರುವುದರಿಂದ ಹೊಸಬರು ತಕ್ಷಣಕ್ಕೆ ಹುಡುಕಲು ಕಷ್ಟ ಸಾಧ್ಯ.
ಪಂಚಾಯಿತಿ ಆವರಣ ಮತ್ತು ನೆಹರೂ ಕಾಲೊನಿಯಲ್ಲಿರುವ ಶೌಚಾಲಯಗಳಿಗೆ ಬೀಗ ಹಾಕಿ ತಿಂಗಳಗಳೇ ಕಳೆದಿದೆ. ನಗರಸಭೆ ಅವರಣದಲ್ಲಿರುವ ಶೌಚಾಲಯವನ್ನು ನಿರ್ವಹಣೆ ಮಾಡದೆ, ಸಾರ್ವಜನಿಕರಿಗೆ ಉಪಯೋಗವಾಗದ ರೀತಿಯಲ್ಲಿ ಇರುವುದರಿಂದ ಅಲ್ಲಿಗೆ ಯಾರು ಹೋಗದೆ ಇರಲು ಅಡ್ಡ ಹಾಕಲಾಗಿದೆ. ನಗರದ ಹೃದಯ ಭಾಗದಲ್ಲಿರುವ ಬಹುತೇಕ ಎಲ್ಲ ಶೌಚಾಲಯಗಳು ನಿರ್ವಹಣೆ ಇಲ್ಲದೆ ಸೊರಗುತ್ತಿವೆ.
ನಗರದಲ್ಲಿ ಶೌಚಾಲಯಗಳಿಲ್ಲದ ಕಾರಣ ಖಾಲಿ, ಮರದ ಆಸರೆ, ಪಾಳು ಬಿದ್ದ ನಿವೇಶನದ ಜಾಗಗಳೇ ಮೂತ್ರ ವಿಸರ್ಜನಾ ಸ್ಥಳಗಳಾಗಿವೆ. ಇದು ದಾರಿಹೋಕರಿಗೆ ಕಿರಿಕಿರಿ ಆಗಿದೆ. ನಗರದ ಜನರ ಆರೋಗ್ಯಕ್ಕೂ ಧಕ್ಕೆಯಾಗುತ್ತಿದೆ.
ಶೌಚಾಲಯಗಳನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಲು ಬೇಕಾಗುವ ವೆಚ್ಚವನ್ನು ತಾಂತ್ರಿಕ ವಿಭಾಗದಿಂದ ಪಡೆದು ಶೀಘ್ರದಲ್ಲಿ ದುರಸ್ತಿಗೊಳಿಸಲು ಕೈಗೊಳ್ಳಲಾಗುವುದುಶಿವಶಂಕರ್ ಪರಿಸರ ಎಂಜಿನಿಯರ್
ಮೂತ್ರ ವಿಸರ್ಜನೆ ಮಾಡಲು ಯಾವುದೇ ಶೌಚಾಲಯಗಳು ಇಲ್ಲದೇ ಇರುವುದರಿಂದ ತೊಂದರೆಯಾಗುತ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕುಹೆಸರು ಹೇಳದ ಮಹಿಳಾ ಪ್ರಯಾಣಿಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.