
ಚಿಕ್ಕಬಳ್ಳಾಪುರ: ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಸಿಇಟಿ ಸೇರಿದಂತೆ ವಿವಿಧ ಹಂತದ ಕೋರ್ಸ್‌ಗಳಲ್ಲಿ ಹೆಣ್ಣುಮಕ್ಕಳು ಮೊದಲ ರ‍್ಯಾಂಕ್ ಪಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಜಿ.ಶಿವಶಂಕರೇಗೌಡ ಅವರು ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಮಂಗಳವಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ಮುಕ್ತ ಅಭಿಯಾನ ಹಾಗೂ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಣ್ಣುಮಕ್ಕಳಿಗೆ ಹೆಚ್ಚು ಅವಕಾಶಗಳನ್ನು ಸಮಾಜ ನೀಡಬೇಕು. ಹೆಣ್ಣು ಮಕ್ಕಳು ಎಲ್ಲ ರಂಗಗಳಲ್ಲಿಯೂ ಉತ್ತಮ ಜ್ಞಾನ ಹೊಂದುವ ಜೊತೆಗೆ ಉತ್ತಮ ಸಾಧನೆಗಳನ್ನು ಮಾಡುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು.
ಹೆಣ್ಣುಮಕ್ಕಳು ವಿವಿಧ ರಂಗಗಳಲ್ಲಿ ಸಾಧನೆ ತೋರುತ್ತಿದ್ದಾರೆ. ಹೀಗಿದ್ದರೂ ಇಂದಿನ ದಿನಗಳಲ್ಲಿಯೂ ಬಾಲ್ಯವಿವಾಹದ ಸಾಮಾಜಿಕ ಪಿಡುಗುಗಳು ಜೀವಂತವಾಗಿದೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ. ಇನ್ನಾದರೂ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸ್ವಾತಂತ್ರ್ಯಕ್ಕೆ ಒತ್ತು ನೀಡಿ ಅವರನ್ನು ಸಮಾಜದ ಪ್ರಧಾನ ವಾಹಿನಿಗೆ ತರಬೇಕು. ಬಾಲ್ಯವಿವಾಹದಂತ ಅನಿಷ್ಟ ಪದ್ಧತಿಗಳಿಗೆ ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ 34 ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಕಚೇರಿಯಿದೆ. ಆದರೆ, ಚಿಕ್ಕಬಳ್ಳಾಪುರ ಆಯೋಗದ ಕಚೇರಿಗೆ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ. ಆಯೋಗದಲ್ಲಿ ಪ್ರಕರಣ ದಾಖಲಿಸಿ ಗ್ರಾಹಕರು ನ್ಯಾಯ ಮತ್ತು ಪರಿಹಾರ ಪಡೆಯಬಹುದು ಎಂದರು.
ರಾಜ್ಯ ಗ್ರಾಹಕರ ವೇದಿಕೆಗಳಲ್ಲಿ ಬೆಳೆ ವಿಮೆ, ಜೀವವಿಮೆ, ವೈದ್ಯಕೀಯ ನಿರ್ಲಕ್ಷ್ಯ ಸೇರಿದಂತೆ ವಿವಿಧ ವಿಮಾ ಕಂಪೆನಿಗಳ ವಿರುದ್ಧ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಆಯೋಗದ ಅಧ್ಯಕ್ಷರಾಗಿ 7 ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದೇನೆ. ಆ ವೇಳೆ ಪ್ರಕರಣಗಳ ವಿಲೇವಾರಿಯಲ್ಲಿ ಆಯೋಗವು ದೇಶದಲ್ಲಿ 28ನೇ ಸ್ಥಾನದಲ್ಲಿತ್ತು. ಪ್ರಕರಣಗಳ ಶೀಘ್ರ ವಿಲೇವಾರಿಗೆ ಒತ್ತು ನೀಡಿದ ಪರಿಣಾಮ ಈಗ ರಾಷ್ಟ್ರದಲ್ಲಿ 2ನೇ ಸ್ಥಾನದಲ್ಲಿದೆ ಎಂದರು.
ಗ್ರಾಹಕರ ವೇದಿಕೆಗಳು ಮತ್ತು ಹಕ್ಕುಗಳ ಬಗ್ಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘಗಳು ಗ್ರಾಮೀಣ ಭಾಗಗಳ ಜನರಲ್ಲಿ ವ್ಯಾಪಕ ಅರಿವು ಮೂಡಿಸಬೇಕು. ಇದರಿಂದ ಗ್ರಾಹಕರ ವೇದಿಕೆ ಮತ್ತು ನ್ಯಾಯಾಲಯಗಳು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ ಎಂದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ ಶೆಟ್ಟಿ, ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಬಾಲ್ಯ ವಿವಾಹ ಜೀವಂತವಾಗಿರುವುದು ಖೇದಕರ. ಹೆಣ್ಣುಮಗುವಿಗೆ 18 ವರ್ಷದೊಳಗೆ ಮದುವೆ ಮಾಡುವುದು ಶಿಕ್ಷಾರ್ಹ. 18 ವರ್ಷದೊಳಗಿನ ಹೆಣ್ಣುಮಗು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿ ಬೆಳೆದಿರುವುದಿಲ್ಲ ಎಂದರು.
ಇದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ. ಸಮೀಪದ ಎಲ್ಲಿಯೇ ಆಗಲಿ ಬಾಲ್ಯ ವಿವಾಹ ಆಗುತ್ತಿರುವುದು ಕಂಡು ಬಂದಲ್ಲಿ ಕೂಡಲೇ ಸಂಬಂಧಪಟ್ಟ ಇಲಾಖೆ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು. ಬಾಲ್ಯ ವಿವಾಹಗಳನ್ನು ಶೂನ್ಯಕ್ಕೆ ತರಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಅದು ದೇಶದ ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಪಿ.ರಾಮಲಿಂಗೇಗೌಡ, ಜಿಲ್ಲಾಧಿಕಾರಿ ಜಿ.ಪ್ರಭು, ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್, ಎಸ್‌ಪಿ ಕುಶಾಲ್ ಚೌಕ್ಸೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ ಅಭಿಲಾಷ್, ಸ್ಕೂಲ್ ಆಫ್ ಲಾ ರಾಮಯ್ಯ ಯೂನಿವರ್ಸಿಟಿ ಆಫ್ ಅಪೈಡ್ ಸೈನ್ಸ್ ಉಪಾಧಿಕಾರಿ ಅಶೋಕ್ ರಾವ್, ಎಚ್.ಒ.ಡಿ ಅರುಣಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
‘ಹಳೆ ಎಸಿ ಕಚೇರಿಗೆ ಗ್ರಾಹಕರ ಆಯೋಗದ ಕಚೇರಿ ಸ್ಥಳಾಂತರಿಸಿ’
ಚಿಕ್ಕಬಳ್ಳಾಪುರ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಆಯೋಗದ ಕಚೇರಿ ನಗರದ ಹೊರವಲಯದಲ್ಲಿದೆ. ದೂರದ ಕಾರಣ ಇಲ್ಲಿಗೆ ಬರಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಟಿ.ಜಿ.ಶಿವಶಂಕರೇಗೌಡ ಅವರು ತಿಳಿಸಿದರು. ಆಯೋಗದ ಕಚೇರಿಯನ್ನು ನಗರದ ಹೃದಯ ಭಾಗ ಸ್ಥಳಾಂತರಿಸಲು ಜಿಲ್ಲಾಡಳಿತವು ಸೂಕ್ತ ಸ್ಥಳ ನೀಡಬೇಕು. ಜಿಲ್ಲಾ ನ್ಯಾಯಾಲಯ ಸಂಕೀರ್ಣ ಸಮೀಪದ ಪ ವಿಭಾಗಾಧಿಕಾರಿ ಕಚೇರಿಯ ಹಳೇ ಕಟ್ಟಡ ಖಾಲಿಯಿದೆ. ಈ ಕಟ್ಟಡಕ್ಕೆ ಕಚೇರಿ ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತದ ಗಮನಕ್ಕೆ ತಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.