ADVERTISEMENT

ಶಿಡ್ಲಘಟ್ಟ | ಅರಳಿ ನಿಂತ ಬಂಗಾರದ ಹೂವು

ತಾಲ್ಲೂಕಿನಾದ್ಯಂತ ವನಕುಸುಮಗಳ ಸೊಬಗು

ಡಿ.ಜಿ.ಮಲ್ಲಿಕಾರ್ಜುನ
Published 20 ಮೇ 2020, 19:30 IST
Last Updated 20 ಮೇ 2020, 19:30 IST
ಪಿಂಡಿಪಾಪನಹಳ್ಳಿಯಲ್ಲಿ ಕಕ್ಕೆ ಗಿಡದಲ್ಲಿ ಹೂವಿನ ಸೊಬಗು
ಪಿಂಡಿಪಾಪನಹಳ್ಳಿಯಲ್ಲಿ ಕಕ್ಕೆ ಗಿಡದಲ್ಲಿ ಹೂವಿನ ಸೊಬಗು   

ಶಿಡ್ಲಘಟ್ಟ: ತಾಲ್ಲೂಕಿನ ವಿವಿದೆಡೆ ಕಕ್ಕೆ ಗಿಡಗಳು ಬಂಗಾರ ಬಣ್ಣದ ಹೂವುಗಳಿಂದ ಕಂಗೊಳಿಸುತ್ತಿವೆ. ವನಕುಸುಮಗಳ ಸೊಬಗು ಮತ್ತು ಘಮಲು ಎಲ್ಲೆಡೆ ಪಸರಿಸಿದೆ.

ಬ್ಯಾಟೆ ಹೂವು ಎಂದು ಕರೆಯುವ ಈ ಹೂವಿಗೆ ತೆಲುಗಿನಲ್ಲಿ ರ‍್ಯಾಲಿ ಹೂವು ಎಂದು, ಇಂಗ್ಲಿಷ್‌ನಲ್ಲಿ ಗೋಲ್ಡನ್‌ ಶವರ್‌ ಟ್ರಿ ಎಂದು ಕರಯುತ್ತಾರೆ. ಗೊಂಚಲುಗೊಂಚಲಾಗಿ ಬಿಡುವ ಇದರ ಸೊಬಗು ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಿನಲ್ಲಿ ಕಂಡು ಬರುತ್ತದೆ. ಕಕ್ಕೆಯ ಹೂಗಳ ಗೊಂಚಲು ಜೇನು ದುಂಬಿಗಳಿಗೆ ಮಕರಂದವನ್ನು ಅಪರಿಮಿತ ಸೌಂದರ್ಯದ ಮೂಲಕ ನೋಡುಗರ ಮನಸ್ಸಿಗೆ ಮುದವನ್ನು ನೀಡುತ್ತದೆ.

ಕೃಷಿಕ ವರ್ಗದ ಆರಾಧ್ಯ ಪುಷ್ಪವಿದು. ಮುಂಗಾರಿನಲ್ಲಿ ಹೊಲಗಳ ಬಿತ್ತನೆ ಸಮಯದಲ್ಲಿ ಕಕ್ಕೆ ಹೂವನ್ನು ಪೂಜಿಸುತ್ತಾರೆ. ಕಣದ ರಾಶಿಯಲ್ಲೂ ಮಾವಿನ ಎಲೆಯೊಂದಿಗೆ ಇದನ್ನು ಪೂಜಿಸುತ್ತಾರೆ.

ADVERTISEMENT

ಸ್ವರ್ಣಪುಷ್ಪ ಎಂದೂ ಕರೆಯುವ ಇದನ್ನು ಥೈಲ್ಯಾಂಡ್ ದೇಶ ರಾಷ್ಟ್ರೀಯ ಹೂವು. ಕೇರಳದ ರಾಜ್ಯ ಪುಷ್ಪವಾಗಿದೆ.

ಕಕ್ಕೆ ಒಂದು ಮೂಲಿಕಾ ಸಸ್ಯವೂ ಹೌದು. ದನ- ಕರುಗಳಿಗೆ ಕಾಲು ಬಾಯಿ ಜ್ವರ ಬಂದಾಗ ರೈತರು ಕಕ್ಕೆ ಎಲೆಯನ್ನು ತಂದು ಕೆಂಡದ ಮೇಲೆ ಹಾಕಿ ಹೊಗೆ ಹಾಕುತ್ತಾರೆ. ಕೆಲವು ಕಾಯಿಲೆಗಳಿಗೆ ಅದರ ತೊಗಟೆ ಬಳಸುತ್ತಾರೆ. ಕಕ್ಕೆ ಎಲೆ ನಾಟಿ ವೈದ್ಯದಲ್ಲಿ ಕೀಲುನೋವಿನ ಎಣ್ಣೆ ತಯಾರಿಕೆಯಲ್ಲಿ ಬಳಸುವ ಮುಖ್ಯ ಮೂಲಿಕೆಗಳಲ್ಲಿ ಒಂದಾಗಿದೆ. ಜಿರಳೆ ಓಡಿಸಲು ಇದರ ಒಣಗಿದ ಕಾಯಿಯ ಹೊಗೆ ಹಾಕಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.