
ಗೌರಿಬಿದನೂರು: ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆಯನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂಬ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಇದೇ 12ರಿಂದ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ದ್ವಿಚಕ್ರ ವಾಹನ ಸವಾರಿ ಮಾಡಬೇಕು ಎಂಬುದಾಗಿ ಜಾಗೃತಿ ಮೂಡಿಸಿರುವ ಹೊರತಾಗಿಯೂ ಹಲವು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿರುವುದು ಕಂಡುಬಂದಿತು. ಅಂಥವರಿಗೆ ದಂಡ ವಿಧಿಸುವ ಮೂಲಕ ನಗರ ಠಾಣೆ ಪೊಲೀಸರು ಬಿಸಿ ಮುಟ್ಟಿಸಿದರು.
ನಗರ ಠಾಣೆ ಪಿಎಸ್ಐ ಗೋಪಾಲ್ ಮಾತನಾಡಿ, ಎಲ್ಲ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರು ಚಾಲನೆ ಮಾಡುವವರು ಮತ್ತು ಮುಂಬದಿ ಸೀಟಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕ ಸೀಟ್ ಬೆಲ್ಟ್ ಹಾಕಿಕೊಳ್ಳಲೇಬೇಕು. ಜೊತೆಗೆ ವಾಹನ ದಾಖಲೆ ಪತ್ರಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಜಾಗೃತಿ ಮೂಡಿಸಲಾಗಿದೆ. ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೆಲ್ಮೆಟ್ ಧರಿಸದೆ ರಸ್ತೆಗೆ ಇಳಿದ ನೂರಕ್ಕೂ ಹೆಚ್ಚು ವಾಹನ ಸವಾರರಿಂದ ₹50 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹವಾಯಿತು.
ಇದೇ ವೇಳೆ ನಗರ ಠಾಣೆ ಪಿಎಸ್ಐ ಲಲಿತಮ್ಮ, ಗ್ರಾಮಾಂತರ ಠಾಣೆ ಪಿಎಸ್ಐ ರಮೇಶ್ ಗುಗ್ಗರಿ, ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.