ಗೌರಿಬಿದನೂರು: ನಗರದ ಮಾದನಹಳ್ಳಿ ಕೆರೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಆವರಣ ಹಂದಿಗಳ ಆವಾಸ ಸ್ಥಾನವಾಗಿದ್ದು, ಅವ್ಯವಸ್ಥೆ ತಾಂಡವವಾಡುತ್ತಿದೆ.
ಒಂದೇ ಕಟ್ಟದಲ್ಲಿ 5ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಸುಮಾರು 600 ವಿದ್ಯಾರ್ಥಿನಿಯರು ಓದುತ್ತಿರುವ ವಸತಿ ನಿಲಯಕ್ಕೆ ಇಬ್ಬರು ವಾರ್ಡನ್ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ನಿಲಯದ ಆವರಣದಲ್ಲಿ ವಾತಾವರಣ ಗಬ್ಬೆದ್ದು ನಾರುತ್ತಿದೆ. ಇಲ್ಲಿನ ಪರಿಸ್ಥಿತಿ ನೋಡಿದರೆ, ಇದು ಹಾಸ್ಟೆಲ್ ಆವರಣವೋ ಇಲ್ಲ ಚರಂಡಿ, ಕೊಳಚೆ ಪ್ರದೇಶವೋ ಎಂಬ ಭಾವನೆ ಮೂಡುತ್ತದೆ.
ವಸತಿ ನಿಲಯದ ಶೌಚಾಲಯದ ತ್ಯಾಜ್ಯ ನೀರು ಹೊರಹೋಗಲು ವ್ಯವಸ್ಥೆ ಮಾಡದೇ ಇರುವುದರಿಂದ ವಸತಿ ನಿಲಯದಲ್ಲಿ ಆವರಣದಲ್ಲೇ ಸಂಗ್ರಹವಾಗುತ್ತಿದೆ. ಕಟ್ಟಡಕ್ಕೆ ಸೇರಿಕೊಂಡೆ ನೀರು ನಿಂತು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದ್ದು, ದುರ್ನಾತ ಬೀರುತ್ತಿದೆ. ಇದರಿಂದ ಹಂದಿಗಳ ಹಾವಳಿ ಜಾಸ್ತಿಯಾಗಿ ಹಾಸ್ಟೆಲ್ ಆವರಣ ಕೊಳಚೆ ಪ್ರದೇಶ ಕಾಣುತ್ತಿದೆ.
ಕಿಟಕಿಗಯಿಂದ ಸದಾ ಬರುವ ದುರ್ನಾತದಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಓದಿಕೊಳ್ಳಲು, ವಿಶ್ರಾಂತಿ ತೆಗೆದುಕೊಳ್ಳಲು ಆಗುತ್ತಿಲ್ಲ. ಸರಿಯಾಗಿ ಊಟ ಸೇರುತ್ತಿಲ್ಲ. ನಿದ್ದೆ ಬರುತ್ತಿಲ್ಲ. ನಮ್ಮ ಗೋಳು ಹೇಳತೀರಾದಾಗಿದೆ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು.
600 ವಿದ್ಯಾರ್ಥಿನಿಯರು ಇರುವ ದೊಡ್ಡ ವಸತಿ ನಿಲಯ ಆವರದಲ್ಲಿ ಸ್ವಚ್ಛತೆ ಕಾಪಾಡುವುದು ಅಲ್ಲಿನ ಅಧಿಕಾರಿಗಳ ಜವಾಬ್ದಾರಿ. ಆದರೆ ಈ ಬಗ್ಗೆ ಯಾವ ಅಧಿಕಾರಿಯು ತಲೆ ಕೆಡಿಸಿಕೊಂಡಿಲ್ಲ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಸ್ವಚ್ಛತೆ ಬಗ್ಗೆ ಪಾಠ ಮಾಡಿ, ಮಾದರಿಯಾಗಬೇಕಾದ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ದೂರಿದ್ದಾರೆ.
ಶೌಚಾಲಯ ತ್ಯಾಜ್ಯದ ನೀರು ಹೊರ ಹೋಗಲು ವ್ಯವಸ್ಥೆ ಇಲ್ಲ ದುರ್ನಾತಕ್ಕೆ ಊಟ, ನಿದ್ದೆ ಬರುತ್ತಿಲ್ಲ; ವಿದ್ಯಾರ್ಥಿನಿಯರ ಅಳಲು
ಪೈಪ್ ಒಡೆದು ನೀರು ನಿಂತಿರುವುದರಿಂದ ಸಮಸ್ಯೆಯಾಗಿದೆ. ಅದಷ್ಟು ಬೇಗ ಸಮಸ್ಯೆ ಸರಿಪಡಿಸಲಾಗುವುದುವಸಂತ ಕುಮಾರಿ ವಾರ್ಡನ್
ಹಾಸ್ಟೆಲ್ ಆವರಣವನ್ನು ಸ್ವಚ್ಛ ಮಾಡಲಾಗಿತ್ತು. ಆದರೆ ಕೆಲವು ಸಮಸ್ಯೆ ಗಳಿಂದ ಮತ್ತೆ ಇದೇ ರೀತಿಯಾಗಿದೆ. ತಕ್ಷಣ ಸರಿಪಡಿಸಲಾಗುವುದು.ಅರುಣಾ ವಾರ್ಡನ್
ಅವ್ಯವಸ್ಥೆ ಸರಿಪಡಿಸಲಾಗುವುದು...
ವಸತಿ ನಿಲಯವನ್ನು ಕೆರೆ ಅಂಗಳದಲ್ಲಿ ನಿರ್ಮಾಣ ಮಾಡಲಾಗಿದೆ. ಒಂದು ಭಾಗದಲ್ಲಿ ತಡೆಗೋಡೆ ಇಲ್ಲದೇ ಇರುವುದರಿಂದ ಸಹಜವಾಗಿ ಹಂದಿಗಳು ಎಮ್ಮೆಗಳು ಬರುತ್ತವೆ. ಬಳಕೆ ನೀರು ಆಚೆ ಹೋಗಲು ವ್ಯವಸ್ಥೆ ಇಲ್ಲ. ಇದರಿಂದ ಬಳಕೆಯಾದ ನೀರು ಒಂದೇ ಕಡೆ ಶೇಖರಣೆಯಾಗಿ ಸಮಸ್ಯೆಯಾಗಿದೆ. ಪಿಟ್ ಗುಂಡಿಯು ಸಣ್ಣದಾಗಿರುವುದರಿಂದ ತುಂಬಿರಬಹುದು ಈಗಲೇ ಅದನ್ನು ಸರಿಪಡಿಸಿ ದೊಡ್ಡ ಗುಂಡಿಯನ್ನು ತೆಗೆಸಿ ಅವ್ಯವಸ್ಥೆ ಸರಿಪಡಿಸಲಾಗುವುದು. ವನಜಾಕ್ಷಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.