
ಗೌರಿಬಿದನೂರು: ತಾಲ್ಲೂಕು ಮತ್ತು ನಗರ ಅಧ್ಯಕ್ಷರ ಹುದ್ದೆಗಳಿಗೆ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡದಿದ್ದರೆ ಬಂಡಾಯ ಅಭ್ಯರ್ಥಿಗಳನ್ನು ನಿಲ್ಲಿಸಿ ಎದುರಾಳಿಗಳನ್ನು ಸೋಲಿಸಲಾಗುವುದು ಎಂದು ಬಿಜೆಪಿ ಮುಖಂಡ ಎನ್.ಎಂ.ರವಿನಾರಾಯಣ ರೆಡ್ಡಿ ತಿಳಿಸಿದರು.
ನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆದ ಗ್ರಾಮೀಣ ಮತ್ತು ನಗರ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಪಕ್ಷವನ್ನು ಸಂಘಟಿಸಲು ಭರತ್ ರೆಡ್ಡಿ ಮತ್ತು ಜಯಣ್ಣ ಅವರನ್ನು ತಾಲ್ಲೂಕು ಮತ್ತು ನಗರ ಅಧ್ಯಕ್ಷರ ಹುದ್ದೆಗೆ ವರಿಷ್ಠರು ಶಿಫಾರಸು ಮಾಡಿದ್ದಾರೆ ಎಂದು ತಿಳಿಸಿದರು.
ಪಕ್ಷದ ಅಧಿಕಾರ ಸಮರ್ಥರ ಕೈಯಲ್ಲಿರಬೇಕು ಹಾಗೂ ಅಸಮರ್ಥರ ಕೈಗೆ ಸಿಕ್ಕರೆ ಪಕ್ಷಕ್ಕೆ ಹಾನಿ ಎಂದು ಹೇಳಿದರು. ತಾಲ್ಲೂಕಿನಲ್ಲಿ ಬಿಜೆಪಿಯನ್ನು ದುರ್ಬಲಗೊಳಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಸಣ್ಣ ಸಭೆಗಳಿಗೆ ಹಣ ಕೇಳುವ ಇವರು ಅಧ್ಯಕ್ಷ ಹುದ್ದೆ ಆಕಾಂಕ್ಷಿಗಳು ಎಂದು ಟೀಕಿಸಿದರು.
ತಾಲ್ಲೂಕಿನಲ್ಲಿ ಸೈನಿಕರಂತೆ ದುಡಿಯುವ ಕಾರ್ಯಕರ್ತರನ್ನು ಕಡೆಗಣಿಸಿ ಅಸಮರ್ಥರಿಗೆ ಅಧಿಕಾರ ನೀಡಲು ಸಾಧ್ಯವಿಲ್ಲ. ಪಕ್ಷ ಸಂಘಟನೆ ದೃಷ್ಟಿಯಿಂದ ಕಠಿಣ ನಿರ್ಧಾರಗಳ ಸಮಯ ಬಂದಿದೆ ಎಂದು ತಿಳಿಸಿದರು.
ಹಿರಿಯ ಮುಖಂಡರಾದ ವೇಮಾ ರೆಡ್ಡಿ, ಹಲವು ಕಾರಣಗಳಿಂದ ಪಕ್ಷ ತಾಲ್ಲೂಕಿನಲ್ಲಿ ಹಾಳಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸ್ಪರ್ಧಿಸಿದಾಗ ಮುಖಂಡರು ಮತ್ತು ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿಲ್ಲ. ಇದು ಪಕ್ಷಕ್ಕೆ ಹಿನ್ನಡೆ ತಂದಿತು ಎಂದರು.
ಮುಖಂಡ ಡಾ.ಶಶಿಧರ್ ಮಾತನಾಡಿ, ತಾಲ್ಲೂಕಿನಲ್ಲಿ ನೂರು ಧ್ವನಿ ಮತ್ತು ಸಮಸ್ಯೆಗಳಿದ್ದರೂ ಬಿಜೆಪಿಯನ್ನು ಬಲಪಡಿಸುವ ಶಕ್ತಿ ರವಿನಾರ್ಯಣ ರೆಡ್ಡಿ ಅವರಿಗೆ ಮಾತ್ರ ಇದೆ ಎಂದರು.
ಅಧ್ಯಕ್ಷ ಹುದ್ದೆ ಆಕಾಂಕ್ಷಿ ಭರತ್ ರೆಡ್ಡಿ, ಹಲವು ವರ್ಷಗಳಿಂದ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಕೆಲಸ ಮಾಡಲಾಗಿದೆ. ಪಕ್ಷವು ಇದನ್ನು ಗಮನಿಸಿ ಅಧ್ಯಕ್ಷ ಹುದ್ದೆ ನೀಡಿದರೆ ತಾಲ್ಲೂಕಿನಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಂಗನಾಥ್, ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ನಾಗಭೂಷಣಸ್ವಾಮಿ, ಮುನಿಲಕ್ಷ್ಮಮ್ಮ, ಚೈತ್ರ, ಸತೀಶ್, ದಾಲ್ ರಮೇಶ್, ಕೊಂಡಪ್ಪ, ರಂಗನಾಥ್ ಗೌಡ, ಶ್ರೀಧರ್ ರೆಡ್ಡಿ, ಜಯಣ್ಣ, ಅಬ್ಬಾಸ್, ನರಸಿಂಹಯ್ಯ, ಸನಂದಪ್ಪ, ಆನಂದ್ ರೆಡ್ಡಿ, ನಿಜಲಿಂಗಪ್ಪ, ಮಲ್ಲಿಕಾರ್ಜುನ್ ರೆಡ್ಡಿ, ನಾಗರಾಜು, ಸುಧಾಕರ್ ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ಉಪಸ್ಥಿತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.