ADVERTISEMENT

ಗೌರಿಬಿದನೂರು ತಾಲ್ಲೂಕಿಗೆ ಬಜೆಟ್ ನಿರೀಕ್ಷೆ ಅಪಾರ

ಕುಡುಮಲಕುಂಟೆ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಿಂದ ಸ್ಥಳೀಯರಿಗೆ ಉದ್ಯೋಗ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 3:08 IST
Last Updated 28 ಫೆಬ್ರುವರಿ 2026, 3:08 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಪ್ರಜಾವಾಣಿ ಚಿತ್ರ

ಗೌರಿಬಿದನೂರು: ರಾಜ್ಯ ಸರ್ಕಾರದ ಬಜೆಟ್‌ ಮಂಡನೆಗೆ ದಿನಗಣನೆ ಆರಂಭವಾಗಿದ್ದು, ವೇಗವಾಗಿ ಅಭಿವೃದ್ಧಿಯಾಗುತ್ತಿರುವ ತಾಲ್ಲೂಕಿಗೆ ಸರ್ಕಾರ ವಿಶೇಷ ಪ್ಯಾಕೆಜ್ ಘೋಷಣೆ ಮಾಡಿದರೆ, ತಾಲ್ಲೂಕಿನ ಅಭಿವೃದ್ಧಿ ವೇಗಕ್ಕೆ ಟಾನಿಕ್ ನೀಡಿದಂತಾಗುತ್ತದೆ ಎಂಬುದು ಈ ಭಾಗದ ಜನರ ಆಕಾಂಕ್ಷೆಯಾಗಿದೆ. 

ADVERTISEMENT

ರಾಜ್ಯ ರಾಜಧಾನಿ ಬೆಂಗಳೂರು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಸ್ಮಾರ್ಟ್ ಸಿಟಿ ತುಮಕೂರು ಮತ್ತು ನೆರೆಯ ಆಂಧ್ರಪ್ರದೇಶಕ್ಕೆ ಹತ್ತಿರದಲ್ಲಿರುವ ಗೌರಿಬಿದನೂರು ನಗರದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಜೊತೆಗೆ ದೇಶದ ರಾಜಧಾನಿ ದೆಹಲಿ, ಮುಂಬೈ, ಹೈದರಾಬಾದ್, ಪುಣೆ, ಚೆನ್ನೈ ಸೇರಿದಂತೆ ವಿವಿಧ ಮಹಾನಗರಗಳಿಗೆ ತಲುಪಲು ಮತ್ತು ಸುಲಲಿತವಾಗಿ ಸರಕು ಸಾಗಣೆ ಮಾಡಲು ರೈಲು ಸಂಪರ್ಕ ವ್ಯವಸ್ಥೆಯನ್ನೂ ತಾಲ್ಲೂಕು ಹೊಂದಿದೆ. ಇದರ ನಡುವೆ ನೂರಾರು ಎಕರೆಯಲ್ಲಿ ಅಭಿವೃದ್ಧಿಯಾಗುತ್ತಿರುವ ಕುಡಮಲಕುಂಟೆ ಕೈಗಾರಿಕಾ ಪ್ರದೇಶಕ್ಕೆ ಮತ್ತಷ್ಟು ಉತ್ತೇಜನ ನೀಡಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹಿಸಿದಲ್ಲಿ, ವಾಣಿಜ್ಯ ಚಟುವಟಿಕೆಗಳು ಹೆಚ್ಚುತ್ತವೆ. ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂಬುದು ಈ ಭಾಗದ ಜನರ ನಿರೀಕ್ಷೆಯಾಗಿದೆ. 

ಮಳೆಯಾಶ್ರಿತ ಪ್ರದೇಶವಾಗಿರುವ ತಾಲ್ಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆಗಳೇ ಇಲ್ಲವಾಗಿವೆ. ಇದರಿಂದಾಗಿ ಪ್ರತಿಯೊಂದಕ್ಕೂ ಮಳೆ ನೀರು ಮತ್ತು ಕೆರೆಗಳ ಮೇಲೆ ಅವಲಂಬನೆಯಾಗಬೇಕಿದೆ. ಹೀಗಾಗಿ, ಕೆಸಿ ವ್ಯಾಲಿ, ಎಚ್ಎನ್ ವ್ಯಾಲಿ ಮತ್ತು ಎತ್ತಿನಹೊಳೆ ಯೋಜನೆಗಳಿಗೆ ಈ ಬಜೆಟ್‌ನಲ್ಲಿ ಅನುದಾನವನ್ನು ಮೀಸಲಿಟ್ಟು, ಶೀಘ್ರವೇ ಈ ಯೋಜನೆಗಳನ್ನು ಜಾರಿಗೊಳಿಸಬೇಕು. ಇದರಿಂದ ತಾಲ್ಲೂಕಿನ ನೀರಿನ ಬವಣೆ ನೀಗಲಿದೆ. ತಾಲ್ಲೂಕಿನಲ್ಲಿ ಹರಿಯುವ ಉತ್ತರ ಪಿನಾಕಿನಿ ನದಿಯ ಗತವೈಭವ ಮರುಕಳಿಸಲು ವಿಶೇಷ ಅನುದಾನ ನೀಡಬೇಕು. ಇದರಿಂದ ಈ ಭಾಗದ ಜನರು ಮತ್ತು ಜಾನುವಾರುಗಳಿಗೆ ಅನುಕೂಲವಾಗುತ್ತದೆ. 

ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಹೊಂದಿದೆ. ಈ ಮೂಲಕ ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದೆ. ಆದರೆ, ನಗರದಲ್ಲಿ ಒಳಚರಂಡಿ ವ್ಯವಸ್ಥೆಯೇ ಇಲ್ಲ. ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಒದಗಿಸಬೇಕು ಎಂಬುದು ನಗರ ನಿವಾಸಿಗಳ ಒತ್ತಾಯ. ತಾಲ್ಲೂಕಿನ ದೊಡ್ಡ ಕೆರೆ ವಾಟಾದಹೊಸಹಳ್ಳಿ ಕೆರೆ, ವಿದುರಾಶ್ವತ್ಥ, ಮುದಗಾನಕುಂಟೆ, ಡಾ ಎಚ್.ಎನ್ ವಿಜ್ಞಾನ ಕೇಂದ್ರಗಳನ್ನು ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ತಾಣವಾಗಿ ಘೋಷಿಸಿದೆ. ಸರ್ಕಾರ ಆರ್ಥಿಕ ಉತ್ತೇಜನ ನೀಡಿದರೆ, ಮತ್ತಷ್ಟು ಅಭಿವೃದ್ಧಿಗೆ ದಾರಿಯಾಗಲಿದೆ.

––

ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲು ಎತ್ತಿನಹೊಳೆ ಯೋಜನೆಗೆ ಹೆಚ್ಚಿನ ಅನುದಾನ ಮೀಸಲಿಟ್ಟು ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಇದರಿಂದ ತಾಲ್ಲೂಕಿಗೆ ಶಾಶ್ವತ ನೀರಾವರಿ ಒದಗಿಸಿದಂತಾಗುತ್ತದೆ. ಗ್ರಾಮೀಣ ಜನರು ನಗರಗಳಿಗೆ ಗುಳೆ ಹೋಗುವುದನ್ನು ತಪ್ಪಿಸಬಹುದು.

–ವರದಾರೆಡ್ಡಿ ಹಾಲಗಾನಹಳ್ಳಿ ರೈತ

ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಆದರೆ ಇಂದಿಗೂ ಒಳಚರಂಡಿ ವ್ಯವಸ್ಥೆ ಇಲ್ಲ. ಸರ್ಕಾರ ಈ ಬಜೆಟ್‌ನಲ್ಲಿ ಅನುದಾನ ಒದಗಿಸಿದರೆ ಜನರಿಗೆ ಅನುಕೂಲವಾಗುವ ಜೊತೆಗೆ ತಾಲ್ಲೂಕಿನ ಅಭಿವೃದ್ಧಿಗೆ ಸಹಕರಿಯಾಗಲಿದೆ.

–ಶಾಂತರಾಜು ನಿವೃತ್ತ ಶಿಕ್ಷಕ ಕರೇಕಲ್ಲಹಳ್ಳಿ

ತಾಲ್ಲೂಕಿಗೆ ಶಾಶ್ವತ ನೀರಾವರಿ ಮರೀಚಿಕೆಯಾಗಿದೆ. 15 ವರ್ಷಗಳಿಂದ ಪುಸ್ತಕದಲ್ಲಿ ಮಾತ್ರ ಯೋಜನೆ ಜಾರಿಯಾಗುತ್ತಿದೆ. ರಾಜ್ಯಕ್ಕೆ ಹಾಲು ಕೊಡುವ ನಮಗೆ ಬೆಳೆ ಬೆಳೆಯಲು ಸಹ ಸರ್ಕಾರ ನೀರು ನೀಡುತ್ತಿಲ್ಲ

–ಗೌರೀಶ್ ಆರಾಧ್ಯ ಉದಯೋನ್ಮುಖ ರೈತ ಗೌರಿಬಿದನೂರು

ಡಾ.ಎಚ್.ಎನ್ ಪಾರ್ಕ್‌ಗೆಅನುದಾನದ

ನಿರೀಕ್ಷೆ ಖ್ಯಾತ ಶಿಕ್ಷಣ ತಜ್ಞ ಡಾ.ಎಚ್. ನರಸಿಂಹಯ್ಯ ಅವರ ಹೆಸರಿನಲ್ಲಿ 200 ಎಕರೆ ಜಾಗದಲ್ಲಿ ವಿಜ್ಞಾನ ಉದ್ಯಾನ ನಿರ್ಮಿಸಲಾಗಿದೆ. ಜೊತೆಗೆ ಈ ನಿಟ್ಟಿನಲ್ಲಿ ಪ್ರಾಧಿಕಾರವನ್ನು ರಚಿಸಲಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಎಚ್.ಎನ್. ಪ್ರಾಧಿಕಾರವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಉನ್ನತೀಕರಿಸಲು ವಿಶೇಷ ಅನುದಾನ ಮೀಸಲಿಡಬೇಕು. ಎಚ್.ಎನ್ ಹೆಸರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಕಾಲೇಜುಗಳನ್ನು ಪ್ರಾರಂಭ ಮಾಡಬೇಕು. ಆಗ ಎಚ್.ಎನ್ ಹೆಸರಿಗೆ ಗೌರವ ಸಲ್ಲಿಸಿದಂತಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.