ADVERTISEMENT

ಸರ್ಕಾರಿ ನೌಕರರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 5:53 IST
Last Updated 21 ಡಿಸೆಂಬರ್ 2025, 5:53 IST
ಗೌರಿಬಿದನೂರು ಸರ್ಕಾರಿ ನೌಕರರ ಸಮಾವೇಶದಲ್ಲಿ ನೌಕರರನ್ನು ಸನ್ಮಾನಿಸಲಾಯಿತು
ಗೌರಿಬಿದನೂರು ಸರ್ಕಾರಿ ನೌಕರರ ಸಮಾವೇಶದಲ್ಲಿ ನೌಕರರನ್ನು ಸನ್ಮಾನಿಸಲಾಯಿತು   

ಗೌರಿಬಿದನೂರು: ಸರ್ಕಾರಿ ನೌಕರರು ಬದ್ಧತೆಯಿಂದ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು. ಯಾರನ್ನೋ ಮೆಚ್ಚಿಸಲು, ಹೊಗಳಿಸಿಕೊಳ್ಳಲು ಕೆಲಸ ಮಾಡಬಾರದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಹೇಳಿದರು.

ನಗರದಲ್ಲಿ ಸರ್ಕಾರಿ ನೌಕರರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ನೌಕರರ ಸಮಾವೇಶ ಮತ್ತು ಅಭಿನಂದನಾ ಸಭೆಯಲ್ಲಿ ಮಾತನಾಡಿದರು.

ಸರ್ಕಾರ ನೌಕರರಿಗಾಗಿ ರಜಾ ದಿನಗಳಲ್ಲೂ ಸಂಬಳ ನೀಡಿ, ನೌಕರರ ಕುಟುಂಬಕ್ಕೆ ಆಸರೆಯಾಗಿ ನಿಂತಿದೆ. ಕೋವಿಡ್ ಸಮಯದಲ್ಲಿ ನಾಲ್ಕು ತಿಂಗಳು ಮನೆಯಲ್ಲಿದ್ದರೂ ಸರ್ಕಾರ ಸಂಬಳ ನೀಡಿತ್ತು. ಇಲ್ಲಿನ ಶಾಸಕರು ನೌಕರ ಸ್ನೇಹಿಯಾಗಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಎಲ್ಲರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ನೌಕರರ ಧ್ವನಿಯಾಗಿದ್ದಾರೆ. ಇದರಿಂದ ನೌಕರರು ಸಹ ಜವಾಬ್ದಾರಿಯಿಂದ ಹಾಗೂ ಬದ್ಧತೆಯಿಂದ ಕೆಲಸ ಮಾಡಬೇಕು ಎಂದರು.

ADVERTISEMENT

ಕರ್ನಾಟಕದಲ್ಲಿ ಸರ್ಕಾರಿ ನೌಕರರ ಸಂಘಟನೆಗೆ 106 ವರ್ಷಗಳ ಇತಿಹಾಸವಿರುವ ಅಖಂಡವಾದ ಸಂಘಟನೆ, ನೌಕರರ ಪರವಾಗಿ ಸರ್ಕಾರಗಳಿಂದ ಅನೇಕ ಆದೇಶಗಳನ್ನು ಸಂಘಟನೆಯಿಂದ ಮಾಡಿಸಲಾಗಿದೆ. ವೇತನ, ಕೆಜಿಡಿ ಸಾಲ, ಹೆಣ್ಣು ಮಕ್ಕಳ ಋತುಚಕ್ರ ರಜೆ, ವೇತನ ಸಹಿತ ರಜೆಗಳು ಸೇರಿದಂತೆ 25-26 ಆದೇಶಗಳು ಬಂದಿರುವುದು ಸಂಘಕ್ಕೆ ಸಂದ ಜಯವಾಗಿದೆ ಎಂದರು.

ಮುಂದಿನ ದಿನಗಳಲ್ಲಿ ರಾಜ್ಯದ ನೌಕರರಿಗೆ ಕೇಂದ್ರ ಸರ್ಕಾರದ ಮಾದರಿ ವೇತನ ಕೊಡಿಸಲು ಹಾಗೂ ಎನ್‌ಪಿಎಸ್ ಪಿಂಚಣಿ ವ್ಯವಸ್ಥೆಯ ಬದಲು ಒಪಿಎಸ್ ಜಾರಿಗೆ ತರಲು ಪ್ರಯತ್ನ ಮಾಡಲಾಗುತ್ತಿದೆ. ಸರ್ಕಾರದೊಂದಿಗೆ ಬೇಡಿಕೆಗಳನ್ನು ಚರ್ಚೆ ಮಾಡುತ್ತೇವೆ. ಅವರು ಸರಿಯಾಗಿ ಸ್ಪಂದಿಸದಿದ್ದರೆ ನೌಕರರ ವರ್ಗ ಮತ್ತು ಅವರ ಕುಟುಂಬಗಳು ಸಹಜವಾಗಿ ಸರ್ಕಾರದ ನಿದ್ದೆಕೆಡಿಸುತ್ತವೆ ಎಂದರು.

ಶಾಸಕ ಕೆ.ಎಚ್ ಪುಟ್ಟಸ್ವಾಮಿ ಗೌಡ ಮಾತನಾಡಿ, ಸಂಘದ ರಾಜ್ಯಾಧ್ಯಕ್ಷ ಸರ್ಕಾರಿ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸಕ್ಕೆ ಮಾಡುತ್ತಿದ್ದಾರೆ. ಸರ್ಕಾರದ ಯಾವುದೇ ಜನಪರವಾದ ಕೆಲಸ ಮಾಡಬೇಕೆಂದರೆ ಸರ್ಕಾರಿ ನೌಕರರು, ಜನರ ಮತ್ತು ಸರ್ಕಾರದ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಾರೆ. ಸರ್ಕಾರ ನೀಡುವ ಸೌಲಭ್ಯಗಳನ್ನು ಸಕಾಲದಲ್ಲಿ ಜನರಿಗೆ ತಲುಪಿಸಲು ನೌಕರರ ಶ್ರಮ ಅಪಾರ. ಇತ್ತೀಚಿನ ದಿನಗಳಲ್ಲಿ ಕೆಲವು ರಾಜಕಾರಣಿಗಳು ಸಹ ಕೆಲಸಕ್ಕೆ ಒತ್ತಡ ಹಾಕುವುದು, ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಕೆಲವು ವಿಚಾರಗಳಲ್ಲಿ ಮೂಗು ತೂರಿಸುತ್ತಿರುವುದು, ನೌಕಕರು ಕೆಲಸ ಮಾಡಲು ಸಮಸ್ಯೆಯಾಗಿದೆ ಎಂದರು.

ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಕೆ ಹೊನ್ನಯ್ಯ ಮಾತನಾಡಿ, ನೌಕರ ವರ್ಗ ಜನರ ಹಿತಕ್ಕಾಗಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರ ವರ್ಗ ಜನಸ್ನೇಹಿಯಾಗಿ ಕೆಲಸ ಮಾಡಿದರೆ ಸಾರ್ವಜನಿಕರ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಬಹುದು. ಶಾಲಾ ಶಿಕ್ಷಕರು ಸಹ ಶಾಲೆಗಳಲ್ಲಿ ಉತ್ತಮ ಫಲಿತಾಂಶಕ್ಕೆ ಶ್ರಮ ವಹಿಸಬೇಕು ಎಂದು ಹೇಳಿದರು.

ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಆರ್.ಮಂಜುನಾಥ್, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರಿ ಗೌಡ, ಲೋಕೇಶ್, ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಸ್ವಾಮಿ, ತಾಲ್ಲೂಕು ಉಪಾಧ್ಯಕ್ಷ ಅಂಜಿನಪ್ಪ, ಬಿಇಒ ಗಂಗರೆಡ್ಡಿ, ಬಿಸಿಎಂ ಕಲ್ಯಾಣಧಿಕಾರಿ ವನಜಾಕ್ಷಿ, ಪ್ರವೀಣ್ ಕುಮಾರ್, ಬೈರೇಗೌಡ, ರವಿಕುಮಾರ್, ಬಾಲರಾಜು, ಅಮರ್, ಮಲ್ಲಿಕಾರ್ಜುನ್ ಬಳ್ಳಾರಿ, ಬಾಲಾಜಿ ಉಪಸ್ಥಿತರಿದ್ದರು.

ಗೌರಿಬಿದನೂರು ನಗರದ ಡಾ ಎಚ್ ಎನ್ ಕಲಾ ಭವನದಲ್ಲಿ ಸರ್ಕಾರಿ ನೌಕರರ ಸಮಾವೇಶವನ್ನು ಶಾಸಕ ಕೆ ಎಚ್ ಪುಟ್ಟಸ್ವಾಮಿ ಗೌಡ ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.