ADVERTISEMENT

ಗ್ರಾ.ಪಂ ನೌಕರರ ಮುಷ್ಕರ

ಬಾಕಿ ವೇತನ ಪಾವತಿಗೆ ಆಗ್ರಹ l ಅನುದಾನ ಕಡಿತ ವಿರೋಧ l ನ.26ರಂದು ಧರಣಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 2:26 IST
Last Updated 20 ನವೆಂಬರ್ 2020, 2:26 IST

ಬಾಗೇಪಲ್ಲಿ: ಬಾಕಿ ವೇತನ ಪಾವತಿ ಹಾಗೂ ಅನುದಾನ ಕಡಿತ ವಿರೋಧಿಸಿ ಗ್ರಾಮ ಪಂಚಾಯಿತಿ ನೌಕರರು ನ.26ರಂದು ಮುಷ್ಕರ ಹಮ್ಮಿಕೊಳ್ಳಲಿದ್ದಾರೆ.

ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ಪಾಪಣ್ಣ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಈ ವಿಷಯ ತಿಳಿಸಿದರು.

‘ಗ್ರಾಮ ಪಂಚಾಯಿತಿ ನೌಕರರಿಂದ ಅಖಿಲ ಭಾರತ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ನೌಕರರಿಗೆ 2018ರ ಮಾರ್ಚ್‌ನಿಂದ ಸರ್ಕಾರವೇ ವೇತನ ನೀಡುತ್ತಿದ್ದು, ಹಣಕಾಸು ಇಲಾಖೆಯು ಮಂಜೂರಾತಿ ನೀಡಿ ವಾರ್ಷಿಕವಾಗಿ ₹518 ಕೋಟಿ ಮಾತ್ರ ಬಿಡುಗಡೆ ಮಾಡುತ್ತಿದೆ. ಆದರೆ 63 ಸಾವಿರ ನೌಕರರಿಗೆ 2018-19ನೇ ಹಾಗೂ 2019-20ನೇ ಸಾಲಿನಲ್ಲಿ ಪ್ರತಿ ವರ್ಷ ಎಲ್ಲಾ ನೌಕರರಿಗೆ 8 ತಿಂಗಳು ಮಾತ್ರ ವೇತನ ನೀಡಲಾಗುತ್ತಿದೆ. ಇದರಿಂದ ನೌಕರರಿಗೆ ತೊಂದರೆ ಆಗಿದೆ’ ಎಂದರು.

ADVERTISEMENT

‘ದೇಶದ 73 ವರ್ಷಗಳಲ್ಲಿಯೇ ಇದೀಗ ಮೊದಲ ಬಾರಿ ಕಾರ್ಮಿಕ ಕಾನೂನುಗಳ ಸುಧಾರಣೆ ಹೆಸರಿನಲ್ಲಿ ಲೋಕಸಭೆಯಲ್ಲಿ ಚರ್ಚೆಗೆ ಅವಕಾಶ ನೀಡದೇ, ರಾಷ್ಟ್ರಪತಿಗಳಿಂದ ಅಂಕಿತ ಪಡೆದು ಕಾರ್ಮಿಕರ, ದುಡಿಯುವ ವರ್ಗದವರ ವಿರೋಧಿ ಕಾನೂನುಗಳನ್ನು ಜಾರಿ ಮಾಡಿದೆ. ದೇಶೀಯ ಹಾಗೂ ಕಾರ್ಪೋರೇಟ್ ಕಂಪನಿಗಳ ಏಜೆಂಟರಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವರ್ತಿಸುತ್ತಿದೆ’ ಎಂದು
ಆರೋಪಿಸಿದರು.

ಸಂಘದ ಗೌರವಾಧ್ಯಕ್ಷ ಫಯಾಜುಲ್ಲಾ ಮಾತನಾಡಿ, ‘ರೈತ ವಿರೋಧಿಯಾದ ಕೇಂದ್ರ ಸರ್ಕಾರ ವಿದ್ಯುತ್ ಮಸೂದೆ, ಅಗತ್ಯ ವಸ್ತುಗಳ ತಿದ್ದುಪಡಿ ಮಸೂದೆ, ಕೃಷಿ, ಗುತ್ತಿಗೆ ಬೀಜ, ಅಗತ್ಯ
ಹಕ್ಕುಗಳ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ಖಂಡನೀಯವಾಗಿದೆ. ಕೇಂದ್ರ ಸರ್ಕಾರ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಶೇ 95ರಷ್ಟು ಅನುದಾನಗಳನ್ನು ಕಡಿತ ಮಾಡಿದೆ. ಇದರಿಂದ ಗ್ರಾಮ ಪಂಚಾಯಿತಿ ನೌಕರರಿಗೆ ಅನ್ಯಾಯ ಆಗಿದೆ’ ಎಂದು ದೂರಿದರು.

‘ಎಲ್ಲಾ ಗ್ರಾಮ ಪಂಚಾಯಿತಿ ನೌಕರರಿಗೆ ಪಿಂಚಣಿ ನೀಡಬೇಕು. ₹21 ಸಾವಿರ ಕನಿಷ್ಠ ವೇತನ ವಿತರಿಸಬೇಕು. ವಿವಿಧ ಬೇಡಿಕೆಗಳನ್ನು ಈಡೇರಿಸಿ ಎಲ್ಲಾ ತಾಲ್ಲೂಕು ಪಂಚಾಯಿತಿಗಳ ಮುಂದೆ ನವೆಂಬರ್ 26 ರಂದು ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ವೆಂಕಟರಾಮಯ್ಯ, ಉಪಾಧ್ಯಕ್ಷ ಶ್ರೀನಿವಾಸ್, ಈಶ್ವರಪ್ಪ, ಸಹಕಾರ್ಯದರ್ಶಿ ಸತ್ಯನಾರಾಯಣ, ಆಂಜಿನಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.