ADVERTISEMENT

ಗ್ರಾಮೀಣ ಆಶ್ರಯ ನಿವೇಶನ ಹಂಚಿಕೆ: ಬಂಡೆಗಳ ಮೇಲೆ ಮನೆ ಕಟ್ಟಬೇಕಾದ ಪರಿಸ್ಥಿತಿ!

ಮರಸನಹಳ್ಳಿಯಲ್ಲಿ 66 ಫಲಾನುಭವಿಗಳಿಗೆ ಜುಲೈನಲ್ಲಿ ಸಚಿವರಿಂದ ಹಕ್ಕುಪತ್ರ ವಿತರಣೆ

ಡಿ.ಎಂ.ಕುರ್ಕೆ ಪ್ರಶಾಂತ
Published 24 ಆಗಸ್ಟ್ 2021, 3:36 IST
Last Updated 24 ಆಗಸ್ಟ್ 2021, 3:36 IST
ಮರಸನಹಳ್ಳಿಯಲ್ಲಿ ಆಶ್ರಯ ಯೋಜನೆಯಡಿ ಫಲಾನುಭವಿಗಳಿಗೆ ನೀಡಿರುವ ನಿವೇಶನಗಳು
ಮರಸನಹಳ್ಳಿಯಲ್ಲಿ ಆಶ್ರಯ ಯೋಜನೆಯಡಿ ಫಲಾನುಭವಿಗಳಿಗೆ ನೀಡಿರುವ ನಿವೇಶನಗಳು   

ಚಿಕ್ಕಬಳ್ಳಾಪುರ: ಸಮತಟ್ಟು ಇಲ್ಲದ ಬಂಡೆಗಳು. ಬಂಡೆಗಳ ಸಂದುಗಳಲ್ಲಿ ಹುಲ್ಲು. ಈ ಬಂಡೆಗಳ ಮೇಲೆ ಅಳತೆಯ ಗುರುತುಕಲ್ಲುಗಳು...ಈ ಚಿತ್ರಣ ಕಂಡು ಬರುವುದು ತಾಲ್ಲೂಕಿನ ಹಾರೋಬಂಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಸನಹಳ್ಳಿಯಲ್ಲಿ.

ಮರಸನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 7 ಹಾದು ಹೋಗಿದೆ. ಈ ಹೆದ್ದಾರಿ ಬದಿಯಲ್ಲಿ ಗ್ರಾಮೀಣ ಆಶ್ರಯ ನಿವೇಶನ ಯೋಜನೆಯಡಿ ಫಲಾನುಭವಿಗಳಿಗೆ ನಿವೇಶನ ಹಂಚಲಾಗಿದೆ. 66 ಫಲಾನುಭವಿಗಳಿಗೆ ಜುಲೈನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ಹಕ್ಕುಪತ್ರ ವಿತರಿಸಿದ್ದರು.

ರಾಷ್ಟ್ರೀಯ ಹೆದ್ದಾರಿ ಸಮೀಪವೇ ನಿವೇಶನಗಳನ್ನು ನೀಡಿರುವುದು ಫಲಾನುಭವಿಗಳಲ್ಲಿ ಸಂತಸಕ್ಕೆ ಕಾರಣವೂ ಆಗಿದೆ. ಆದರೆ ಈ ನಿವೇಶನಗಳನ್ನು ನೋಡಿದರೆ ಮನೆ ನಿರ್ಮಾಣಕ್ಕೆ ಇವು ಸೂಕ್ತವೇ ಎನಿಸುತ್ತದೆ. ಸಮತಟ್ಟಾಗಿಲ್ಲದ ಬಂಡೆಗಳ ಮೇಲೆ ಮನೆ ನಿರ್ಮಾಣಕ್ಕೆ ಮುಂದಾದರೆ ಖರ್ಚು ಸಹ ಅಧಿಕವಾಗುತ್ತದೆ ಎನಿಸುತ್ತದೆ.

ADVERTISEMENT

ಸಾಮಾನ್ಯವಾಗಿ ಆಶ್ರಯ ಯೋಜನೆಯಡಿ ಸೂರು ಪಡೆಯುವವರು ಬಡವರೇ ಆಗಿರುತ್ತಾರೆ. ಆರ್ಥಿಕವಾಗಿ ಸಬಲರಲ್ಲದ ಕಾರಣದಿಂದಲೇ ಆಶ್ರಯ ಮನೆ, ನಿವೇಶನಗಳನ್ನು ನೀಡಲಾಗುತ್ತದೆ. ಇಂತಹವರು ಸರ್ಕಾರದ ಆಶ್ರಯ ಯೋಜನೆಯಡಿ ಅನುದಾನ ಪಡೆದು ಮನೆ ಸಹ ನಿರ್ಮಿಸಿಕೊಳ್ಳುವರು. ಆದರೆ ಇಲ್ಲಿನ ಬಂಡೆಗಳ ಮೇಲೆ ಮನೆ ನಿರ್ಮಾಣಕ್ಕೆ ಮುಂದಾದರೆ ಖರ್ಚು ಖಚಿತವಾಗಿ ಅಧಿಕವಾಗುತ್ತದೆ.

ಬಂಡೆ ಕಾರಣದಿಂದ ತಿರಸ್ಕೃತ: ಈಗಾಗಲೇ ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಶ್ರಯ ವಸತಿ ಯೋಜನೆಯಡಿ ನಿವೇಶ ನೀಡಲು ಗುರುತಿಸಿರುವ 40.34 ಎಕರೆ ಜಮೀನು ವಸತಿಗೆ ಯೋಗ್ಯವಾಗಿಲ್ಲ ಎಂದು ಮತ್ತೆ ಭೂಮಿ ಮಂಜೂರಿಗೆ ಕೋರಲಾಗಿದೆ. ಚಿಕ್ಕಬಳ್ಳಾಪುರ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ನಿವೇಶನ ನೀಡಲು ಗುರುತಿಸಿದ್ದ ಕಳವಾರ ಗ್ರಾಮದಲ್ಲಿ 8 ಎಕರೆ ಜಮೀನು ಬಂಡೆಗಳಿಂದ ಆವೃತ್ತವಾಗಿದೆ.

ಗುಡಿಬಂಡೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಬ್ರಾಹ್ಮಣರಹಳ್ಳಿ ರಸ್ತೆಯಲ್ಲಿ ಗುರುತಿಸಿದ್ದ 7.34 ಎಕರೆಯೂ ಬಂಡೆಯಿಂದ ಕೂಡಿದೆ. ಆದ್ದರಿಂದ ಬೇರೆ ಕಡೆ ಜಾಗ ಗುರುತಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಮರಸನಹಳ್ಳಿಯಲ್ಲಿ ಮಾತ್ರ ಫಲಾನುಭವಿಗಳಿಗೆ ಬಂಡೆಗಳನ್ನು ಹೊಂದಿರುವ ನಿವೇಶನಗಳನ್ನು ನೀಡಲಾಗಿದೆ.

‘ಇದು ಆರೇಳು ವರ್ಷದ ಯೋಜನೆ. ನಾನು ಈ ಪಂಚಾಯಿತಿಗೆ ಬಂದು ಎರಡರಿಂದ ಮೂರು ವರ್ಷಗಳಾಗಿದೆ. ಈ ಹಿಂದಿನ ಪಿಡಿಒ ಇದ್ದಾಗಲೇ ಈ ಯೋಜನೆ ಒಂದು ಹಂತದಲ್ಲಿ ಇತ್ತು’ ಎಂದು ಹಾರೋಬಂಡೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ತಿಳಿಸಿದರು.

ಬಂಡೆಗಳ ಕಾರಣ ಮನೆಗಳ ಬಳಿಯೇ ಶೌಚಾಲಯದ ಪಿಟ್‌ಗಳನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಶೌಚಾದ ಪಿಟ್‌ನ ಮತ್ತೊಂದು ಕಡೆ ನಿರ್ಮಿಸಿ ಅಲ್ಲಿಗೆ ಎಲ್ಲ ಮನೆಗಳಿಂದ ಪೈಪ್‌ಗಳ ಸಂಪರ್ಕಕೊಡಬೇಕು ಎಂದು ಹೇಳಿದರು.

ಮನೆಕಟ್ಟಲು ಸಮಸ್ಯೆ ಇಲ್ಲ:ಬಂಡೆಯ ಮೇಲೆ ಮನೆ ಕಟ್ಟಿಕೊಳ್ಳುವರು ಸಮಸ್ಯೆ ಇಲ್ಲ. ತಾಲ್ಲೂಕಿನ ಕೆಲವು ಕಡೆಗಳಲ್ಲಿ ಈಗಾಗಲೇ ಮನೆಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಫಲಾನುಭವಿಗಳು ಸಹ ಯಾರೂ ಕಲ್ಲುಬಂಡೆ ಇದೆ ಬೇಡ ಎಂದಿಲ್ಲ. ಉಳಿಕೆ ನಿವೇಶನಗಳನ್ನು ನೀಡುವಂತೆ ಒತ್ತಾಯವೂ ಇದೆ ಎಂದು ಹಾರೋಬಂಡೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.