ADVERTISEMENT

ಗೌರಿಬಿದನೂರು: ' ದ್ರಾಕ್ಷಿ‌ ಬೆಳೆಗಾರರ ಹಿತ ಕಾಪಾಡಲು ಬದ್ಧ'

ಮೂರು ದಿನಗಳ ರಾಜ್ಯಮಟ್ಟದ ಪಿನಾಕಿನಿ ದ್ರಾಕ್ಷಾರಸ ಉತ್ಸವ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 5:30 IST
Last Updated 25 ಫೆಬ್ರುವರಿ 2023, 5:30 IST
ಗೌರಿಬಿದನೂರಿನಲ್ಲಿ ಶುಕ್ರವಾರ ಆರಂಭವಾದ ಪಿನಾಕಿನಿ ದ್ರಾಕ್ಷಾರಸ ಉತ್ಸವದಲ್ಲಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಅವರಿಗೆ ದ್ರಾಕ್ಷಾರಸದ ರುಚಿ ತೋರಿಸಿದ ಮಂಡಳಿ ಅಧ್ಯಕ್ಷ ಎನ್.ಎಂ.ರವಿನಾರಾಯಣರೆಡ್ಡಿ
ಗೌರಿಬಿದನೂರಿನಲ್ಲಿ ಶುಕ್ರವಾರ ಆರಂಭವಾದ ಪಿನಾಕಿನಿ ದ್ರಾಕ್ಷಾರಸ ಉತ್ಸವದಲ್ಲಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಅವರಿಗೆ ದ್ರಾಕ್ಷಾರಸದ ರುಚಿ ತೋರಿಸಿದ ಮಂಡಳಿ ಅಧ್ಯಕ್ಷ ಎನ್.ಎಂ.ರವಿನಾರಾಯಣರೆಡ್ಡಿ   

ಗೌರಿಬಿದನೂರು: ರಾಜ್ಯ ತೋಟಗಾರಿಕೆ ಇಲಾಖೆ ಹಾಗೂ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿ ವತಿಯಿಂದ ನಗರದ ಪಿನಾಕಿನಿ ನದಿದಂಡೆಯಲ್ಲಿ ಆಯೋಜಿಸಿದ್ದ ಮೂರು ದಿನಗಳ ರಾಜ್ಯ ಮಟ್ಟದ ‘ಪಿನಾಕಿನಿ ದ್ರಾಕ್ಷಾರಸ ಉತ್ಸವ - 2023'ಗೆ ಶುಕ್ರವಾರ ಚಾಲನೆ ನೀಡಲಾಯಿತು.

ಉತ್ಸವದಲ್ಲಿ ನಾಗರಿಕರಿಗೆ ಉಚಿತ ವೈನ್ ಸವಿಯಲು ಅವಕಾಶವಿದೆ. ಶೇ10ರಷ್ಟು ರಿಯಾಯಿತಿ ದರದಲ್ಲಿ ವೈನ್ ಖರೀದಿಸಬಹುದಾಗಿದೆ. ಜತೆಗೆ ಆಕರ್ಷಕ ಆಹಾರ ಮಳಿಗೆ ತೆರೆಯಲಾಗಿದೆ. ಮೂರು ದಿನಗಳ ಕಾಲ ವೈನ್ ಜತೆಗೆ ಆಹಾರೋತ್ಸವದಲ್ಲೂ ಭಾಗಿಯಾಗಬಹುದಾಗಿದೆ. ಮಕ್ಕಳು ಖುದ್ದು ದ್ರಾಕ್ಷಿ ತುಳಿದು ದ್ರಾಕ್ಷಿ ಸ್ಟಾಂಪಿಂಗ್ ಅನುಭವ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಮೂರು ದಿನಗಳ ಕಾಲ ಸಂಗೀತ ಮತ್ತು ಮನೋರಂಜನೆ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ.

ಶಾಸಕ ಎಚ್.ಎನ್. ಶಿವಶಂಕರ ರೆಡ್ಡಿ, ದ್ರಾಕ್ಷಾರಸ ಉತ್ಸವ ಅತ್ಯಂತ ವೈಶಿಷ್ಟ್ಯತೆಯಿಂದ ಕೂಡಿದೆ. ಇದು ದ್ರಾಕ್ಷಿ ಬೆಳೆಗಾರರಿಗೆ ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹ ಸಿಗಲಿದೆ. ಬಯಲುಸೀಮೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಗೆ ಉತ್ತಮ ಅವಕಾಶವಿದೆ. ಇದನ್ನು ರೈತರು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕೆಂದು ಹೇಳಿದರು.

ADVERTISEMENT

ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷ ಎಂ.ಎನ್. ರವಿನಾರಾಯಣರೆಡ್ಡಿ ಮಾತನಾಡಿ, ಗೌರಿಬಿದನೂರಿನಲ್ಲಿ ಮೊದಲ ಬಾರಿಗೆ ಉತ್ಸವ ಆಯೋಜಿಸಲಾಗಿದೆ. ರೈತರು, ಸಾರ್ವಜನಿಕರು ಮತ್ತು ವೈನ್ ಉತ್ಪಾದಕರೊಂದಿಗೆ ಸಂವಾದಕ್ಕೆ ಇದು ಉತ್ತಮ ವೇದಿಕೆಯಾಗಿದೆ ಎಂದರು.

ಪ್ರಸಕ್ತ ಅಬಕಾರಿ ವರ್ಷಕ್ಕಿಂತ ಮುಂದಿನ ಅಬಕಾರಿ ವರ್ಷದಲ್ಲಿ ಶೇ20ರಷ್ಟು ಹೆಚ್ಚು ವಹಿವಾಟು ಬರುವ ನಿರೀಕ್ಷೆಯಿದೆ. ಈ ವರ್ಷ ₹457ಕೋಟಿ ವಹಿವಾಟಿದ್ದು, ಬರುವ ವರ್ಷ ₹500ಕೋಟಿ ದಾಟಲಿದೆ. ವೈನ್ ದರ ಕಳೆದ ಏಳೆಂಟು ವರ್ಷಗಳಿಂದ ಏರಿಕೆಯಾಗಿಲ್ಲ. ಎಲ್ಲರ ಆರೋಗ್ಯ ಹಾಗೂ ದ್ರಾಕ್ಷಿ ಬೆಳೆಗಾರರ ಹಿತದೃಷ್ಟಿಯಿಂದ ಈ ಉತ್ಸವ ಆಯೋಜಿಸಲಾಗಿದೆ ಎಂದು ಹೇಳಿದರು.

ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷ ಎನ್.ಎಂ.ರವಿನಾರಾಯಣರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು, ಪ್ರಧಾನ ವ್ಯವಸ್ಥಾಪಕ ಎಸ್.ಆರ್.ಸರ್ವೇಶ್ ಕುಮಾರ್, ಅಭಿಲಾಷ್ ಕಾರ್ತಿಕ್, ವೈನ್ ಬೋರ್ಡ್ ನಿರ್ದೇಶಕ ಲೋಕೇಶ್ ಗೌಡ, ಗ್ರೇಡ್ 2 ತಹಶೀಲ್ದಾರ್ ಆಶಾ, ನಗರಸಭೆ ಅಧ್ಯಕ್ಷೆ ಎಸ್.ರೂಪಾ, ಸದಸ್ಯರಾದ ಡಿ.ಎನ್.ವೆಂಕಟರೆಡ್ಡಿ, ತೋಟಗಾರಿಕೆ ಇಲಾಖೆ ಮಂಜುನಾಥ್ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.