ADVERTISEMENT

ಶಿಡ್ಲಘಟ್ಟ | ಜಿಎಸ್‌ಟಿ ಇಳಿಕೆಯಿಂದ ಅನುಕೂಲ: ಸಂಸದ ಮಲ್ಲೇಶ್ ಬಾಬು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 7:27 IST
Last Updated 8 ಸೆಪ್ಟೆಂಬರ್ 2025, 7:27 IST
 ಎಂ.ಮಲ್ಲೇಶ್ ಬಾಬು
 ಎಂ.ಮಲ್ಲೇಶ್ ಬಾಬು   

ಶಿಡ್ಲಘಟ್ಟ: ಜನ ಸಾಮಾನ್ಯರಿಗೆ ಆಗುತ್ತಿದ್ದ ಆರ್ಥಿಕ ತೊಂದರೆ, ಹೊರೆ ತಪ್ಪಿಸಲು ಎಲ್ಲ ಸ್ಲ್ಯಾಬ್‌ಗಳನ್ನು ರದ್ದುಮಾಡಿ ಕೇವಲ 5 ಮತ್ತು 18ರ ಜಿಎಸ್‌ಟಿ ಸ್ಲ್ಯಾಬ್‌ ತರುವುದರಿಂದ ಜನ ಸಾಮಾನ್ಯರಿಗೆ ಅನುಕೂಲ ಆಗಲಿದೆ ಎಂದು ಕೋಲಾರ ಕ್ಷೇತ್ರದ ಸಂಸದ ಎಂ.ಮಲ್ಲೇಶ್ ಬಾಬು ಹೇಳಿದರು.

ಶಿಡ್ಲಘಟ್ಟದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ರಾಜ್ಯಗಳ ಮುಖ್ಯಮಂತ್ರಿ, ಹಣಕಾಸು ಮಂತ್ರಿ ಹಾಗೂ ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ ಮಾಡಿ ಕೇಂದ್ರ ಸರ್ಕಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ತೀರ್ಮಾನವನ್ನು ಕೈಗೊಂಡಿದ್ದಾರೆ ಎಂದರು.

ಜನ ಸಮಾನ್ಯರು ದಿನನಿತ್ಯ ಬಳಸುವ ಆಹಾರ ಪದಾರ್ಥ, ಕ್ಯಾನ್ಸರ್ ಇನ್ನಿತರೆ ರೋಗದ ಔಷಧಿ, ಜೀವ ವಿಮೆಯ ಮೇಲಿನ ತೆರಿಗೆ ಇಳಿಯುವುದರಿಂದ ಬಡ ಮಧ್ಯಮ ವರ್ಗಕ್ಕೆ ಅನುಕೂಲ ಆಗಲಿದೆ ಎಂದರು.

ADVERTISEMENT

ಬಿಜಿಎಂಎಲ್‌ ನ 5 ಸಾವಿರ ಎಕರೆಯನ್ನು ಲ್ಯಾಂಡ್ ಬ್ಯಾಂಕ್ ಮಾಡಿ ಅಲ್ಲಿ ಕಾರ್ಖಾನೆಗಳನ್ನು ಆರಂಭಿಸುವವರಿಗೆ ಕಡಿಮೆ ಬೆಲೆಗೆ ಜಮೀನು ಹಾಗೂ ಇತರೆ ಮೂಲ ಸೌಕರ್ಯ ಒದಗಿಸಿಕೊಡುವ, 200-300 ಎಕರೆಯಲ್ಲಿ ಟೌನ್‌ಶಿಪ್ ನಿರ್ಮಾಣಕ್ಕೂ ಯೋಚಿಸಲಾಗಿದೆ ಎಂದು ಹೇಳಿದರು.

ನ್ಯಾಷನಲ್ ಮಿನರಲ್ ಡೆವಲೆಪ್‌ ಮೆಂಟ್ ಕಾರ್ಫೋರೇಷನ್ (ಎನ್‌ಎಂಡಿಸಿಎಲ್) ಮತ್ತು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಈ ಎರಡೂ ಕೂಡ ಕೇಂದ್ರ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧೀನದಲ್ಲಿ ಬರಲಿದೆ. ಅವುಗಳಿಂದ ಲ್ಯಾಂಡ್ ಬ್ಯಾಂಕ್ ಮಾಡಲು ಮನವಿ ಮಾಡಿದ್ದೇನೆ. ಕಾರ್ಖಾನೆಗಳು ಆರಂಭಿಸಲು ಕೆಐಎಡಿಬಿಯಿಂದ ಜಮೀನಿಗಾಗಿ ಕೋಟಿ ಕೋಟಿ ಹಣ ಕೊಡಬೇಕಾಗುತ್ತದೆ. ಆದರೆ ನಾವು ಕಡಿಮೆ ಬೆಲೆಗೆ ಜಮೀನು ಒದಗಿಸಿಕೊಡುವ ಕೆಲಸ ಮಾಡಲಿದ್ದೇವೆ. ಇದರಿಂದ ಕಾರ್ಖಾನೆ ಆದಲ್ಲಿ ಉದ್ಯೋಗ ಸೃಷ್ಟಿಯಾಗಿ ಆರ್ಥಿಕ ಅಭಿವೃದ್ದಿ ಆಗಲಿದೆ ಎಂದರು.

ಕೃಷ್ಣಾ ನದಿ ನೀರು: ಆಂಧ್ರದ ಮದನಪಲ್ಲಿಯಿಂದ ಕೃಷ್ಣಾ ನದಿ ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿವೆ. ಮುಂದಿನ ಸೋಮವಾರ ಜೆಜೆಎಂ ಮತ್ತು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌, ಅಧಿಕಾರಿಗಳ ತಂಡ ಮದನಪಲ್ಲಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ವರದಿ ತಯಾರಿಸಿ ನೀಡಲು ಸೂಚಿಸಿದ್ದೇನೆ ಎಂದರು.

ರಾಜ್ಯ ಸಭೆ ಸದಸ್ಯ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಶಿಡ್ಲಘಟ್ಟ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ಅವರೊಂದಿಗೆ ಭೇಟಿ ಮಾಡಿ ಕೃಷ್ಣ ನದಿ ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಹರಿಸುವ ಸಂಬಂಧ ಮಾತುಕತೆ ಮಾಡಿದ್ದೆವು. ಕೇಂದ್ರದ ಜಲ ಸಂಪನ್ಮೂಲ ಸಚಿವರೊಂದಿಗೂ ಈ ಬಗ್ಗೆ ಚರ್ಚಿಸಿ ಮನವಿ ಮಾಡಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಈಗಾಗಲೆ ಕೃಷ್ಣ ನದಿ ನೀರು ಮದನಪಲ್ಲಿಗೆ ಹರಿದುಬಂದಿದೆ. ಅಲ್ಲಿ ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಮಳೆಗಾಲದ 3 ತಿಂಗಳ ಕಾಲ ಪಂಪ್ ಮಾಡುವ ಮೂಲಕ ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಹರಿಸಿಕೊಳ್ಳುವ ಕೆಲಸ ಮುಂದಿನ ದಿನಗಳಲ್ಲಿ ಕಾರ್ಯಗತಕ್ಕೆ ಬರಲಿದೆ. ಸಂಬಂಧಿಸಿದ ಎಲ್ಲರೂ ಸಹಕಾರ ನೀಡಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.